ಚಿಕ್ಕಮಗಳೂರು

ವಾಣಿಜ್ಯ ಕಟ್ಟಡ ಕಂದಾಯ ಶೇ.15 ಹೆಚ್ಚಳ

Published On :

ಚಿಕ್ಕಮಗಳೂರು: ನಗರದ ವಾಣಿಜ್ಯ ಮತ್ತು ವಸತಿ ಕಟ್ಟಡಗಳಿಗೆ ಪ್ರಸಕ್ತ ಸಾಲಿನಲ್ಲಿ ಶೇ.15ರಷ್ಟು ಕಂದಾಯವನ್ನು ಹೆಚ್ಚಳ ಮಾಡಲಾಗಿದೆ ಎಂದು ನಗರಸಭಾಧ್ಯಕ್ಷ ಕೆ.ಎಸ್. ಪುಷ್ಪರಾಜ್ ಹೇಳಿದ್ದಾರೆ.
ಪ್ರತಿ 3 ವರ್ಷಕ್ಕೊಮ್ಮೆ ತೆರಿಗೆಯನ್ನು ಪರಿಷ್ಕೃತಗೊಳಿಸಲಾಗುತ್ತಿದೆ. ರಾಜ್ಯ ಸರ್ಕಾರ ಈ ವರ್ಷದಲ್ಲಿ ಕನಿಷ್ಠ ಶೇ.15 ರಿಂದ ಗರಿಷ್ಠ ಶೇ.30 ರವರೆಗೆ ತೆರಿಗೆ ಹೆಚ್ಚಳ ಮಾಡಬೇಕೆಂದು ಆದೇಶ ಹೊರಡಿಸಿದೆ. ಜನರಿಗೆ ಹೊರೆ ಆಗಬಾರದು ಎಂಬ ಉದ್ದೇಶದಿಂದ ಎಲ್ಲಾ ಕಟ್ಟಡಗಳಿಗೆ ಶೇ.15ರಷ್ಟು ಕಂದಾಯ ಹೆಚ್ಚಳ ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.
ನಗರದಲ್ಲಿ ಇರುವ ಕಟ್ಟಡಗಳ ಪೈಕಿ, ವಾಣಿಜ್ಯ ಹಾಗೂ ವಸತಿ ಕಟ್ಟಡಗಳನ್ನು ಗುರುತಿಸುವ ಉದ್ದೇಶದಿಂದ ನಗರಸಭೆಯ ಅಧಿಕಾರಿಗಳ ತಂಡವನ್ನು ರಚನೆ ಮಾಡಲಾಗಿದೆ ಎಂದು ಹೇಳಿದರು.
ನಗರದ ಹೃದಯ ಭಾಗದಲ್ಲಿ ಇರುವ ಮಾಂಸ ಮಾರಾಟ ಅಂಗಡಿಗಳು ಒಂದೇ ಸೂರಿನಡಿ ಇರಬೇಕೆಂಬ ಉದ್ದೇಶದಿಂದ ವಾಣಿಜ್ಯ ಸಂಕೀರ್ಣವನ್ನು ನಿರ್ಮಾಣ ಮಾಡಲಾಗಿದೆ. ಇಲ್ಲಿ 42 ಮಳಿಗೆಗಳನ್ನು ತೆರೆಯಲಾಗಿದೆ. ಈ ಮಳಿಗೆಗಳನ್ನು ಈಗಾಗಲೇ ಹರಾಜು ಸಹ ಮಾಡಲಾಗಿದೆ. ಆದರೆ, ಹರಾಜ್‌ನಲ್ಲಿ ಮಳಿಗೆಗಳನ್ನು ಪಡೆದವರು ತಮ್ಮ ಅಂಗಡಿಗಳನ್ನು ಇಲ್ಲಿಗೆ ಸ್ಥಳಾಂತರ ಮಾಡಿಲ್ಲ. ಈಗಾಗಲೇ ಅಂಗಡಿಗಳನ್ನು ಸ್ಥಳಾಂತರ ಮಾಡಿರುವವರಿಗೆ ತುಂಬಾ ತೊಂದರೆ ಆಗುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಬಾಡಿಗೆದಾರರು, ತಮ್ಮ ತಮ್ಮ ಮಳಿಗೆಗಳಿಗೆ ಅಂಗಡಿಗಳನ್ನು ಸ್ಥಳಾಂತರ ಮಾಡಬೇಕೆಂದು ಜೂ.30 ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಹೇಳಿದರು.
