ಅಧಿಕಾರಿಗಳು ನಿಷ್ಪಕ್ಷಪಾತ ಸೇವೆಗೆ ಆದ್ಯತೆ ನೀಡಲಿ: ಸಚಿವ ರತ್ನಾಕರ್
ಶಿರಾಳಕೊಪ್ಪ: ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು. ಯಾರಿಗಾದರೂ ತೊಂದೆರೆಯಾಗಿದ್ದರೆ ಅವರ ನೆರವಿಗೆ ಇರುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ಪಟ್ಟಣಕ್ಕೆ ಗುರುವಾರ ಆಗಮಿಸಿದ್ದ ಸಂದರ್ಭ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಸದಸ್ಯರು ಮತ್ತು ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಅಕ್ಕ ಮಹಾದೇವಿ ಹುಟ್ಟಿದ ಸ್ಥಳವಿದು. ಇಲ್ಲಿ ಯಾವುದೇ ಜಾತಿಬೇಧ ಬೇಡ. ಯಾವುದೇ ಸಮಸ್ಯೆ ಇದೇ ಎಂದು ಗಮನಕ್ಕೆ ತಂದಲ್ಲಿ ನಿವಾರಣೆ ನಡೆಸುವುದಾಗಿ ಹೇಳಿದರು.
ಮಕ್ಕಳ ಸಮವಸ್ತ್ರ ಸಿದ್ಧ: ಪ್ರಸಕ್ತ ಸಾಲಿನಲ್ಲಿ ಶಾಲಾ ಮಕ್ಕಳಿಗೆ ಪುಸ್ತಕ, ಸಮವಸ್ತ್ರ ಶೇ.90 ರಷ್ಟು ಸಿದ್ಧವಾಗಿವೆ. ಶಾಲೆ ಪ್ರಾರಂಭವಾದ ದಿನದಂದು ಮಕ್ಕಳಿಗೆ ಎಲ್ಲ ದೊರಕಲಿವೆ. ಮಕ್ಕಳಿಗೆ ಸೈಕಲ್ ವಿತರಿಸುವ ಕುರಿತು ಎಲ್ಲ ಕ್ರಮ ಕೈಗೊಳ್ಳಲಾಗಿತ್ತು. ಆದರೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪರವಾನಿಗೆ ಪಡೆಯಬೇಕಿತ್ತು. ಆದರೆ, ಈಗ ಎಲ್ಲ ಸಮಸ್ಯೆ ನಿವಾರಣೆ ಆಗಿ ಇನ್ನು 2 ದಿನಗಳಲ್ಲಿ ಪರವಾನಿಗೆ ದೊರೆಯಲಿದೆ ಎಂದರು.
ಸಿಇಟಿ ಸರ್ವರ್ ಹಾಳಾಗಿತ್ತು: ಪ್ರತಿ ವರ್ಷದಂತೆ ಸಿಇಟಿ ನಡೆಸುತ್ತಿರುವಾಗ ಈ ಬಾರಿ ಸರ್ವರ್ ಕೈ ಕೊಟ್ಟ ಕಾರಣ ಸ್ವಲ್ಪ ತೊಂದರೆ ಉಂಟಾಯಿತು. ಆದರೆ ಅದಕ್ಕಾಗಿ ಒಂದುವಾರ ಸಮಯ ಕೊಡಲಾಗಿದೆ. ಪ್ರತಿವರ್ಷ ಎಸ್ಎಸ್ಎಲ್ಸಿ ಪರೀಕ್ಷೆ ಸಂದರ್ಭ ಸಮಸ್ಯೆ ಉಂಟಾಗುತ್ತಿತ್ತು. ಈ ಬಾರಿ ಸಮಸ್ಯೆ ಬಾರದ ಹಾಗೆ ಮತ್ತು ಗೊಂದಲವಿಲ್ಲದ ರೀತಿಯಲ್ಲಿ ಪರೀಕ್ಷೆ ಕಾರ್ಯಗಳು ಮುಕ್ತಾಯವಾಗಿವೆ ಎಂದರು.
ಕುಡಿವ ನೀರಿಗೆ ಆದ್ಯತೆ: ಈ ಬಾರಿ ಕುಡಿವ ನೀರಿಗೆ ತೊಂದರೆ ಆದ ತಕ್ಷಣ ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳೊಂದಿಗೆ ಚರ್ಚಿಸಿ ತಕ್ಷಣ ಕುಡಿವ ನೀರಿನ ಸಮಸ್ಯೆ ಬಗ್ಗೆ ಸ್ಪಂದಿಸಲಾಯಿತು. ಜಿಲ್ಲೆಯಲ್ಲಿ ಸಮಸ್ಯೆ ಬಾರದಂತೆ ಎಚ್ಚರ ವಹಿಸಲಾಗಿದೆ ಎಂದರು.
ಅಭಿವೃದ್ಧಿ ಬಗ್ಗೆ ಮನವಿ: ಪ್ರಾರಂಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಮೀಲಾ ಖಾತೂನ್ ಮತ್ತು ಉಪಾಧ್ಯಕ್ಷೆ ನೂರ್ಜಹಾನ್ ಹಾಗು ಪಪಂ ಸದಸ್ಯರು ಮನವಿ ಸಲ್ಲಿಸಿದಾಗ ಕೊಟ್ಟ ಮನವಿಯನ್ನು ಸ್ವೀಕರಿಸಿ, ನೀವು ಪಟ್ಟಣದ ಅಭಿವೃದ್ಧಿ ಕುರಿತು ಕೊಡುವ ಅರ್ಜಿಯಲ್ಲಿ ಪಟ್ಟಣಕ್ಕೆ ಏನಾಗಬೇಕು ಅವುಗಳ ಖರ್ಚು ವೆಚ್ಚದ ಬಗ್ಗೆ ಮಾಹಿತಿ ಇರುವಂತಹ ಮನವಿ ಸಿದ್ದಪಡಿಸಿ, ಆ ಬಗ್ಗೆ ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಪಪಂ ಮುಖ್ಯಾಧಿಕಾರಿ ರಾಜ್ಕುಮಾರ್ ಸ್ವಾಗತಿಸಿದರು. ಮಾಜಿ ವಿಧಾನ ಪರಿಷತ್ ಸದಸ್ಯ ಶಾಂತವೀರಪ್ಪಗೌಡ, ತಹಸೀಲ್ದಾರ್ ಜಗದೀಶ್, ಪಪಂ ಅಧ್ಯಕ್ಷೆ ಜಮೀಲಾ ಖಾತೂನ್, ಉಪಾಧ್ಯಕ್ಷೆ ನೂರ್ಜಹಾನ್, ಪಪಂ ಸದಸ್ಯರು, ಗೋಣಿ ಮಾಲತೇಶ್, ಮಹೇಶ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

