ಚಿತ್ರದುರ್ಗ

ತೋಟಗಾರಿಕೆ ಬೆಳೆ ಬೆಳೆದು ಸದೃಢರಾಗಿ

Published On :

ಚಿತ್ರದುರ್ಗ: ಬಹು ವಾರ್ಷಿಕ ತೋಟಗಾರಿಕಾ ಬೆಳೆಗಳ ಜೊತೆಯಲ್ಲಿ ರೈತರ ಆರ್ಥಿಕ ಸ್ಥಿತಿ ಸುಧಾರಿಸುವ ವಾಣಿಜ್ಯ ಬೆಳೆಗಳಾದ ಹೂವು, ಹಣ್ಣು, ತರಕಾರಿ ಬೆಳೆದು ಆರ್ಥಿಕವಾಗಿ ಸದೃಢರಾಗಬೇಕೆಂದು ಶಾಸಕ ಎಸ್.ಕೆ. ಬಸವರಾಜನ್ ಕರೆಯಿತ್ತರು.
ನಗರದ ತೋಟಗಾರಿಕಾ ಇಲಾಖೆ ಆವರಣದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ ಫಲ-ಪುಷ್ಪ ಪ್ರದರ್ಶನದ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ  ಮಾತನಾಡಿ, ಫಲ-ಪುಷ್ಪ ಪ್ರದರ್ಶನ ಹಮ್ಮಿಕೊಳ್ಳುವುದರಲ್ಲಿ ರೈತರ ಮನಸ್ಥಿತಿಯನ್ನು ಬದಲಾಯಿಸುವ ಉದ್ದೇಶ ಇರುತ್ತದೆ. ರೈತರು ಇಂತಹ ಫಲ-ಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡಿ ತಮ್ಮ ಬೇಸಾಯ ಪದ್ಧತಿಯಲ್ಲಿ ಸುಧಾರಣೆ ಮಾಡಿಕೊಳ್ಳಬೇಕೆಂದು ತಿಳಿಸಿದರು.
ಇತ್ತೀಚೆಗೆ ಪ್ರಕೃತಿ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿವೆ. ಇದರಿಂದ ಪರಿಸರದ ಮೇಲೆ ಹಾನಿ ಆಗುತ್ತಿದ್ದು, ಪರಿಸರ ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಚಿಂತನೆ ಮಾಡಬೇಕಿದೆ. ಕಳೆದ ಮೂರು ದಿನಗಳಿಂದ 10 ಸಾವಿರಕ್ಕೂ ಹೆಚ್ಚಿನ ಜನತೆ ಫಲ-ಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡಿದ್ದಾರೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಜಿ.ಎಚ್. ತಿಪ್ಪಾರೆಡ್ಡಿ ಮಾತನಾಡಿ, ಜಿಲ್ಲೆಯು ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಯೋಗ್ಯವಾಗಿದೆ. ರೈತರು ಹೆಚ್ಚಿನ ಲಾಭ ತರುವ ಮತ್ತು ಬೇಡಿಕೆ ಇರುವ ಹೂವು, ಹಣ್ಣುಗಳನ್ನು  ಬೆಳೆಯಬೇಕು. ಯಾಂತ್ರಿಕ ಬದುಕಿನಿಂದ ಹೊರ ಬರಬೇಕು. ಜಿಲ್ಲೆಯಾದ್ಯಂತ ಬೆಳೆಯುತ್ತಿರುವ ಹಣ್ಣು ಮತ್ತು ಹೂವು ವಿದೇಶಕ್ಕೆ ರಪ್ತು ಆಗುತ್ತಿದೆ. ಮುಂದಿನ ದಿನಗಳಲ್ಲಿ ರಪ್ತು ಪ್ರಮಾಣವನ್ನು ದ್ವಿಗುಣಗೊಳಿಸಲು ರೈತರು ಶ್ರಮಿಸಬೇಕು ಎಂದು ತಿಳಿಸಿದರು.
