ಚಿಕ್ಕಮಗಳೂರು

ಭಕ್ತಿ ಭ್ರಮೆಯಾಗದೆ ನಿಷ್ಠೆಯಾಗಲಿ

Published On :

ಚಿಕ್ಕಮಗಳೂರು: ಸಾಕ್ಷಿಪ್ರಜ್ಞೆ ಜೀವಂತವಾಗಿಡಲು ಪೂರಕವಾದ ದೇವಾಲಯಗಳು, ನ್ಯಾಯ ಹಾಗೂ ಧರ್ಮದ ತಾಣಗಳು ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚಟ್ನಳ್ಳಿ ಮಹೇಶ್ ಹೇಳಿದ್ದಾರೆ.
ಬೀರೂರು ಸಮೀಪದ ಹೂವಿನಹಳ್ಳಿಯಲ್ಲಿ ನಿರ್ಮಾಣಗೊಂಡಿರುವ ಕಡೇಕಲ್ ರುದ್ರಸ್ವಾಮಿ ದೇವಾಲಯ ಪ್ರಾರಂಭೋತ್ಸವದ ಅಂಗವಾಗಿ ಶನಿವಾರ ಸಂಜೆ ಆಯೋಜಿಸಿದ್ದ ಧರ್ಮ ಸಮಾರಂಭದಲ್ಲಿ ಅವರು ಪ್ರಧಾನ ಉಪನ್ಯಾಸ ನೀಡಿದರು.
ಭಕ್ತಿ ಪ್ರದರ್ಶನದ ಸರಕಾಗದೆ ಆತ್ಮ ದರ್ಶನದ ಬೆಳಕಾಗಬೇಕು. ಶ್ರದ್ಧೆ, ಸಂಸ್ಕಾರ ನಮ್ಮೊಳಗೆ ಪರಿವರ್ತನೆಗೆ ಸತ್ಪ್ರೇರಣೆಯಾಗಬೇಕು. ತತ್ತ್ವಗಳು ವಿಕೃತವಾಗಿ ಸಾಗುತ್ತಿರುವ ಸಂದರ್ಭದಲ್ಲಿ ದೈವೀಶ್ರದ್ಧೆ, ದಾಸೋಹ ತತ್ತ್ವ ಬಿತ್ತಲು ದೇವಾಲಯ ಸಹಕಾರಿ. ಭಕ್ತಿ ಭ್ರಮೆ ಆಗದೆ ನಿಷ್ಠೆ ಇರಬೇಕು. ಮಹಾ ಕಾವ್ಯಕ್ಕಿಂತ ಮಹಾ ಬದುಕು ದೊಡ್ಡದೆಂಬ ಕುವೆಂಪು ಮಾತನ್ನು ಉಲ್ಲೇಖಿಸಿದ ಚಟ್ನಳ್ಳಿ ಮಹೇಶ್, ಪ್ರತಿಮನೆಯೂ ಮಹಾಮನೆಯಾಗಿ, ನರ ಹರನಾಗಿ ಪರಿವರ್ತನೆಗೊಳ್ಳಲು ಧಾರ್ಮಿಕ ಸಮಾರಂಭಗಳು ಸತ್ಪ್ರೇರಕ ಎಂದರು.
ಸಾನ್ನಿಧ್ಯ ವಹಿಸಿದ್ದ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಮೂಲತಃ ಬಹಳ ಸ್ವಾರ್ಥಿಯಾಗಿರುವ ಮನುಷ್ಯನಿಗೆ ಸರಿ ದಾರಿ ತೋರಲು ದೇವಾಲಯಗಳಿವೆ. ಇವು ಅಂತರಂಗ ಶುದ್ಧಿಗೆ ಪೂರಕ. ಧರ್ಮ ಸೂತ್ರಗಳು ಒಳ್ಳೆಯ ಬದುಕಿಗೆ ಪ್ರೇರಕ ಎಂದರು.
ಮಾಜಿ ಶಾಸಕ ಎಸ್.ಎಲ್. ಧರ್ಮೇಗೌಡ ಮಾತನಾಡಿ, ಭಕ್ತಿ, ಭಾವ, ದೇವರ ಬಗ್ಗೆ ನಂಬಿಕೆ, ನಿಷ್ಠೆ ಅಗತ್ಯ. ಉಪಕಾರ ಸ್ಮರಣೆ ಮಾನವ ಮರೆಯಬಾರದೆಂದರು.
ದೈವ ಸಾನ್ನಿಧ್ಯ: ಜಿಪಂ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಮಾತನಾಡಿ, ನೀರಿನಲ್ಲಿದ್ದರೂ ಕಲ್ಲು ಮೃದುವಾಗುವುದಿಲ್ಲ. ಸ್ನಾನ, ಪೂಜೆಯಿಂದಷ್ಟೇ ಮೋಕ್ಷ ಸಿಗುವುದಿಲ್ಲ. ಮನದ ಕ್ಲೇಶ ಪರಿಶುದ್ಧಗೊಳಿಸಿಕೊಳ್ಳಲು ದೈವ ಸಾನ್ನಿಧ್ಯ ಸಹಕಾರಿ ಎಂದರು.
ಜಿಪಂ ಮಾಜಿ ಅಧ್ಯಕ್ಷ ಬೆಳ್ಳಿ ಪ್ರಕಾಶ್ ಮಾತನಾಡಿ, ಧರ್ಮ, ದೇವಾಲಯ, ಗುರುಪೀಠಗಳು ಜನಸಾಮಾನ್ಯರ ಬದುಕಿಗೆ ದಾರಿದೀಪ ಎಂದರು.
ಬೀರೂರಿನ ಲಲಿತಮ್ಮ ಶ್ರೀಕಂಠಪ್ಪ, ಜಿಪಂ ಉಪಾಧ್ಯಕ್ಷೆ ಅನ್ನಪೂರ್ಣ ಚನ್ನಕೇಶವ, ಸದಸ್ಯ ಬಿ.ಪಿ. ನಾಗರಾಜ್, ವಾಸ್ತು ತಜ್ಞ ಎಚ್. ರಾಮಪ್ಪ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.