ಚಿಕ್ಕಮಗಳೂರು

ಬಿಜೆಪಿ ಸರ್ಕಾರದಲ್ಲಿದ್ದ ಭ್ರಷ್ಟರ ಬಗ್ಗೆ ಮೋದಿ ಉತ್ತರಿಸಲಿ

Published On :

ಕ.ಪ್ರ. ವಾರ್ತೆ, ಕೊಪ್ಪ, ಮಾ.29
ಹಿಂದಿನ ಬಿಜೆಪಿ ಸರ್ಕಾರದಲ್ಲಿ ನಡೆದಿರುವ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಆಗಿನ 14 ಸಚಿವರ ವಿರುದ್ಧ ಹಾಕಿರುವ ಚಾರ್ಜ್‌ಶೀಟ್ ಬಗ್ಗೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಉತ್ತರ ನೀಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಸವಾಲೆಸೆದಿದ್ದಾರೆ.
ಇಲ್ಲಿನ ಲಾಲ್ ಬಹದ್ದೂರ್ ಶಾಸ್ತ್ರೀ ಕ್ರೀಡಾಂಗಣದಲ್ಲಿ ಶನಿವಾರ ಸಂಜೆ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಈ ದೇಶದಲ್ಲಿ ಅತಿ ಹೆಚ್ಚು ಬಂದು ಹೋಗಿರುವ ರಾಜ್ಯ ಕರ್ನಾಟಕ. ಅವರು ಇಲ್ಲಿಗೆ ಬಂದಾಗ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಯಡಿಯೂರಪ್ಪ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಜೈಲಿಗೆ ಹೋಗಿ ಬಂದರು. ಬಿಜೆಪಿ ಸರ್ಕಾರದಲ್ಲಿನ 14 ಸಚಿವರ ವಿರುದ್ಧ ಚಾರ್ಜ್‌ಶೀಟ್ ಹಾಕಲಾಗಿದೆ. ಇದಕ್ಕೆ ಅವರು ಮೊದಲು ಉತ್ತರ ನೀಡಬೇಕು ಎಂದು ಹೇಳಿದರು.
ಅಭಿವೃದ್ಧಿ ಕೆಲಸ: ಕಾಂಗ್ರೆಸ್ ಬಗ್ಗೆ ಟೀಕೆ ಮಾಡುವ ನೀವು ಈ ದೇಶದ ರಾಜಕೀಯ, ಕಾಂಗ್ರೆಸ್‌ನ ಚರಿತ್ರೆ ಓದುವುದನ್ನು ಕಲಿಯಿರಿ. ಹೆಚ್ಚಿನಾಂಶ 60 ವರ್ಷ ಈ ದೇಶವನ್ನು ಆಳಿದ್ದೇವೆ. ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದೇವೆ. 60ರ ದಶಕದಲ್ಲಿ ಊಟಕ್ಕೂ ಕಷ್ಟವಾಗಿತ್ತು. ಆಗ ಹಸಿರು ಕ್ರಾಂತಿ ಮಾಡಲಾಯಿತು. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 1ಕ್ಕೆ ಕೆಜಿ ಅಕ್ಕಿ ಮೂಲಕ ರಾಜ್ಯದಲ್ಲಿ ಹಸಿರು ಕ್ರಾಂತಿ ಮಾಡಿದ್ದಾರೆ ಎಂದು ಪ್ರತಿಪಕ್ಷಗಳನ್ನು ತರಾಟೆ ತೆಗೆದುಕೊಂಡರು.
ಮಾಹಿತಿ ಹಕ್ಕು: ಸಂವಿಧಾನಾತ್ಮಕ ಹಕ್ಕನ್ನು ಕಾಂಗ್ರೆಸ್ ಈ ದೇಶಕ್ಕೆ ನೀಡಿದೆ. ಪ್ರಧಾನಿ ಡಾ. ಮನಮೋಹನ್‌ಸಿಂಗ್ ಅವರು ಆರ್ಥಿಕ ವ್ಯವಸ್ಥೆ ಸರಿಪಡಿಸಿದ್ದಾರೆ. ಅಮೆರಿಕಾದ ಅಧ್ಯಕ್ಷ ಒಬಾಮ ಅವರು ಸಹ ನಮ್ಮ ದೇಶದ ಆರ್ಥಿಕ  ಸ್ಥಿತಿಯನ್ನು ಹೊಗಳಿದ್ದಾರೆ.
