ಕೊಲೆ ಆರೋಪಿಗಳ ಬಂಧನ
ಚಿತ್ರದುರ್ಗ: ಕೊಲೆಯಾದ ಎರಡು ದಿನಗಳಲ್ಲೇ ನಗರ ಪೊಲೀಸರು ಆರೋಪಿಗಳನ್ನು ಬಂಧಿಸಿರುವ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ.
ಹಳೆಯ ದ್ವೇಷದ ಹಿನ್ನೆಲೆಯಲ್ಲಿ ನಗರದ ಹಿಮ್ಮತ್‌ನಗರ ನಿವಾಸಿ ಮಣಜಾಫರ್ ಎಂಬ ವ್ಯಕ್ತಿಯ ತಲೆಗೆ ಮೂವರು ವ್ಯಕ್ತಿಗಳು ಸ್ಟೀಲ್ ಪೈಪ್‌ನಿಂದ ಹೊಡೆದು ಕಾರಿನಲ್ಲಿ ಕರೆದೊಯ್ದು ಐಮಂಗಲ ಬಳಿಯ ಗಣೇಶ ದೇವಸ್ಥಾನದ ಬಳಿ ಕೊಲೆ ಮಾಡಿ ದೇಹವನ್ನು ಜಮೀನಿನ ಬದಿ ಎಸೆದು ಹೋಗಿದ್ದರು.
ಡಿವೈಎಸ್ಪಿ ಗಂಗಯ್ಯ ಅವರ ನೇತೃತ್ವದಲ್ಲಿ ನಿರೀಕ್ಷಕ ಶ್ರೀಧರಶಾಸ್ತ್ರ, ಕನಕಲಕ್ಷ್ಮಿ, ಪಿಎಸ್‌ಐ ರುದ್ರಪ್ಪ, ಎಎಸ್‌ಐ ಶಾಂಪ್ರಸಾದ್ ಮತ್ತಿತರೆ ಸಿಬ್ಬಂದಿಯನ್ನು ಒಳಗೊಂಡ ತನಿಖಾ ತಂಡ ರಚಿಸಲಾಗಿತ್ತು. ಪ್ರಕರಣದ ಆರೋಪಿ ಮಹಮದ್ ಮುಷೀರ್ ರಿಯಾಜ್ (36) ಎಂಬಾತನನ್ನು ತಾಲೂಕಿನ ದಂಡಿನ ಕುರುಬರಹಟ್ಟಿ ಗೇಟ್ ಬಳಿ ಗುರುವಾರ ಹಿಡಿದು ಆತ ನೀಡಿದ ಮಾಹಿತಿ ಆಧಾರದಲ್ಲಿ ಮತ್ತಿಬ್ಬರು ಆರೋಪಿಗಳಾದ ಮಹಮದ್ ಘಜನ್ ಫರ್ ಹುಸೇನ್ (27), ಮೊಹಿನುದ್ದೀನ್ (29) ಎಂಬವರನ್ನು ಬಂಧಿಸಲಾಗಿದೆ.
ಮಹ್ಮದ್ ಮಷಿರ್ ರಿಯಾಜ್ ಹಾಗೂ ಮೃತ ಮಣಜಾಫರ್ ಅವರು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಬಗ್ಗೆ ಠಾಣೆಯಲ್ಲಿ ದಾಖಲೆಗಳು ಇವೆ. ಮೊಹಿನುದ್ದೀನ್ ಹೊಡೆದಾಟ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಆರೋಪಿಗಳು ಮಣಜಾಫರ್‌ನನ್ನು 4 ರಂದು ರಾತ್ರಿ ಉದಯ ನರ್ಸಿಂಗ್ ಹೋಂ ಬಳಿ ತಲೆಗೆ ರಾಡಿನಿಂದ ಹೊಡೆದು ನಂತರ ಆತನನ್ನು ಕಾರಿನಲ್ಲಿ ಹಾಕಿಕೊಂಡು ಎನ್‌ಹೆಚ್-4 ರಸ್ತೆಯ ಗಣೇಶ ದೇವಸ್ಥಾನದಿಂದ ಬುರುಜನರೊಪ್ಪಕ್ಕೆ ಹೋಗುವ ರಸ್ತೆಯಲ್ಲಿ ಒಂದು ಜಮೀನಿನ ಬದುವಿನ ಬಳಿ ಆತನನ್ನು ಎಸೆದು ಮಹಮದ್ ಮುಷೀರ್ ರಿಯಾಜ್ ಎಂಬವನು ಒಂದು ಸೈಜುಕಲ್ಲನ್ನು ತೆಗೆದುಕೊಂಡು ಮಣಜಾಫರ್‌ನ ತಲೆಯ ಮೇಲೆ ಎತ್ತಿ ಹಾಕಿರುತ್ತೇನೆ ಎಂದು ವಿಚಾರಣೆಯಲ್ಲಿ ತಿಳಿಸಿದ್ದಾನೆ.
ಮೂವರನ್ನು ದಸ್ತಗಿರಿ ಮಾಡಿ, ಕೃತ್ಯಕ್ಕೆ ಬಳಸಿದ ರಾಡ್, ಕಾರನ್ನು ವಶಪಡಿಸಿಕೊಂಡು ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾದ ಅಧಿಕಾರಿ,ಸಿಬ್ಬಂದಿಯನ್ನು ಪೊಲೀಸ್ ಅಧೀಕ್ಷಕ ಎಂ.ಎನ್. ನಾಗರಾಜ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೆ.ಎಂ. ಶಾಂತರಾಜು ಶ್ಲಾಘಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

