ಚಿಕ್ಕಮಗಳೂರು

'ಕುದುರೆಮುಖ ಕಂಪನಿಯಿಂದ ಪರಿಸರ ವಿರೋಧಿ ಚಟುವಟಿಕೆ'

Published On :

ಕ.ಪ್ರ.ವಾರ್ತೆ ಟಿ ಚಿಕ್ಕಮಗಳೂರು ಟಿ ಮೇ 23
ತನ್ನದಲ್ಲದ ಪ್ರದೇಶದಲ್ಲಿ ತಾನೇ ಮಾಲೀಕ ಎಂಬಂತೆ ಕುದುರೆಮುಖದಂತಹ ಸೂಕ್ಷ್ಮ ಪರಿಸರ ಪ್ರದೇಶದಲ್ಲಿ ಕುದುರೆಮುಖ ಕಬ್ಬಿಣ ಅದಿರು ಕಂಪನಿ ಪರಿಸರಕ್ಕೆ ಪ್ರತಿಕೂಲವಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಎಂದು ವೈಲ್ಡ್ ಕ್ಯಾಟ್-ಸಿ ಮತ್ತು ಭದ್ರಾ ವೈಲ್ಡ್‌ಲೈಫ್ ಕನ್ಸರ್‌ವೇಷನ್ ಸೊಸೈಟಿ ಟೀಕಿಸಿವೆ.
ಈ ಸಂಸ್ಥೆಗಳ ಮುಖ್ಯಸ್ಥರಾದ ಶ್ರೀದೇವ್ ಹುಲಿಕೆರೆ, ಡಿ.ವಿ.ಗಿರೀಶ್ ಹಾಗೂ ರಾಜ್ಯ ವನ್ಯಜೀವಿ ಮಂಡಳಿ ಮಾಜಿ ಸದಸ್ಯ ಸ. ಗಿರಿಜಾಶಂಕರ ತಮ್ಮ ಹೇಳಿಕೆಯಲ್ಲಿ ಕುದುರೆಮುಖ ಕಂಪನಿಗೆ ಕಬ್ಬಿಣದ ಅದಿರು ತೆಗೆಯಲು ಕೇವಲ 30 ವರ್ಷಗಳ ಗುತ್ತಿಗೆ ಆಧಾರದ ಮೇಲೆ ನೀಡಿದ್ದ 4605 ಹೆಕ್ಟೇರ್ ಪ್ರದೇಶದಲ್ಲಿ ಆಗ ಅದಿರು ಉತ್ಖನನಕ್ಕೆ ನಿರ್ಮಿಸಿದ್ದ ಮೂಲ ಸೌಲಭ್ಯಗಳನ್ನು ಅದಿರು ತೆಗೆಯುವ ಕಾರ್ಯ ಸ್ಥಗಿತಗೊಂಡ ನಂತರ ಈಗ ಅವುಗಳನ್ನು ಬಳಸಿ ಬೃಹತ್ ಪ್ರಮಾಣದಲ್ಲಿ ವಾಣಿಜ್ಯ ಪ್ರವಾಸೋದ್ಯಮಕ್ಕೆ ಕಂಪನಿ ಮುಂದಾಗಿದೆ ಎಂದು ಆರೋಪಿಸಿದ್ದಾರೆ.
ಅರ್ಜಿದಾರರಿಗೆ ಆಹ್ವಾನ:  ಕಂಪನಿಗೆ ಅನುಮತಿ ಇಲ್ಲದಿದ್ದರೂ ಪರಿಸರ ಪ್ರವಾಸೋದ್ಯಮಕ್ಕೆ ಆಗ ಕಂಪನಿ ಕೆಲಸಗಳಿಗಾಗಿ ನಿರ್ಮಿಸಿರುವ ಸಿಬ್ಬಂದಿ ಹಾಗೂ ಕಾರ್ಮಿಕರ ವಸತಿ ಗೃಹ, ಅತಿಥಿ ಗೃಹ, ಉದ್ಯಾನವನಗಳನ್ನು ಉಪಯೋಗಿಸಿಕೊಳ್ಳಲು ಮುಂದಾಗಿ ಆಸಕ್ತಿದಾಯಕ ಅರ್ಜಿದಾರರನ್ನು ಕಂಪನಿ ಆಹ್ವಾನಿಸಿದೆ ಎಂದು ಅವರು ತಿಳಿಸಿದ್ದಾರೆ.
