ಮುಂದುವರಿದ ಇನಾಂ ಭೂಮಿ ತೆರವು ಕಾರ್ಯ
ಕ.ಪ್ರ.ವಾರ್ತೆ , ಮೂಡಿಗೆರೆ , ಮೇ 29
ಕಳೆದ 13 ವರ್ಷದಿಂದ ಇನಾಂ ಭೂಮಿ ಸಂತ್ರಸ್ತರು - ಅರಣ್ಯ ಇಲಾಖೆ ಹಾಗೂ ನ್ಯಾಯಂಗದ ನಡುವೆ ನಡೆಯುತ್ತಿದ್ದ ಶೀತಲ ಸಮರದಲ್ಲಿ ತೆರವಿನ ಭೀತಿ ಎದುರಿಸುತ್ತಿದ್ದ ಕಳಸದ ಸಾವಿರಾರು ಕುಟುಂಬಗಳಿಗೆ ಇದೀಗ ನಡುಕ ಪ್ರಾರಂಭವಾಗಿದ್ದು, ಕಳೆದ 3 ದಿನದಿಂದ ಇನಾಂ ಭೂಮಿ ತೆರವನ್ನು ಅರಣ್ಯ ಇಲಾಖೆ ಕೈಗೊಂಡಿರುವುದೇ ಇದಕ್ಕೆ ಕಾರಣವಾಗಿದೆ.
ಮಂಗಳವಾರ ಟಾಟಾ ಕಂಪೆನಿಯ ಮೇರ್ತಿಖಾನ್ ಎಸ್ಟೇಟಿನ 55.36 ಎಕರೆ ಭೂಮಿಯಲ್ಲಿ ಬೆಳೆದಿರುವ ಚಹಾ ಗಿಡಗಳನ್ನು ಅರಣ್ಯ ಇಲಾಖೆ ಕಡಿದು ತೆರವು ಮಾಡಿ ತನ್ನವಶಕ್ಕೆ ಪಡೆದುಕೊಂಡಿರುವ ಬೆನ್ನಲ್ಲೇ ಗುರುವಾರವೂ ಕಾರ್ಯ ಮುಂದುವರೆದಿದೆ.
ಭೂಮಿ ತೆರವು: ಕಳಸ ಹೋಬಳಿಯ ಮಾವಿನಕೆರೆ ಗ್ರಾಮದ ಸರ್ವೆ ನಂ. 826 ರಲ್ಲಿ ವೆಂಕಟೇಶಯ್ಯ ಹಳುವಳ್ಳಿ ಇವರ 7.18 ಎಕರೆ, ಸರ್ವೆ ನಂ 826ರಲ್ಲಿ ಶೈಲೇಶ್ ಹಳುವಳ್ಳಿ ಎಂಬುವವರ 8.30 ಎಕರೆ, ಸರ್ವೆ ನಂ 709 ರಲ್ಲಿ ಲಕ್ಷ್ಮೀನಾರಾಯಣ ವೆಂಕಟಗಿರಿ ಎಸ್ಟೇಟ್ ಇವರ 14.1 ಎಕರೆ ಜಮೀನು, ಸರ್ವೆ ನಂ. 709ರಲ್ಲಿ ಮೇಯಪ್ಪನ್ ಎಂಬುವವರ 11.2 ಎಕರೆ ಇನಾಂ ಭೂಮಿಯನ್ನು ಗುರುವಾರ ಅರಣ್ಯ ಇಲಾಖೆ ತೆರವುಗೊಳಿಸಿದೆ.
ಬಲಿಗೆ ಗ್ರಾಮದ ಗ್ರಾಮಸ್ಥರು ಚುನಾವಣೆಯನ್ನು ಬಹಿಷ್ಕರಿಸಿ 15 ದಿನಗಳ ಕಾಲ ಪ್ರತಿಭಟನೆಯನ್ನು ನಡೆಸಿದ್ದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ.
ಕಣ್ಣೊರೆಸುವ ತಂತ್ರ: ಈ ಹಿಂದೆ ಉಸ್ತುವಾರಿ ಸಚಿವರಾಗಿದ್ದ ಸುರೇಶ್ ಕುಮಾರ್ ಇನಾಂ ಭೂಮಿ ಉಳಿಸುವ ಭರವಸೆ ಕೇವಲ ಭರವಸೆಯಾಯಿತು. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಇನಾಂ ಭೂಮಿ ಉಳಿಸಲು ಸಾಧ್ಯವಾಗದೇ ಇರುವುದು ರಾಜಕಾರಣಿಗಳ ಕಣ್ಣೊರೆಸುವ ತಂತ್ರ. ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಮೇಲ್ಮನವಿ ಸಲ್ಲಿಸಿದ್ದರೆ ಇನಾಂ ಭೂಮಿ ಉಳಿಸಲು ಸಾಧ್ಯವಿತ್ತು. ಆದರೆ ಮೇಲ್ಮನವಿ ಸಲ್ಲಿಸುವಲ್ಲಿ ಆಡಳಿತ ಸರ್ಕಾರ ವಿಫಲವಾಗಿದೆ. ನೂರು ಎಕರೆ ಭೂಮಿ ತೆರವಿನಿಂದ ಪ್ರಾರಂಭವಾಗಿರುವ ಕಾರ್ಯಾಚರಣೆ ಈಗ ಏಳು ಎಕರೆಗೆ ಬಂದಿದೆ. ಇನ್ನು ಎರಡು-ಮೂರು ಎಕ್ರೆಯವರನ್ನು ಎಬ್ಬಿಸುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ. ಒಂದಿಷ್ಟು ವಿಷ ಕೊಡಿ ಎಂದು ಗ್ರಾಮಸ್ಥರು ತಮ್ಮ ಸಂಕಟವನ್ನು ಪತ್ರಕರ್ತರಲ್ಲಿ ತೋಡಿಕೊಂಡರು.