2013ರ ವಿಧಾನಸಭಾ ಚುನಾವಣೆಯಲ್ಲಿ ಅತ್ಯಂತ ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತು ಹಾಕಲು ಜನ ಕಾಂಗ್ರೆಸ್‌ಗೆ ಮನ್ನಣೆ ನೀಡಿದರು. ಕಳೆದ 9 ತಿಂಗಳಲ್ಲಿ ಕಾಂಗ್ರೆಸ್ ಪ್ರಗತಿಪರ, ಬಡವರ ಮತ್ತು ಅಭಿವೃದ್ಧಿಪರ ಸರ್ಕಾರ ಕೆಲಸ ಮಾಡಿದೆ. ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಯಲ್ಲಿ ರಾಜ್ಯ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ ಎಂದರು.
ನಾವು ಸುಳ್ಳು ಹೇಳಿ, ಮತ ಕೇಳಲು ಬಂದಿಲ್ಲ. ಮತ್ತೊಂದು ಬಾರಿ ಜಯಪ್ರಕಾಶ್ ಹೆಗ್ಡೆ ಅವರಿಗೆ ಈ ಕ್ಷೇತ್ರದ ಜನ ಅಶೀರ್ವಾದ ಮಾಡಬೇಕು ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಮುಖಂಡ ಇಬ್ರಾಹಿಂ, ಜಿಲ್ಲಾ ಉಸ್ತುವಾರಿ ಸಚಿವ ಕೆ. ಅಭಯಚಂದ್ರ ಜೈನ್, ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ವಿಧಾನಪರಿಷತ್ ಸದಸ್ಯರಾದ ಮೋಟಮ್ಮ, ಗಾಯತ್ರಿ ಶಾಂತೇಗೌಡ, ಮಾಜಿ ಸಚಿವ ಬಿ.ಎಲ್. ಶಂಕರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಡಿ.ಎಲ್. ವಿಜಯಕುಮಾರ್, ಮುಖಂಡರ ಬಿ. ರಾಮದಾಸ್,  ಎಂ.ಎಲ್. ಮೂರ್ತಿ, ಕೆ. ಮಹಮದ್, ಬಿ.ಸಿ. ಗೀತಾ, ಸಚಿನ್ ಮೀಗಾ, ವನಮಾಲಾ ಮೃತ್ಯುಂಜಯ, ಮಾಲತಿ ಉಪಸ್ಥಿತರಿದ್ದರು.
ಮೋದಿ ಹಿಟ್ಲರ್, ಮುಸಲೋನಿಯಂತೆ: ಟೀಕೆ
ಕ.ಪ್ರ.ವಾರ್ತೆ, ಕೊಪ್ಪ, ಮಾ.29
ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಷ್ಯಾದ ಮುಸಲೋನಿ ಹಾಗೂ ಜರ್ಮನಿಯ ಹಿಟ್ಲರ್‌ಗೆ ಹೋಲಿಕೆ ಮಾಡಿದ್ದಾರೆ.
ಮೋದಿ ಓರ್ವ ಫ್ಯಾಸಿಸ್ಟ್. ಸ್ವಜನಾಂಗವೇ ಶ್ರೇಷ್ಠ ಎಂಬುವುದರಲ್ಲಿ ನಂಬಿಕೆ ಇರುವವರು. ಬೇರೆ ಧರ್ಮಿಯರನ್ನು ತೀವ್ರವಾಗಿ ವಿರೋಧ ಮಾಡುವುದರಲ್ಲಿ ಮೊದಲಿಗರು ಎಂದು ಟೀಕಿಸಿದರು.