ದೇಶದ ಸರ್ವೋಚ್ಚ ನ್ಯಾಯಾಲಯ 2003ರಲ್ಲಿ ತನ್ನ ಆದೇಶದಲ್ಲಿ ಅದಿರು ತೆಗೆಯುವುದನ್ನು ಕುದುರೆಮುಖ ಬೆಟ್ಟಶ್ರೇಣಿಯಲ್ಲಿ ಸ್ಥಗಿತಗೊಳಿಸಿ ಪಶ್ಚಿಮಘಟ್ಟದ ಅತ್ಯಂತ ಸೂಕ್ಷ್ಮ ಪರಿಸರ ಹಾಗೂ ಮಳೆ ಕಾಡನ್ನು ಹೊಂದಿರುವ ಈ ಪ್ರದೇಶದಿಂದ ಕಾಲ್ತೆಗೆಯಲು ಸೂಚಿಸಿತ್ತು. ಆ ಆದೇಶಕ್ಕೆ ಅನುಗುಣವಾಗಿ 2005ರ ಡಿ.31 ರಿಂದ ಅದಿರು ಉತ್ಖನನವನ್ನು ನಿಲ್ಲಿಸಿರುವ ಕಂಪನಿ, ಹಿಂದೆ ನಿರ್ಮಿಸಿರುವ ಎಲ್ಲಾ ರೀತಿ ಕಟ್ಟಡ, ದೇವಾಲಯ, ಉದ್ಯಾನವನವನ್ನು ಪ್ರವಾಸಿಗರಿಗಾಗಿ ತೆರೆದಿಡಲು ಮುಂದಾಗಿರುವುದು ಪರೋಕ್ಷವಾಗಿ ಕಂಪನಿ ಅಲ್ಲೆ ತಳವೂರಲು ಮತ್ತು ಪ್ರವಾಸೋದ್ಯಮ ಹೆಸರಿನಲ್ಲಿ ಮತ್ತೊಮ್ಮೆ ನೀರವ ವಾತಾವರಣವನ್ನು ಹಾಳುಗೆಡವಲು ಮುಂದಾಗಿರುವುದನ್ನು ಸ್ಪಷ್ಟಪಡಿಸುತ್ತದೆ ಎಂದಿದ್ದಾರೆ.
ನೋಂದಣಿ ಮಾಡಿರಲಿಲ್ಲ:  ಸರ್ವೋಚ್ಚ ನ್ಯಾಯಾಲಯ ಅದಿರು ತೆಗೆಯುವುದನ್ನು ನಿರ್ಬಂಧಿಸಿ ಹಾಗೂ ನಿಷೇಧಿಸಿ 9 ವರ್ಷಗಳಾದರೂ ಕಂಪನಿ ಅಲ್ಲಿ ಅದಿರು ಪರಿಷ್ಕರಣೆಗಾಗಿ ಅಳವಡಿಸಿರುವ ಬೃಹತ್ ಯಂತ್ರಗಳನ್ನು ಅಲ್ಲಿಂದ ಬೇರೆ ಕಡೆಗೆ ಸಾಗಿಸಲು ಯಾವ ಕ್ರಮ ಕೈಗೊಂಡಿಲ್ಲ. ಕಂಪನಿಗೆ ಅದಿರು ತೆಗೆಯಲು 30 ವರ್ಷಗಳಿಗೆ ಮಾತ್ರ ರಾಜ್ಯ ಸರ್ಕಾರ ಈ ಪ್ರದೇಶವನ್ನು ಗುತ್ತಿಗೆಗೆ ನೀಡಿತ್ತೆ ಹೊರತು, ಆ ಪ್ರದೇಶವನ್ನು ಕಂಪನಿ ಹೆಸರಿಗೆ ನೋಂದಣಿ ಮಾಡಿರಲಿಲ್ಲ ಎಂದು ತಿಳಿಸಿದ್ದಾರೆ.
