ಆರ್ಥಿಕ ವರ್ಷಕ್ಕೆ ರು. 2580 ಕೋಟಿ ಸಾಲ ಯೋಜನೆ ಸಿದ್ಧ: ಜಿಪಂ ಸಿಇಒ
ಚಿಕ್ಕಮಗಳೂರು: ಕೇಂದ್ರ ಸರ್ಕಾರದ ನೀತಿಗೆ ಅನುಸಾರವಾಗಿ, ಪ್ರಸಕ್ತ ಆರ್ಥಿಕ ವರ್ಷಕ್ಕೆ ರು. 2580 ಕೋಟಿ ಸಾಲದ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಬಿ. ಕರುಣಾಕರ್ ತಿಳಿಸಿದರು.
ಕಾರ್ಪೋರೇಷನ್ ಬ್ಯಾಂಕಿನ ಸ್ವ ಉದ್ಯೋಗ ತರಬೇತಿ ಸಂಸ್ಥೆ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ಯಾಂಕಿಂಗ್ ಕ್ಷೇತ್ರದ ಪ್ರಸ್ತುತ ಸಾಲಿನ ಚಿಕ್ಕಮಗಳೂರು ಜಿಲ್ಲಾ ವಾರ್ಷಿಕ ಸಮಗ್ರ ಸಾಲ ಯೋಜನೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಯೋಜನೆಯ ಗಾತ್ರ ಕಳೆದ ವರ್ಷಕ್ಕಿಂತ ಶೇ. 25 ರಷ್ಟು ಹೆಚ್ಚಾಗಿದೆ. ಜಿಲ್ಲೆಯಲ್ಲಿ ಕೃಷಿ ಕ್ಷೇತ್ರಕ್ಕೆ ರು. 1697 ಕೋಟಿ ಗುರಿ ನಿಗದಿಪಡಿಸಲಾಗಿದ್ದು, ಇದು ಕಳೆದ ಸಾಲಿಗಿಂತ ಶೇ. 24ರಷ್ಟು ಹೆಚ್ಚಾಗಿದೆ. ಬೆಳೆ ಸಾಲಕ್ಕೆ ರು. 1077 ಕೋಟಿ, ಸಣ್ಣ ನೀರಾವರಿಗೆ ರು. 70 ಕೋಟಿ, ಭೂ ಅಭಿವೃದ್ಧಿಗೆ ರು. 123 ಕೋಟಿ, ಕೃಷಿ ಯಂತ್ರೋಪಕರಣಗಳಿಗೆ ರು. 85 ಕೋಟಿ, ತೋಟಗಾರಿಕಾ ಬೆಳೆಗಳಿಗೆ ರು. 198 ಕೋಟಿ ಸಾಲ ನೀಡುವ ಗುರಿ ನಿಗದಿಪಡಿಸಲಾಗಿದೆ ಎಂದು ಹೇಳಿದರು. ಸಣ್ಣ ಕೈಗಾರಿಕಾ ವಲಯಕ್ಕೆ ರು. 79 ಕೋಟಿ, ಗೃಹಸಾಲ ಮತ್ತು ಶೈಕ್ಷಣಿಕ ಸಾಲಗಳನ್ನು ಒಳಗೊಂಡಿರುವ ಇತರೆ ಆದ್ಯತಾ ವಲಯಕ್ಕೆ ರು. 576 ಕೋಟಿ ನಿಗಧಿಪಡಿಸಲಾಗಿದೆ ಎಂದರು.
ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಬಿ.ಎಸ್. ಮಹೇಶ್ವರಪ್ಪ ಮಾತನಾಡಿ, ತಾಲೂಕುವಾರು ಗುರಿಯಾಗಿ ಆದ್ಯತಾ ರಂಗಕ್ಕೆ ಚಿಕ್ಕಮಗಳೂರು ತಾಲೂಕಿಗೆ ರು. 768 ಕೋಟಿ, ಕಡೂರು ರು. 376 ಕೋಟಿ, ಕೊಪ್ಪ ರು. 257 ಕೋಟಿ, ಮೂಡಿಗೆರೆ ರು. 364 ಕೋಟಿ, ನರಸಿಂಹರಾಜಪುರ ರು. 167 ಕೋಟಿ, ಶೃಂಗೇರಿ ರು. 117 ಕೋಟಿ, ತರೀಕೆರೆ ರು. 303 ಕೋಟಿ ಎಂದು ನಿಗದಿಪಡಿಸಲಾಗಿದೆ ಎಂದು ವಿವರಿಸಿದರು.
ರಿಸರ್ವ್ ಬ್ಯಾಂಕಿನ ಬೆಂಗಳೂರಿನ ವ್ಯವಸ್ಥಾಪಕ ಬಿ.ವಿ.ಎಲ್. ನಾಗೇಶ್‌ಕುಮಾರ್, ಕಾರ್ಪೋರೇಷನ್ ಬ್ಯಾಂಕಿನ ಉಡುಪಿ ವಲಯ ಕಚೇರಿಯ ಉಪ ಮಹಾ ಪ್ರಬಂಧಕ ವಿ.ಎನ್. ಹೆಗಡೆ, ನಬಾರ್ಡ್‌ನ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕಿ ಅನುರಾಧ ನರಹರಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