ಇಲ್ಲಿನ ಲಾಲ್ ಬಹದ್ದೂರ್‌ಶಾಸ್ತ್ರಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಆರ್‌ಎಸ್‌ಎಸ್, ಸಂಘ ಪರಿವಾರದ ತಂತ್ರ:  ಇದೊಂದು ಬಹಳ ಮಹತ್ವದ ಚುನಾವಣೆ. ಕಾರಣ, ಬಿಜೆಪಿಯವರು ಆರ್‌ಎಸ್‌ಎಸ್ ಸದಸ್ಯರಾಗಿರುವ ನರೇಂದ್ರ ಮೋದಿ ಅವರನ್ನು ಮುಂದಿಟ್ಟು ಈ ಚುನಾವಣೆ ಮಾಡುತ್ತಿದ್ದಾರೆ. ಮೋದಿ ಬಿಜೆಪಿಯಲ್ಲಿ ಹಿರಿಯ ನಾಯಕರಲ್ಲ. ಆ ಪಕ್ಷದಲ್ಲಿ ಅದ್ವಾನಿ, ರಾಜನಾಥ ಸಿಂಗ್, ಸುಷ್ಮಾ ಸ್ವರಾಜ್, ಅರುಣ್ ಜೆಟ್ಲಿ, ಮುರುಳಿ ಮನೋಹರ ಜೋಷಿ, ಜಸ್ವಂತ್ ಸಿಂಗ್ ಹೀಗೆ ಹಲವು ಹಿರಿಯ ನಾಯಕರು ಇದ್ದಾರೆ. ಇವರೆಲ್ಲರನ್ನೂ ಬಿಟ್ಟು, ಮೋದಿ ಅವರನ್ನು ಈ ಚುನಾವಣೆಯಲ್ಲಿ ಪ್ರಧಾನಮಂತ್ರಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರುವುದು ಆರ್ ಎಸ್‌ಎಸ್ ಮತ್ತು ಸಂಘ ಪರಿವಾರದ ರಾಜಕೀಯದ ತಂತ್ರಗಾರಿಕೆ ಎಂದು ಆರೋಪಿಸಿದರು.
ಮುಖವಾಡ:  ಮೋದಿ, ಗುಜರಾತ್‌ನಲ್ಲಿ ಸಿಎಂ ಆಗಿದ್ದಾಗ ಗೋದ್ರಾ ಘಟನೆ ನಡೆದು ಸಾಮೂಹಿಕ ಹತ್ಯಾಕಾಂಡ, ನರಮೇಧ ನಡೆಯಿತು. ಅದಕ್ಕೆ ಮೋದಿ ಅವರ ಕುಮ್ಮಕ್ಕು ಇತ್ತು. ಇಂತಹ ನರಮೇಧ ಮಾಡಿಸಿರುವ ಮೋದಿಯಿಂದ, ಬಹು ಧಮೀಯರು, ಜಾತಿಯವರನ್ನು ಹೊಂದಿರುವ ಭಾರತಕ್ಕೆ ಶಾಂತಿ, ನೆಮ್ಮದಿ ಸಿಗಲು ಸಾಧ್ಯವೇ ಎಂಬುದರ ಬಗ್ಗೆ ಚರ್ಚೆಯಾಗಬೇಕು ಎಂದ ಸಿದ್ದರಾಮಯ್ಯ, ಬಿಜೆಪಿ, ಆರ್‌ಎಸ್‌ಎಸ್‌ನ ಮುಖವಾಡ ಎಂದು ಟೀಕಿಸಿದರು.
ಬಿಜೆಪಿ, ಯಾವುದೇ ಮೌಲ್ಯ, ಪ್ರಜಾಪ್ರಭುತ್ವ, ಸಂವಿಧಾನಕ್ಕೆ ಗೌರವ ಕೊಡುವ ಪಕ್ಷ ಅಲ್ಲ. ಇಂತಹ ಪಕ್ಷ ಅಧಿಕಾರಕ್ಕೆ ಬರಬಾರದು. ಫ್ಯಾಸಿಸ್ಟ್ ವ್ಯಕ್ತಿ ಮತ್ತು ಪಕ್ಷದವರ ವಿರುದ್ಧ ಕಾಂಗ್ರೆಸ್ ಪಕ್ಷ ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿದೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.