ವರ್ಗಾವಣೆ ಮೂಲಕ ಸ್ಥಾನ ಭರ್ತಿ: ಆಕ್ರೋಶ
ಹಿರಿಯೂರು: ಪಟ್ಟಣದ ಹರಿಶ್ಚಂದ್ರ ಘಾಟ್ನ 26 ನೇ ವಾರ್ಡ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ನಿವೃತ್ತಿ ಹೊಂದಿದ್ದು, ಸದರಿ ಸ್ಥಾನಕ್ಕೆ ಹೊಸದಾಗಿ ಸ್ಥಳೀಯರನ್ನು ನೇಮಕಾತಿ ಮಾಡದೇ ವರ್ಗಾವಣೆ ಮೂಲಕ ಸ್ಥಾನ ಭರ್ತಿ ಮಾಡಲಾಗಿದೆ ಎಂದು ಆರೋಪಿಸಿ ಸ್ಥಳೀಯ ನಿವಾಸಿಗಳು ಮತ್ತು ದಂಸಂಸದಿಂದ ಶಿಶು ಅಭಿವೃದ್ಧಿ ಅಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.
26 ನೇ ವಾರ್ಡ್ನ ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆ ಹುದ್ದೆ ನಿವೃತ್ತಿ ಮುಖಾಂತರ ತಿಂಗಳ ಹಿಂದೆಯಷ್ಟೇ ಖಾಲಿಯಾಗಿದ್ದು, ನಿಯಮಾನುಸಾರ ಹೊಸದಾಗಿ ಅರ್ಜಿ ಕರೆದು ಸ್ಥಳೀಯರನ್ನು ಆಯ್ಕೆ ಮಾಡುವುದು ಬಿಟ್ಟು ಪಕ್ಕದ ಸೋಮೇರಹಳ್ಳಿ ತಾಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಯಕರ್ತೆಯನ್ನು ವರ್ಗಾವಣೆ ಮಾಡಿ ಸ್ಥಾನ ತುಂಬಲಾಗಿದ್ದು, ಇದರಿಂದ ಸ್ಥಳೀಯರಿಗೆ ಸಿಗಬೇಕಿದ್ದ ಹುದ್ದೆಗೆ ಬೇರೆಯವರನ್ನು ತಂದು ಕೂರಿಸಿ ವಂಚಿಸಲಾಗಿದೆ ಎಂದು ಆರೋಪಿಸಲಾಯಿತು.
ನಿರ್ಲಕ್ಷ್ಯ ಆರೋಪ:ಈ ಮುನ್ನ ಹತ್ತಾರು ಬಾರಿ ಶಿಶು ಅಭಿವೃದ್ಧಿ ಅಧಿಕಾರಿಗಳನ್ನು ಕಂಡು ಹೊಸ ನೇಮಕಾತಿ ಮೂಲಕ ಸ್ಥಾನ ತುಂಬುವಂತೆ ಮನವಿ ಮಾಡಲಾಗಿದ್ದರೂ, ಕೊನೆಯ ಗಳಿಕೆಯಲ್ಲಿ ವರ್ಗಾವಣೆ ಮಾಡುವ ನಿರ್ಧಾರ ತಳೆದು ಸುಮಾರು ಎರಡು ಸಾವಿರಕ್ಕೂ ಹೆಚ್ಚು ಮನೆಗಳಿರುವ ಈ ಪ್ರದೇಶದ ನಿವಾಸಿಗಳನ್ನು ನಿರ್ಲಕ್ಷ್ಯ ಮಾಡಲಾಗಿದೆಯೆಂದು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ಕೂಡಲೇ ವರ್ಗಾವಣೆ ರದ್ದುಗೊಳಿಸಿ, ಆಯ್ಕೆ ಪ್ರಕ್ರಿಯೆ ಅರ್ಜಿ ಕರೆಯಬೇಕು, ಅಲ್ಲಿಯವರೆಗೆ ಯಾವುದೇ ಕಾರಣಕ್ಕೂ ಬೇರೆಯವರು ಬಂದು ಇಲ್ಲಿ ಕಾರ್ಯನಿರ್ವಹಿಸುವುದುಕ್ಕೆ ಬಿಡುವುದಿಲ್ಲ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.
ವರ್ಗಾವಣೆ ರದ್ದು: ನಂತರ ಅಧಿಕಾರಿಗಳು ಬಂದು ಪ್ರತಿಭಟನಕಾರರನ್ನು ಮನವಿ ಮಾಡಿಕೊಂಡರೂ ಇಲಾಖೆ ನಿರ್ಧಾರ ಪ್ರಕಟಿಸುವವರೆಗೂ ಜಾಗ ಬಿಟ್ಟು ಕದಲುವುದಿಲ್ಲವೆಂದು ಪಟ್ಟು ಹಿಡಿದಾಗ ಪ್ರತಿಭಟನಕಾರರ ಒತ್ತಡಕ್ಕೆ ಮಣಿದ ಅಧಿಕಾರಿಗಳು ಮಾತನಾಡಿ, ಕೂಡಲೇ ವರ್ಗಾವಣೆ ರದ್ದು ಮಾಡಲಾಗುತ್ತದೆ, ಮತ್ತು ಹಾಲಿ ಕೇಂದ್ರದಲ್ಲಿ ಇರುವ ಸಹಾಯಕಿಯೇ ಹೊಸ ಹುದ್ದೆ ತುಂಬುವವರೆಗೆ ಕಾರ್ಯನಿರ್ವಹಿಸಿಕೊಂಡು ಹೋಗಲು ಸೂಚಿಸಲಾಗುತ್ತದೆ ಎಂದರು.
ಹೊಸ ನೇಮಕಾತಿ ಸಂದರ್ಭದಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಲಾಗುವುದು. ಆಯ್ಕೆ ಪ್ರಕ್ರಿಯೆಯನ್ನು ಕಾಲಮಿತಿ ಹಾಕಿಕೊಂಡು ನಡೆಸಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.
ಪುರಸಭೆ ಉಪಾಧ್ಯಕ್ಷೆ ಜ್ಯೋತಿ ಲಕ್ಷ್ಮೀಯಾದವ್, ದಸಂಸ ಅಧ್ಯಕ್ಷ ರವಿಕುಮಾರ್ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಸ್ಥಳೀಯ ನಿವಾಸಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

