ದೇಶ, ಮನಸ್ಸುಗಳನ್ನು ಒಂದುಗೂಡಿಸುವ ಶಕ್ತಿ ಕ್ರೀಡೆಗಿದೆ
ಚಿಕ್ಕಮಗಳೂರು: ಸೀತಮ್ಮ ಮೆಮೋರಿಯಲ್ ಟ್ರಸ್ಟ್ ಮತ್ತು ಆಶಾಕಿರಣ ಅಂಧಮಕ್ಕಳ ಶಾಲೆಯ ಆಶ್ರಯದಲ್ಲಿ ನಗರದ ಶತಮಾನೋತ್ಸವ ಕ್ರೀಡಾಂಗಣದಲ್ಲಿ ಶುಕ್ರವಾರ ಮೂರು ದಿನಗಳ ಕಾಲದ ರಾಜ್ಯಮಟ್ಟದ ಅಂಧರ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಲಾಯಿತು.
ಭಾರತ ಅಂಧರ ಕ್ರಿಕೆಟ್ ತಂಡದ ನಾಯಕ ಶೇಖರ್ ನಾಯಕ್ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರ ಪ್ರಕಾಶ್ ಜಯರಾಮಯ್ಯ ಪಂದ್ಯಾವಳಿಯಲ್ಲಿದ್ದ ತಂಡಗಳಿಗೆ ಕ್ರೀಡಾ ಪ್ರಮಾಣ ವಚನ ಬೋಧಿಸಿದರು.
ಆಶಾಕಿರಣ ಅಂಧಮಕ್ಕಳ ಶಾಲೆಯ ಅಧ್ಯಕ್ಷ ಡಾ. ಜೆ.ಪಿ. ಕೃಷ್ಣೇಗೌಡ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, ದೇಶ ದೇಶಗಳನ್ನು ಮತ್ತು ಮನಸ್ಸುಗಳನ್ನು ಒಂದುಗೂಡಿಸುವ ಶಕ್ತಿ ಕ್ರೀಡೆಗಿದೆ ಎಂದರು.
ಅರ್ಹತಾ ಪಂದ್ಯಕ್ಕೆ ಆಯ್ಕೆ: ಬೆಂಗಳೂರಿನ ಸಮರ್ಥನಂ ಟ್ರಸ್ಟ್ನ ಅಧ್ಯಕ್ಷ ನಾಗೇಶ್ ಮಾತನಾಡಿ, ಇಲ್ಲಿ ಮೂರು ದಿನಗಳ ಕಾಲ ನಡೆಯುವ ಪಂದ್ಯಾವಳಿಯಲ್ಲಿ ಗಮನಾರ್ಹ ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಜೂನ್ ತಿಂಗಳಿನಲ್ಲಿ ತಿರುಪತಿಯಲ್ಲಿ ನಡೆಯಲಿರುವ ವಿಶ್ವಕಪ್ನ ಅರ್ಹತಾ ಪಂದ್ಯಕ್ಕೆ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.
ನಗರದ ಆಶಾಕಿರಣ ಎ ತಂಡ ಹಾಗೂ ಶಿರಸಿ ತಂಡಗಳ ನಡುವೆ ಆರಂಭಿಕ ಪಂದ್ಯ ನಡೆಯಿತು. ಕೇವಲ ಚೆಂಡು ಸಾಗಿ ಬರುವ ಶಬ್ದವನ್ನು ಗ್ರಹಿಸಿ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಮಾಡುವ ಮೂಲಕ ದೃಷ್ಟಿ ವಿಕಲಚೇತನ ಕ್ರೀಡಾಪಟುಗಳು ಕ್ರೀಡಾಸಕ್ತರ ಗಮನ ಸೆಳೆದರು.
ಕಣ್ಣಿದ್ದವರಿಗಿಂತ ತಾವೇನೂ ಕಮ್ಮಿ ಇಲ್ಲ ಎಂಬಂತೆ ತಮ್ಮ ಚಾಕಚಕ್ಯತೆ ಮೆರೆಯುವುದರ ಜೊತೆಗೆ ಮಿಂಚಿನ ವೇಗದಲ್ಲಿ ಆಟವಾಡುವ ಮೂಲಕ ಅಂಧ ಕ್ರೀಡಾಪಟುಗಳು ನೋಡುಗರು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿದರು.
ಬೆಳಗಿನಿಂದ ಸಂಜೆಯವರೆಗೆ ನಡೆದ ಪ್ರಥಮ ದಿನದ ಪಂದ್ಯಾವಳಿಯಲ್ಲಿ ನಗರದ ಆಶಾಕಿರಣ ಎ ತಂಡ, ರಾಮನಗರ ತಂಡ, ಮುಂಡುಗೋಡು ತಂಡ, ಶಿವಮೊಗ್ಗ ತಂಡ ಮತ್ತು ಬೆಂಗಳೂರಿನ ಲಯನ್ಸ್ ತಂಡ ತಮ್ಮ ಎದುರಾಳಿ ತಂಡಗಳನ್ನು ಮಣಿಸಿ ಗೆಲ್ಲುವ ಮೂಲಕ ಪಂದ್ಯಾವಳಿಯಲ್ಲಿ ಮುನ್ನಡೆ ಸಾಧಿಸಿದವು. ಬೆಂಗಳೂರು ಲಯನ್ಸ್ ತಂಡದ ದಾಂಡಿಗ ಶಬ್ಬೀರ್ ಮಿಂಚಿನ ವೇಗದಲ್ಲಿ 121 ರನ್ ಗಳಿಸುವ ಮೂಲಕ ರೋಮಾಂಚಕಾರಿ ಪ್ರದರ್ಶನ ನೀಡಿದರು.
ರಾಜ್ಯದ ವಿವಿಧ ಜಿಲ್ಲೆಗಳ 12 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, ಶನಿವಾರ ನಡೆಯಲಿರುವ ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್ನಲ್ಲಿ ಸೆಣಸಲಿವೆ.
ಪಂದ್ಯಾವಳಿಯ ಆಯೋಜಕ ಸೀತಮ್ಮ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷ ಬಿ.ಜಿ. ಚಂದ್ರಶೇಖರ್, ಆಶಾಕಿರಣ ಅಂಧಮಕ್ಕಳ ಶಾಲೆಯ ಗೌರವ ಕಾರ್ಯದರ್ಶಿ ನಸ್ರುಲ್ಲಾ ಶರೀಫ್, ನಿರ್ದೇಶಕ ಗಿರಿಧರ್ ಯತೀಶ್, ಶಿಕ್ಷಕ ಲಕ್ಷ್ಮಣಗೌಡ, ಕ್ರಿಕೆಟ್ ತರಬೇತುದಾರರಾದ ಬಿ. ರಾಮದಾಸ್, ಕೋಟೆ ಶಂಕರ್, ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣಾಧಿಕಾರಿ ಕೆ.ಎ. ಗೋಪಾಲಕೃಷ್ಣ, ಕರಾಟೆ ಶಿಕ್ಷಕ ಪ್ರವೀಣ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

