ಚಿಪ್ಪು ಹಂದಿ ಬೇಟೆಗೆ ಹೊಂಚು: 7 ಮಂದಿ ಸೆರೆ
ಚಿಕ್ಕಮಗಳೂರು: ಭದ್ರಾ ಅಭಯಾರಣ್ಯದ ಲಕ್ಕವಳ್ಳಿಯ ವಲಯದಲ್ಲಿ ಇರುವ ಕುಂದೂರು ಉಪ ವಲಯದ ವ್ಯಾಪ್ತಿಯಲ್ಲಿ ಚಿಪ್ಪು ಹಂದಿ ಬೇಟೆಯಾಡಲು ಹೊಂಚು ಹಾಕುತ್ತಿದ್ದ ಆಂಧ್ರಪ್ರದೇಶ ಮೂಲದ 7 ಜನರನ್ನು ಅರಣ್ಯ ಇಲಾಖೆಯವರು ಗುರುವಾರ ಬಂಧಿಸಿದ್ದಾರೆ.
ಬಂಧಿತರಿಂದ ಒಂದು ಜೀವಂತ ಉಡ, ಪಿಕಾಸಿ, ಗುದ್ದಲಿ, ಹಾರೆ ಸೇರಿದಂತೆ ಇತರೆ ಸಲಕರಣೆಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ಭದ್ರಾ ವನ್ಯಜೀವಿ ವಿಭಾಗದ ಸಿಬ್ಬಂದಿಗಳು ದಾಳಿ ನಡೆಸಿ, ಆಂಧ್ರಪ್ರದೇಶ ಮೂಲದವರಾದ ಶ್ರೀನಿವಾಸನ್, ಮುರುಗೇಶ, ಗೋವಿಂದಪ್ಪ, ಕನಕರಾಜು, ವೆಂಕಟೇಶ್ ಮತ್ತು ಸೆಲ್ವಾ ಎಂಬುವವರನ್ನು ಬಂಧಿಸಿ, ತರೀಕೆರೆ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು, ನ್ಯಾಯಾಲಯವು ಅವರಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿಪ್ಪುಹಂದಿಗಳ ಚರ್ಮಕ್ಕೆ ಬೇಡಿಕೆಯಿದೆ. ಅವುಗಳನ್ನು ಕಳ್ಳಸಾಗಾಣೆ ಮಾಡಲು ವ್ಯವಸ್ಥಿತ ಜಾಲ ಇದಾಗಿದೆ. ಇವರ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅನ್ವಯ ಪ್ರಕರಣ ದಾಖಲಾಗಿದೆ. ಕಳೆದ ವರ್ಷವೂ ಕೂಡ ಇದೇ ಸಮಯದಲ್ಲಿ ತಮಿಳುನಾಡು ಮೂಲದ ಅಂತರ್ ರಾಜ್ಯ ಚಿಪ್ಪುಹಂದಿ ಬೇಟೆಗಾರರನ್ನು ಲಕ್ಕವಳ್ಳಿ ವಲಯದಲ್ಲಿ ಹಿಡಿದು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಈ ಜಾಲದ ಹಿಂದೆ ವ್ಯವಸ್ಥಿತವಾದ ಸಂಚಿದ್ದು ಚಿಪ್ಪು ಹಂದಿ ಚರ್ಮಕ್ಕಾಗಿ ಇವರಿಗೆ ಹಣ ನೀಡಿ ಚಿಪ್ಪುಹಂದಿ ತರಲು ಆಂಧ್ರಮೂಲಕದ ವ್ಯಕ್ತಿಯೊಬ್ಬರು ಕಳುಹಿಸಿದ್ದಾರೆ ಎಂದು ಮಾಹಿತಿ ನೀಡಲಾಗಿದೆ.
ಈ ಸಂಬಂಧ ಇಲಾಖೆ ತನಿಖೆ ನಡೆಸುತ್ತಿದೆ. ಕಾರ್ಯಾಚರಣೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್, ವಲಯ ಅರಣ್ಯಾಧಿಕಾರಿ ಬಸವರಾಜಪ್ಪ, ಉಪ ವಲಯಾರಣ್ಯಾಧಿಕಾರಿ ಶಿವರಾಜ್, ರಂಗನಾಥ್, ಅರಣ್ಯ ರಕ್ಷಕರಾದ ಕುಮಾರ್, ನಾಗರಾಜ್, ಲೋಹಿತ್, ಮಂಜಯ್ಯ, ಯೋಗರಾಜ್, ಪುರುಷೋತ್ತಮ್, ಲಿಂಗರಾಜ್, ರಾಜೇಂದ್ರ, ಧರಣಪ್ಪ ಮತ್ತು ವಾಹನ ಸಂಚಾಲಕ ಶಾಂತಕುಮಾರ್ ಭಾಗವಹಿಸಿದ್ದರು.
ಅಭಿನಂದನೆ: ಅಂತರ ರಾಜ್ಯ ಚಿಪ್ಪುಹಂದಿ ಬೇಟೆಗಾರರ ಬಂಧಿಸುವಲ್ಲಿ ಸಿಬ್ಬಂದಿಗಳು ಮತ್ತು ಇಲಾಖೆಯನ್ನು ವೈಲ್ಡ್ ಕ್ಯಾಟ್-ಸಿ ತಂಡ ಅಭಿನಂದಿಸಿದೆ. ಜಿಲ್ಲೆಯ ಯಾವುದೇ ಅರಣ್ಯ ಭಾಗದಲ್ಲಾದರೂ ಇತರ ಪ್ರದೇಶಗಳಲ್ಲಾದರೂ ಬೀಡು ಬಿಟ್ಟಿರುವ ಚಿಪ್ಪುಹಂದಿ ಬೇಟೆಗಾರರ ವಿರುದ್ಧ ಸಮರ ಸಾರಬೇಕೆಂದು ಹೇಳಿದ್ದಾರೆ. ಇದರಲ್ಲಿ ಪೊಲೀಸ್ ಹಾಗೂ ಅರಣ್ಯ ಸಂಚಾರಿ ದಳದವರು ಕೂಡಾ ಮುತುವರ್ಜಿ ವಹಿಸಿ ಅಂತರ ರಾಜ್ಯ ಬೇಟೆಗಾರರನ್ನು ಬಂಧಿಸಿ ವನ್ಯಜೀವಿಗಳನ್ನು ಉಳಿಸಬೇಕೆಂದು ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

