ಚಿಕ್ಕಮಗಳೂರು

ಆತಂಕ ಬೇಡ, ಅಡಕೆ ನಿಷೇಧವಿಲ್ಲ

Published On :

ಕ.ಪ್ರ. ವಾರ್ತೆ, ಕೊಪ್ಪ, ಮಾ.13
ಅಡಕೆ ಬೆಳೆಗಾರರು ಆತಂಕ ಪಡುವ ಅಗತ್ಯವಿಲ್ಲ. ಅಡಕೆ ನಿಷೇಧದ ಬಗ್ಗೆ ವ್ಯಾಪಕ ಅಪಪ್ರಚಾರ ನಡೆದಿದೆ. ಯಾವುದೇ ಕಾರಣಕ್ಕೂ ಅಡಕೆ ನಿಷೇಧ ಇಲ್ಲವೆಂದು ಸಂಸದ ಜಯಪ್ರಕಾಶ್ ಹೆಗ್ಡೆ ಹೇಳಿದರು.
ಇಲ್ಲಿನ ಪುರಭವನದಲ್ಲಿ ಗುರುವಾರ ಬ್ಲಾಕ್ ಕಾಂಗ್ರೆಸ್ ಏರ್ಪಡಿಸಿದ್ದ ಲೋಕಸಭಾ ಚುನಾವಣಾ ಪೂರ್ವಭಾವಿ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಪಕ್ಷವಾದ ಬಿಜೆಪಿಯ ಮುಖ್ಯಮಂತ್ರಿಗಳು, ಸಚಿವರು, ಶಾಸಕರಾದವರು ಅಡಕೆ ಬೆಳೆಗಾರರಿಗೆ ಯಾವುದೇ ಕಾರ್ಯಕ್ರಮ ರೂಪಿಸದೆ ಅಡಕೆ ನಿಷೇಧವಾಗುತ್ತೆ, ಬೆಳೆಗಾರರ ಬದುಕು ನಾಶವಾಗುತ್ತದೆ ಎಂಬ ಆತಂಕ ಹುಟ್ಟಿಸುತ್ತಿದ್ದಾರೆಂದು ದೂರಿದ ಅವರು, ಅಡಕೆ ನಿಷೇಧ ಪ್ರಸ್ತಾಪ ಕೇಂದ್ರ ಅಥವಾ ರಾಜ್ಯ ಸರ್ಕಾರದ ಮುಂದಿಲ್ಲ ಎಂದರು.
ಸತತ ಪ್ರಯತ್ನ: ತಮ್ಮ ಹಾಗೂ ರೈತ ಸಂಘದ ಒತ್ತಾಯ ಮೇರೆಗೆ ಅಡಕೆ ಹಳದಿ ಎಲೆ ರೋಗದ ಅಧ್ಯಯನಕ್ಕೆ ಕೇಂದ್ರ ಸರ್ಕಾರ ಘೋರಖ್ ಸಿಂಗ್ ನೇತೃತ್ವದ ಸಮಿತಿ ಕಳುಹಿಸಿತು. ಸಮಿತಿ ವರದಿ ಬಂದಾಗ ಅವೈಜ್ಞಾನಿಕ ಎಂದು ಟೀಕಿಸಿದ್ದ ಬಿಜೆಪಿ ಇಂದು ವರದಿ ಜಾರಿಗೆ ಆಗ್ರಹಿಸುತ್ತಿದೆ. ಸಾಲ ಮರು ಹೊಂದಾಣಿಕೆ, ಅಡಕೆ ಪುನಶ್ಚೇತನ, ಕೊಳೆರೋಗ ಪರಿಹಾರ ಹಾಗೂ ಪರ್ಯಾಯ ಬೆಳೆ ಪ್ರೋತ್ಸಾಹ ಸೇರಿದಂತೆ ಹಲವು ಘೋರಖ್ ಸಿಂಗ್ ವರದಿ ಶಿಫಾರಸುಗಳು ಅನುಷ್ಠಾನಗೊಂಡಿದ್ದು, ಸಾಲ ಮನ್ನಾ ಮಾತ್ರ ಬಾಕಿ ಇದೆ.  ಆ ನಿಟ್ಟಿನಲ್ಲಿ ಸತತ ಪ್ರಯತ್ನ ನಡೆದಿದೆ ಎಂದು ಹೇಳಿದರು.
ಅಡಕೆ ಬೆಳೆಗಾರರಿಗಾಗಿ ಕೇಂದ್ರ ಸರ್ಕಾರ 135 ಕೋಟಿ ಬಿಡುಗಡೆ ಮಾಡಿದ್ದನ್ನು ತೋಟಗಾರಿಕಾ ಇಲಾಖೆ ಪುನಶ್ಚೇತನ ಯೋಜನೆಗೆ ಬಳಸುವ ಪ್ರಸ್ತಾಪ ಮುಂದಿಟ್ಟಿದ್ದು ಬದಲಾಯಿಸಿ, ಸಹಾಯ ಧನ ನೀಡುವ ಪ್ರಸ್ತಾಪ ನೀಡಲು ಸೂಚಿಸಲಾಗಿದೆ. ಆಮದು ಅಡಕೆ ಮೇಲೆ ಪ್ರವೇಶ ತೆರಿಗೆ ಹೆಚ್ಚಿಸಿ ಅಡಕೆ ಧಾರಣೆ ಏರಿಕೆ ಸ್ಥಿರತೆಗೆ ಶ್ರಮಿಸಲಾಗಿದೆ ಎಂದರು.
ಜಿಪಂ ಮಾಜಿ ಅಧ್ಯಕ್ಷ ಟಿ.ಡಿ. ರಾಜೇಗೌಡ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಜನಪರ ಕಾರ್ಯಕ್ರಮ ಜಾರಿಗೆ ತಂದಿದೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ. ಶೋಭಿಂತ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ವಿಜಯಕುಮಾರ್, ಕಾಂಗ್ರೆಸ್ ಮುಖಂಡರಾದ ಅಸಗೋಡು ನಾಗೇಶ್, ಸಚಿನ್ ಮೀಗಾ, ಇಫ್ತೀಕರ್ ಆದಿಲ್, ಓಣಿತೋಟ ರತ್ನಾಕರ್, ಅಶೋಕ್ ನಾರ್ವೆ, ಮೀಗಾ ಚಂದ್ರಶೇಖರ್, ಪಪಂ ನೂತನ ಅಧ್ಯಕ್ಷೆ ಮಾಲತಿ ಸದಸ್ಯರಾದ ಸುಬ್ರಮಣ್ಯ ಶೆಟ್ಟಿ, ಹರೀಶ್ ಭಂಡಾರಿ, ವಿಜಯಕುಮಾರ್ ಮೊದಲಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.