ರಾಮನಹಳ್ಳಿ, ಕೆಂಪನಹಳ್ಳಿ, ಉಪ್ಪಳ್ಳಿ, ಹೌಸಿಂಗ್ ಬೋರ್ಡ್, ಹಿರೇಮಗಳೂರು, ಗವನಹಳ್ಳಿ ಹೊರತುಪಡಿಸಿ ಇನ್ನುಳಿದಂತೆ ನಗರದ ಹೃದಯ ಭಾಗದಲ್ಲಿ ಇರುವ ಎಲ್ಲಾ ಮಾಂಸ ಮಾರಾಟದ ಅಂಗಡಿಗಳು ವಾಣಿಜ್ಯ ಸಂಕಿರ್ಣಕ್ಕೆ ಸ್ಥಳಾಂತರಗೊಳಿಸಬೇಕೆಂದು ಸೂಚನೆ ನೀಡಲಾಗಿದೆ. ಇದಕ್ಕೆ ಮಳಿಗೆದಾರರು ಒಪ್ಪಿಗೆ ಸೂಚಿಸಿದ್ದಾರೆ. ಈ ಕ್ರಮದಿಂದಾಗಿ ಎಲ್ಲಾ ಅಂಗಡಿಗಳು ಒಂದೇ ಸೂರಿನಡಿ ಬರಲಿವೆ. ಇದರ ಜತೆಗೆ ಪರವಾನಗಿ ಇಲ್ಲದಿರುವ ಅಂಗಡಿಗಳನ್ನು ಪತ್ತೆ ಹಚ್ಚಿ ಅವುಗಳ ವಿರುದ್ಧ ಕ್ರಮಕ್ಕೆ ಅನುಕೂಲ ಆಗಲಿದೆ ಎಂದರು.
ನಗರದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಜಾರಿಯಲ್ಲಿದೆ. ಆದರೂ ಸಹ ಇತ್ತೀಚಿನ ದಿನಗಳಲ್ಲಿ ಕೆಲವು ಅಂಗಡಿಗಳಲ್ಲಿ ಮತ್ತೆ ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದೆ. ಅಂತಹ ಅಂಗಡಿಗಳನ್ನು ಪತ್ತೆ ಹಚ್ಚಿ, ಪ್ಲಾಸ್ಟಿಕ್ ಬ್ಯಾಗ್‌ಗಳನ್ನು ವಶಪಡಿಸಿಕೊಳ್ಳುವ ಜತೆಗೆ ಸಂಬಂಧಪಟ್ಟ ಅಂಗಡಿಗಳಿಗೆ ದಂಡ ವಿಧಿಸಿ ಕೇಸ್ ಹಾಕಲಾಗುವುದು ಎಂದು ಹೇಳಿದರು.
ನಗರದಲ್ಲಿ ಸಂಗ್ರಹವಾಗಿರುವ ಕಸವನ್ನು ಇಂದಾವರ ಗ್ರಾಮದ ಬಳಿ ವಿಲೇವಾರಿ ಮಾಡಲಾಗುತ್ತಿದೆ. ಆ ಕಸವನ್ನು ವಿಂಗಡಣೆ ಮಾಡಿ ಗೊಬ್ಬರವನ್ನಾಗಿ ಬಳಕೆ ಮಾಡಿಕೊಳ್ಳಲು ಆಂಧ್ರ ಪ್ರದೇಶದ ವೇಸ್ಟ್ ವೆಂಚರ್ ಪ್ರೈವೇಟ್ ಲಿಮಿಡೆಟ್ ಸಂಸ್ಥೆ ಮುಂದೆ ಬಂದಿದೆ. ಈ ಸಂಸ್ಥೆಯೊಂದಿಗೆ 5 ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಳ್ಳುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.
ಇಲ್ಲಿನ ರಸ್ತೆ ಮತ್ತು ಚರಂಡಿಗಳ ನಿರ್ಮಾಣಕ್ಕಾಗಿ ಈ ವರ್ಷದಲ್ಲಿ ರಾಜ್ಯ ಸರ್ಕಾರದಿಂದ ಎಸ್‌ಎಫ್‌ಸಿ ಯೋಜನೆಯಡಿ 3 ಕೋಟಿ ಹಾಗೂ 13ನೇ ಹಣಕಾಸು ಯೋಜನೆಯಡಿ 2.23 ಕೋಟಿ ಬಿಡುಗಡೆಯಾಗಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ನಗರಸಭಾ ಸದಸ್ಯರಾದ ದೇವರಾಜ್ ಶೆಟ್ಟಿ, ರವೀಂದ್ರನಾಥ್ ಪ್ರಭು, ಬಿಜೆಪಿ ನಗರಾಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.