ಸರ್ಕಾರಿ ಕಾಲೇಜು ಸಮಸ್ಯೆ ನಿವಾರಣೆ ಕುರಿತು ಚರ್ಚೆ
ಕಡೂರು: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 3,000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರೂ ಕೊಠಡಿ, ಗ್ರಂಥಾಲಯ ಕೊರತೆ ಇದ್ದು, ಪ್ರಥಮ ವರ್ಷಕ್ಕೆ ಕೇವಲ 600 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಇರುವುದರಿಂದ ಸಮಸ್ಯೆ ನಿವಾರಣೆಗೆ ಪರ್ಯಾಯ ವವಸ್ಥೆ ಕಲ್ಪಿಸುವ ಕುರಿತಂತೆ ಕಾಲೇಜಿನ ಅಭಿವೃದ್ಧಿ ಸಮಿತಿಯ ಸಭೆಯಲ್ಲಿ ಚರ್ಚಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಹಾಗೂ ಸಮಿತಿಯ ಕಾರ್ಯದರ್ಶಿ ಜಿ.ಎಂ. ಕೊಟ್ರೇಶಪ್ಪ ಕರೆದಿದ್ದ ಸಭೆಯಲ್ಲಿ ಸಮಿತಿ ಸದಸ್ಯ ಆರ್.ಎಂ. ಬಸವರಾಜ್, ಸಿ.ನೀಲಂಕಠಪ್ಪ, ಮಂಜುನಾಥ ಗುಪ್ತ, ಎ. ರಾಜಶೇಖರ್, ಜಿ.ಎಂ. ವಸಂತಕುಮಾರ್, ಅಬ್ದುಲ್ ಮಜೀದ್, ನಟರಾಜ್ ಸಮ್ಮುಖದಲ್ಲಿ ಕಾಲೇಜಿನ ಸ್ಥಿತಿಗತಿ ಕುರಿತು ಪ್ರಾಂಶುಪಾಲರು ಸಮಸ್ಯೆ ವಿವರ ಮುಂದಿಟ್ಟರು.
600 ಅರ್ಜಿ: ಬಿ.ಎ.,ಬಿ.ಕಾಂ., ಎಂ.ಬಿ.ಎ. ಮತ್ತು ಪಿ.ಜಿ. ಕೋರ್ಸುಗಳು ಸೇರಿದಂತೆ 3,000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪ್ರಥಮ ವರ್ಷಕ್ಕೆ 600 ಅರ್ಜಿ ಬಂದಿದ್ದು, ಬಾಣಾವರ, ಸಖರಾಯಪಟ್ಟಣ, ಬೀರೂರು, ಅಜ್ಜಂಪುರಗಳಿಂದ ನೂರಾರು ಅರ್ಜಿ ಬಂದಿವೆ. ಆದರೆ ಕೊಠಡಿ, ಗ್ರಂಥಾಲಯ, ಸಿಬ್ಬಂದಿ, ವಿಶಾಲವಾದ ಮೈದಾನ, ಕ್ಯಾಂಟೀನ್ ಕೊರತೆ ಸೇರಿದಂತೆ ವಾಹನ ನಿಲುಗಡೆ ಇಲ್ಲ ಎಂದು ವಿವರ ನೀಡಿದರು.
ಅನಂತರ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಆರ್.ಎಂ. ಬಸವರಾಜ್ ಮಾತನಾಡಿ, ಕಾಲೇಜು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವುದರಿಂದ ಪಾಠಪ್ರವಚನಗಳಿಗೆ ವಾಹನದ ಶಬ್ದದಿಂದ ತೊಂದರೆ, ಭವಿಷ್ಯದ ದೃಷ್ಟಿಯಿಂದ ಕಾಲೇಜನ್ನು ವಿಶಾಲ ಜಾಗದಲ್ಲಿ ಆರಂಭಿಸುವುದು ಸೂಕ್ತ. ಮಹಿಳಾ ಕಾಲೇಜು ಸ್ಥಾಪನೆಗೆ ಶಾಸಕರು ಸೇರಿದಂತೆ ಎಲ್ಲ ಜನಪ್ರತಿನಿಧಿಗಳೊಂದಿಗೆ ಸಮಿತಿ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಿ ಕ್ರಮ ಕೈಗೊಂಡಲ್ಲಿ ಸಮಸ್ಯೆ ನಿವಾರಣೆಯಾಗಲಿದೆ ಎಂದು ಸಲಹೆ ನೀಡಿದರು.
ಶೇ.100 ಫಲಿತಾಂಶ: ಕಡೂರು ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಈ ಬಾರಿ ಶೇ. 100 ಫಲಿತಾಂಶ ಬಂದಿರುವುದರಿಂದ ಹೆಚ್ಚು ಒತ್ತಡವಿದ್ದು, ಜನಪ್ರತಿನಿಧಿಗಳ ಒತ್ತಡವಿರುವುದರಿಂದ ಪ್ರವೇಶ ನೀಡುವುದು ಅನಿವಾರ್ಯವಾಗಿದೆ. ಒಳ ಕ್ರೀಡಾಂಗಣ ಹೊರ ಕ್ರೀಡಾಂಗಣ, ಆಡಿಟೋರಿಯಂ ನಿರ್ಮಾಣವಾಗಬೇಕಿದೆ. ಕಳೆದ 2012ರಲ್ಲಿ ಸಭೆ ನಡೆದಿದ್ದು ಬಿಟ್ಟರೆ ಮತ್ತೆ ಸಭೆ ನಡೆದಿಲ್ಲ. ಬಹಳಷ್ಟು ಅನುದಾನ ಬಂದಿದ್ದರೂ, ಅಭಿವೃದ್ಧಿ ಕುಂಠಿತವಾಗಿದೆ.
ಗುತ್ತಿಗೆದಾರರು ಸರಿಯಾದ ಸಮಯಕ್ಕೆ ಕಟ್ಟಡ ನಿರ್ಮಾಣ ಮಾಡದಿರುವ ಬಗ್ಗೆ ಸಮಿತಿಯ ಅಧ್ಯಕ್ಷ ವೈ.ಎಸ್.ವಿ. ದತ್ತ ಹಾಗೂ ಶಾಲೆ ಅಭಿವೃದ್ಧಿ ಸಮಿತಿ ಕಾಲೇಜಿನ ಅಭಿವೃದ್ಧಿ ಬಗ್ಗೆ ಗಮನಹರಿಸಬೇಕಿದ್ದು, ನಾವು ಶಾಸಕರೊಂದಿಗೆ ಕೈ ಜೋಡಿಸಿ ಕಾಲೇಜಿನ ಅಭಿವೃದ್ಧಿಗೆ ದುಡಿಯುತ್ತೇವೆ ಎಂದು ಸದಸ್ಯರು ಹೇಳಿದರು.
ಕೊಟ್ರೇಶಪ್ಪ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