ಕಂಪನಿಗೆ ನೀಡಿದ್ದ 4605 ಹೆಕ್ಟೇರ್ ಪ್ರದೇಶದಲ್ಲಿ 3152 ಹೆಕ್ಟೇರ್ ಪ್ರದೇಶ ಅರಣ್ಯ ಇಲಾಖೆಗೆ ಸೇರಿದೆ. ಆದರೆ, ಕುದುರೆಮುಖ ಕಬ್ಬಿಣ ಅದಿರು ಕಂಪನಿ ತಾನೇ ಈ ಭೂಮಿಯ ಒಡೆಯ ಎಂದು ಭಾವಿಸಿಕೊಂಡು ಅಲ್ಲಿ ನಿರ್ಮಾಣ ಮಾಡಿದ್ದ ಮೂಲ ಸೌಲಭ್ಯವನ್ನು ತಾನು ಪ್ರವಾಸೋದ್ಯಮಕ್ಕಾಗಿ ಆಹ್ವಾನಿಸಿರುವ ಅರ್ಜಿಯಲ್ಲಿ ವಿಷಾದವಾಗಿ ತಿಳಿಸಿ, ಪ್ರವಾಸೋದ್ಯಮ ಆರಂಭಿಸಲು ಮುಂದಾಗಿರುವುದನ್ನು ಈ ಸಂಸ್ಥೆಗಳು ವಿರೋಧಿಸಿವೆ.
ಒತ್ತಾಯ:  ಕಂಪನಿ ಅರ್ಜಿಗಳನ್ನು ಆಹ್ವಾನಿಸಿರುವ ಸಂದರ್ಭ ತಾನು ನಿರ್ಮಿಸಿರುವ ಪಟ್ಟಣ ಪ್ರದೇಶದಲ್ಲಿ 1700 ವಸತಿ ಗೃಹಗಳು, 48 ವಿಲ್ಲಾಗಳು, ಕ್ರೀಡಾ ಚಟುವಟಿಕೆ ಸೌಲಭ್ಯ, 50 ಎಕರೆ ವಿಸ್ತೀರ್ಣದ ಪಾರ್ಕ್ ಸೇರಿದಂತೆ ಎಲ್ಲಾ ರೀತಿಯ ವಿವರವನ್ನು ನೀಡಿದೆ. ಕೇವಲ ಗುತ್ತಿಗೆಗೆ ಪಡೆದುಕೊಂಡ ಜಾಗಕ್ಕೆ ಕಂಪನಿ ಯಾವ ರೀತಿ ಅಧಿಕಾರಯುತವಾಗಿ ಹಾಗೂ ಅನುಮತಿಯ ಮೇಲೆ ಈ ರೀತಿ ಅರ್ಜಿಗಳನ್ನು ಆಹ್ವಾನಿಸಿದೆ ಎಂಬುದನ್ನು ರಾಜ್ಯ ಸರ್ಕಾರ ಸ್ಪಷ್ಟಪಡಿಸಬೇಕೆಂದು ಒತ್ತಾಯಿಸಲಾಗಿದೆ.