ಹಿರಿಯೂರು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಜಿ. ಸವಿತಾ ಅವರು ಉತ್ತಮ ಕೆಲಸ ಮಾಡುತ್ತಿದ್ದು, ಸತತ ಮೂರು ವರ್ಷಗಳಿಂದ ರೋಲ್ ಮಾಡೆಲ್ ಬಹುಮಾನ ಪಡೆಯುತ್ತಿದ್ದಾರೆ. ಇದು ಜಿಲ್ಲೆಗೆ ಹೆಮ್ಮೆಯ ವಿಷಯ ಎಂದರು. ಜಿಪಂನಿಂದ ಉದ್ಯೋಗ ಖಾತ್ರಿಯಲ್ಲಿ ಹಿರಿಯೂರಿಗೆ ರು.5 ಕೋಟಿ ನೀಡಲು ಜಿಪಂಗೆ ಸೂಚನೆ ನೀಡುತ್ತೇನೆ. ಈ ಹಣದಲ್ಲಿ ಹೆಚ್ಚಿನ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಉತ್ತೇಜನ ನೀಡಿದಂತಾಗುತ್ತದೆ. ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಅವರು ಕರೆ ನೀಡಿದರು.
ದಾಳಿಂಬೆ ಬೆಳೆಗೆ ಹೆಚ್ಚಿನ ಬೇಡಿಕೆ ಇದ್ದು, ಇದು ರೈತರಿಗೆ ಆರ್ಥಿಕವಾಗಿ ಕೈ ಹಿಡಿಯುವ ಫಲವಾಗಿದೆ. ಆದರೆ, ಕೈಕೊಟ್ಟರೆ ಹೆಚ್ಚಿನ ನಷ್ಟವಾಗುತ್ತದೆ. ತೋಟಗಾರಿಕೆ ಬೆಳೆಗಳಲ್ಲಿ ಹೊಸ ತಂತ್ರಜ್ಞಾನ ಬಳಸಿಕೊಂಡು ವೈಜ್ಞಾನಿಕ ರೀತಿಯಲ್ಲಿ ಬೆಳೆ ಬೆಳೆಯಲು ಅವರು ಹೇಳಿದರು. ಜಿಲ್ಲಾ ಪ್ರಗತಿ ಪರ ರೈತ ವೇದಿಕೆ ಜಿಲ್ಲಾಧ್ಯಕ್ಷ ಸೀತಾರಾಮರೆಡ್ಡಿ ಮಾತನಾಡಿ, ಜಿಲ್ಲೆಗೆ ಗ್ಲಾಸ್  ಹೌಸ್ ಅಗತ್ಯವಿದ್ದು, ರಾಜ್ಯ ಸರ್ಕಾರದ ಮೇಲೆ ಜನಪ್ರತಿನಿಧಿಗಳು ಒತ್ತಡ ತಂದು ಗ್ಲಾಸ್ ಹೌಸ್ ನಿರ್ಮಿಸಬೇಕೆಂದು ಅವರು ಒತ್ತಾಯಿಸಿದರು.
ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಂದ ಫಲ-ಪುಷ್ಪ ಪ್ರದರ್ಶನವನ್ನು ಒಂದು ದಿನ ಮುಂದುವರೆಸುವಂತೆ ಒತ್ತಡ ಬರುತ್ತಿದ್ದು 11ರ ಸೋಮವಾರವೂ ಫಲ-ಪುಷ್ಪ ಪ್ರದರ್ಶನ ಇರುತ್ತದೆ ಎಂದು ಅವರು ತಿಳಿಸಿದರು. ಪದ ನಿಮಿತ್ತ ಕಾರ್ಯದರ್ಶಿ ಸುಧಾಕರ್, ಉಪ ನಿರ್ದೇಶಕ ವಿಜಯಕುಮಾರ್, ಹಿರಿಯ ಸಹಾಯಕ ಉಪ ನಿರ್ದೇಶಕಿ ಡಾ.ಜಿ. ಸವಿತಾ, ಕೆ.ಆರ್. ದೇವರಾಜ್, ಜಿಲ್ಲಾ ಹಾಪ್‌ಕಾಮ್ಸ್ ವೇದಿಕೆ ಅಧ್ಯಕ್ಷ ಬಿ.ಟಿ. ಹನುಮಂತರೆಡ್ಡಿ, ಇಂದೂಧರ್ ಇದ್ದರು.