ಗುಪ್ತ ಕಾರ್ಯಾಚರಣೆ; ಯೈವುದೇ ಮುನ್ಸೂಚನೆಯನ್ನೂ ನೀಡದೇ ಗುಪ್ತವಾಗಿ ಕಾರ್ಯಾಚರಣೆಗೆ ಇಳಿದ ಅರಣ್ಯ ಇಲಾಖೆ 70 ಪೊಲೀಸರು, 40 ಅರಣ್ಯ ಇಲಾಖೆ ಸಿಬ್ಬಂದಿ, 25 ಜನ ಕೂಲಿಯಾಳುಗಳ ಸಹಾಯದಿಂದ 8 ಯಂತ್ರ ಉಪಯೋಗಿಸಿಕೊಂಡು ಇನಾಂ ಭೂಮಿಯಲ್ಲಿ ದಟ್ಟವಾಗಿ ಬೆಳೆಸಿದ ಕಾಫಿ, ಅಡಕೆ ಮರಗಳನ್ನು ಕಡಿದು ಹಾಕಲಾಯಿತು. ಕಾರ್ಯಾಚರಣೆಯಲ್ಲಿ ಕೊಪ್ಪ ಡಿಎಫ್ಒ ಶಂಕರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ್ ರೆಡ್ಡಿ ಹಾಗೂ ಕಳಸ ವಲಯಾರಣ್ಯಾಧಿಕಾರಿ ಪ್ರಹ್ಲಾದ್ ಇದ್ದರು.
ಪ್ರಮಾಣಪತ್ರ ಸಲ್ಲಿಕೆಗೆ ಆಗ್ರಹ
ಕ.ಪ್ರ.ವಾರ್ತೆ , ಮೂಡಿಗೆರೆ , ಮೇ 29
ಕಳಸ ಇನಾಂ ಭೂಮಿ ಸಮಸ್ಯೆ ಬಿಗಡಾಯಿಸಲು ರಾಜ್ಯ ಕಾಂಗ್ರೆಸ್ ಸರಕಾರದ ಬೇಜವಾಬ್ದಾರಿತನ ಮತ್ತು ನಿರ್ಲಕ್ಷ್ಯವೇ ಪ್ರಮುಖ ಕಾರಣ ಎಂದು ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪು ನೀಡುವ ಮುನ್ನವೇ ಇನಾಂ ಭೂಮಿ ತೆರವಿಗೆ ರಾಜ್ಯ ಸರಕಾರ ಪ್ರಯತ್ನ ನಡೆಸುತ್ತಿದೆ. ಈಗಾಗಲೇ ಸ್ಥಳೀಯ ಸಣ್ಣ ಬೆಳೆಗಾರರಿಗೆ ಇದರಿಂದ ತೀವ್ರ ಆತಂಕ ಎದುರಾಗಿದೆ. ಸರಕಾರ ಇಲ್ಲಿನ ಬಡ ಕೃಷಿಕರು ಮತ್ತು ಜೀವನಾಧಾರಕ್ಕಾಗಿ ಸಣ್ಣಪುಟ್ಟ ಒತ್ತುವರಿ ಮೂಲಕ ಬದುಕುತ್ತಿರುವ ಜನರನ್ನು ಎತ್ತಂಗಡಿಗೊಳಿಸುವ ಬದಲು ಹೈಕೋರ್ಟ್ಗೆ ಸೂಕ್ತ ಪ್ರಮಾಣಪತ್ರ ಸಲ್ಲಿಸಲು ಹಿಂದೇಟು ಹಾಕುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.
ಕೋರ್ಟ್ಗೆ ಅಫಡವಿಟ್ ಸಲ್ಲಿಸಿ: ಹೈಕೋರ್ಟ್ ತೀರ್ಪು ವ್ಯತಿರಿಕ್ತವಾದರೂ ಸಂತ್ರಸ್ತರು ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸುವವ ಅವಕಾಶವಿದೆ. ಹೀಗಿರುವಾಗ ತರಾತುರಿಯಲ್ಲಿ ತೆರವು ಪ್ರಕ್ರಿಯೆಗೆ ಸರಕಾರ ಮುಂದಾಗಿರುವುದು ಸರಿಯಲ್ಲ. ಸಂತ್ರಸ್ತರಿಗೆ ಸೂಕ್ತ ರೀತಿಯಲ್ಲಿ ಪುನರ್ವಸತಿ ನೀಡಲು ಅಥವಾ ಪ್ರಕರಣಕ್ಕೆ ಪರಿಹಾರ ಕಂಡುಕೊಳ್ಳಲು ಸರಕಾರ ಪ್ರಯತ್ನಿಸಿಲ್ಲ.
ಆದ್ದರಿಂದ ಮುಖ್ಯಮಂತ್ರಿಯವರು ಮದ್ಯ ಪ್ರವೇಶಿಸಿ ಕೋರ್ಟ್ಗೆ ಸೂಕ್ತ ಅಫಿಡವಿಟ್ ಸ್ಸಲ್ಲಿಸುವ ಮೂಲಕ ಎತ್ತಂಗಡಿಯನ್ನು ತಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