ಕಂಪನಿಯ ಅದಿರು ತೆಗೆಯುವ ಚಟುವಟಿಕೆಗೆ ಹಿಂದೆಯೇ ಸಾರ್ವಜನಿಕರ ವಿರೋಧವಿತ್ತು. ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಮೂಲಕ ಅದನ್ನು ನಿರ್ಬಂಧಿಸಿ ಅತ್ಯಂತ ವೈಶಿಷ್ಟ್ಯ ಪೂರ್ಣವಾದ ಮತ್ತು ಜೀವವೈವಿಧ್ಯತೆಯ ಆಗರವಾದ ಈ ನಿತ್ಯಹರಿದ್ವರ್ಣದ ಕಾಡುಗಳಿಂದ ಕೂಡಿದ ಈ ಪ್ರದೇಶವನ್ನು ಉಳಿಸಿಕೊಂಡಿರುವಾಗ ಕಂಪನಿ ಪರಿಸರ ಪ್ರವಾಸೋದ್ಯಮದ ಹೆಸರಿನಲ್ಲಿ ಮತ್ತೊಮ್ಮೆ ಆ ಸ್ಥಳವನ್ನು ಜನಜಂಗುಳಿಯ ತಾಣವಾಗಿಸಿ ಅಲ್ಲಿರುವ ಅಪರೂಪದ ಪ್ರಾಣಿಗಳ ನಿರಾತಂಕ ಬದುಕಿಗೆ ಅಪಾಯ ತರುವ ಕೆಲಸ ಮಾಡಲು ಮುಂದಾಗಿದೆ ಎಂದು ಆರೋಪಿಸಿದ್ದಾರೆ.
ಇತ್ತೀಚೆಗೆ ಕಳಸ ಇನಾಂ ಭೂಮಿ ವಿವಾದದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಕುದುರೆಮುಖ ಕಂಪನಿಗೆ ಅದಿರು ತೆಗೆಯುವ ವೇಳೆ ನೀಡಿದ್ದ ಹಾಗೂ ಈಗ ಹಿಂತೆಗೆದುಕೊಂಡಿರುವ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ನೀಡಿ ಕಳಸ ಇನಾಂ ಭೂಮಿ ಜನರ ಎತ್ತಂಗಡಿ ವಿವಾದಕ್ಕೆ ಪರಿಹಾರ ಹುಡುಕಲು ಹಾಗೂ ಅವರುಗಳನ್ನು ಈಗ ಕೃಷಿ ಮಾಡುತ್ತಿರುವ ಸ್ಥಳದಲ್ಲೆ ಉಳಿಸಲು ಆಲೋಚಿಸುತ್ತಿದ್ದಾರೆ. ಆದರೆ, ಕಂಪನಿ ಪ್ರವಾಸೋದ್ಯಮದ ಹೆಸರಿನಲ್ಲಿ ತನ್ನ ಹಿತಾಸಕ್ತಿ ಕಾಪಾಡಿಕೊಳ್ಳಲು ಮುಂದಾಗಿರುವುದು ಅತ್ಯಂತ ವಿಷಾದದ ಸಂಗತಿ ಎಂದು ಈ ಸಂಸ್ಥೆಗಳು ಅಭಿಪ್ರಾಯಿಸಿವೆ.
ಕಂಪನಿ ತುಕ್ಕು ಹಿಡಿಯುತ್ತಿರುವ ಎಲ್ಲಾ ಯಂತ್ರೋಪಕರಣ ತೆಗೆದುಕೊಂಡು, ತಾನು ನಿರ್ಮಿಸಿರುವ ಕಟ್ಟಡಗಳನ್ನು ಸರ್ಕಾರಕ್ಕೆ ಬಿಟ್ಟು ಅಲ್ಲಿಂದ ಕಾಲ್ತೆಗೆಯಬೇಕು. ಸರ್ಕಾರ ಕಂಪನಿಯ ಈ ಪ್ರವಾಸೋದ್ಯಮ ಪ್ರಸ್ತಾವನೆಯನ್ನು ತಿರಸ್ಕರಿಸಿ ಈ ಘಟ್ಟ ಪ್ರದೇಶವನ್ನು ಹಸುರಾಗಿ ಸಹಜ ಸ್ಥಿತಿಯಲ್ಲೆ ಉಳಿಸಬೇಕೆಂದು ಪರಿಸರಾಸಕ್ತ ಸಂಸ್ಥೆಗಳು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.