ರೋಲ್ ಮಾಡೆಲ್ ಡಾ.ಸವಿತಾ: ಹಿರಿಯೂರು ತೋಟಗಾರಿಕೆ ಇಲಾಖೆಗೆ ಫಲ ಪುಷ್ಪ ಪ್ರದರ್ಶನದಲ್ಲಿ ಕಳೆದ ಮೂರು ವರ್ಷಗಳಿಂದ ಉತ್ತಮ ಸಾಧನೆ ಮಾಡಿದ್ದರಿಂದ ರೋಲ್ ಮಾಡೆಲ್ ಹ್ಯಾಟ್ರಿಕ್ ಬಹುಮಾನವನ್ನು ಹಿರಿಯ ಸಹಾಯಕ ಉಪ ನಿರ್ದೇಶಕಿ ಡಾ.ಜಿ. ಸವಿತಾ ಪಡೆದಿದ್ದಾರೆ. ಹಣ್ಣು, ಹೂ, ತರಕಾರಿ, ವಿವಿಧ ತೋಟಗಾರಿಕಾ ಬೆಳೆಗಳನ್ನು ಹೆಚ್ಚು ಬೆಳೆಯುತ್ತಿರುವುದಲ್ಲದೆ ಫಲ ಪುಷ್ಪ ಪ್ರದರ್ಶನದಲ್ಲಿ 150ಕ್ಕೂ ಹೆಚ್ಚು ರೈತರು ತಾವು ಬೆಳೆದ ವಿವಿಧ ಮಾದರಿಯ ಹೂವು, ಹಣ್ಣು, ತರಕಾರಿ ಮತ್ತಿತರ ತೋಟಗಾರಿಕಾ ಬೆಳೆಗಳನ್ನು ಪ್ರದರ್ಶನದಲ್ಲಿ ಇಡುವ ಮೂಲಕ ಹೆಚ್ಚಿನ ಬಹುಮಾನ ಗಳಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದಲೂ ರೋಲ್ ಮಾಡೆಲ್ ಪ್ರಶಸ್ತಿಯನ್ನು ತನ್ನ ಮಡಿಲಿಗೆ ಹಾಕಿಕೊಳ್ಳುತ್ತಿರುವ ಈ ಅಧಿಕಾರಿ ಮಹಿಳೆಯಾಗಿದ್ದೂ ರೈತರೊಂದಿಗೆ ಉತ್ತಮ ಸಂಪರ್ಕ ಸಾಧನೆ ಮಾಡಿ ರೈತರನ್ನು ಉತ್ತೇಜಿಸಿ ಸರ್ಕಾರದ ಸೌಲಭ್ಯಗಳನ್ನು ಶೇ.100ರಷ್ಟು ಸಾಧಿಸಿ ಈ ಪ್ರಶಸ್ತಿ ಪಡೆದಿದ್ದಾರೆ. ಅಲ್ಲದೆ ಗಣ ರಾಜ್ಯೋತ್ಸವ ದಿನ ರಾಜ್ಯ ಸರ್ಕಾರ ನೀಡಿದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಕ್ಲಾಸ್ -1 ಅಧಿಕಾರಿಯಾಗಿರುವ ಡಾ.ಜಿ. ಸವಿತಾ ಪಡೆಯುವ ಮೂಲಕ ತಾಲೂಕು ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.