ಚಿತ್ರದುರ್ಗ

ಧರಣಿ ನಿರತ ದಲಿತರ ತೆರವಿಗೆ ಆದೇಶ

Published On :

ಹಿರಿಯೂರು: ತಾಲೂಕು ಕಚೇರಿಯ ಮುಂದೆ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ಶಿವನಗರ ಗ್ರಾಮದ ದಲಿತ ನಿವಾಸಿಗಳನ್ನು ಸ್ಥಳದಿಂದ ತೆರವುಗೊಳಿಸುವಂತೆ ಪೊಲೀಸ್ ಇಲಾಖೆ ಮತ್ತು ಪುರಸಭೆಗೆ ತಹಸೀಲ್ದಾರ್ ಅವರು ಆದೇಶ ನೀಡಿದ್ದಾರೆ.
 ಧರಣಿ ನಡೆಸುತ್ತಿರುವವರ ಬಹುತೇಕ ಬೇಡಿಕೆಗಳನ್ನು ಈಡೇರಿಸಿದ್ದರೂ ಸಹ ವಿನಾಕಾರಣ ಧರಣಿ ನಡೆಸುತ್ತಿರುವುದು ಸಾರ್ವಜನಿಕರ ಕೆಲಸಗಳಿಗೆ ತೊಂದರೆ ಉಂಟಾಗುತ್ತಿರುವ ಕಾರಣ ಧರಣಿ ನಿರತರನ್ನು ತೆರವುಗೊಳಿಸಲು ಆದೇಶ ನೀಡಿರುವುದಾಗಿ ತಹಸೀಲ್ದಾರ್ ಎಂ. ಮಲ್ಲಿಕಾರ್ಜುನ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು
ಶಾಂತಿಗೆ ಭಂಗ: ಪಟ್ಟಣದ ಮುಖ್ಯ ರಸ್ತೆ, ಬ್ಯಾಂಕ್, ತಾಪಂ, ತಾಲೂಕು ಕಚೇರಿ ಇರುವ ಜಾಗದಲ್ಲಿ ಸಾರ್ವಜನಿಕವಾಗಿ ಒಲೆ ಹೂಡಿ ಬಾಡೂಟ ಮಾಡಿಕೊಂಡು ಉಣ್ಣುವುದು, ಕೊಳಚೆಯ ನೀರನ್ನು ಮೈಮೇಲೇ ಸುರಿದು ಕೊಂಡು ಪ್ರತಿಭಟನೆ ನಡೆಸಿ ಸಾರ್ವಜನಿಕ ಶಾಂತಿಗೆ ಭಂಗತರುತ್ತಿರುವುದರಿಂದ ಧರಣಿ ನಿರತರನ್ನು ತೆರವುಗೊಳಿಸಲಾಗುತ್ತಿದೆ ಎಂದು ಹೇಳಿದರು
ಸಮಸ್ಯೆಗೆ ಮೂಲವಾಗಿದ್ದ ಅಂಗನವಾಡಿ ಕಾರ್ಯಕರ್ತೆ ಹುದ್ದೆಯ ವಿಚಾರದಲ್ಲಿ ಲಕ್ಷ್ಮಮ್ಮ ಎಂಬ ಮಹಿಳೆಯನ್ನೇ ಅಂತಿಮವಾಗಿ ಆಯ್ಕೆಗೊಳಿಸಲಾಗಿದೆ. ಅವರು  ಶಿವನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಈ ಸಂಬಂಧ ದಸಂಸ ಸಂಘಟನೆ ಮತ್ತು ಶಿವನಗರದ ಕೆಲವು ನಿವಾಸಿಗಳು ನಡೆಸುತ್ತಿರುವ ಧರಣಿ ನಡೆಸುತ್ತಿರುವುದು ಸರಿಯಲ್ಲ. ಅಲ್ಲದೆ ಶಿವನಗರ ಗ್ರಾಮದಲ್ಲಿ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆಯೆಂಬ ಪ್ರಕರಣದ ಬಗ್ಗೆ  ಇದುವರೆಗೂ ಯಾವುದೇ ದೂರು ಪೊಲೀಸ್ ಇಲಾಖೆಯಲ್ಲಿ ದಾಖಲಾಗಿಲ್ಲ ಎಂದು ತಹಸೀಲ್ದಾರ್ ಸ್ಪಷ್ಟಪಡಿಸಿದರು.
ಜಮೀನು ಮಂಜೂರು: ಶಿವನಗರ ದಲಿತ ಕಾಲೋನಿಯ ಸಂಪೂರ್ಣ ಸರ್ವೇ ಮಾಡಲಾಗಿದೆ. ಅಲ್ಲಿ ಒಟ್ಟು 31 ಕುಟುಂಬಗಳು ವಾಸವಾಗಿವೆ. 18 ಕುಟುಂಬಗಳಿಗೆ ಮನೆಯಿದ್ದು, 6 ಕುಟುಂಬಗಳು ಗುಡಿಸಲಲ್ಲಿ ವಾಸವಿದ್ದಾರೆ. 7 ಕುಟುಂಬಗಳು ನಿವೇಶನ ರಹಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ನಿವೇಶನ ರಹಿತರಿಗೆ ನಿವೇಶನವನ್ನು ಹಂಚಲು ಗ್ರಾಮದ 113 ಸ.ನಂ. ನಲ್ಲಿ 11 ಗುಂಟೆ ಜಮೀನನ್ನು ಮಂಜೂರು ಮಾಡಿ ಕಳೆದ ತಿಂಗಳು ಮೂರರಂದು ಆದೇಶ ಹೊರಡಿಸಿದ್ದಾರೆ. ಸದರಿ ಜಮೀನನ್ನು ವಿಂಗಡಿಸಿ ಹಂಚಲು ಈಗಾಗಲೇ ಗ್ರಾಪಂ ವಶಕ್ಕೆ ನೀಡಲಾಗಿದೆ. ಹಾಗೆಯೇ 6 ಜನ ವಸತಿಹೀನರಿಗೆ ಅಂಬೇಡ್ಕರ್ ವಸತಿ ಯೋಜನೆಯಡಿ ಮನೆಗಳನ್ನು ಮಂಜೂರು ಮಾಡಲಾಗಿದೆಯೆಂದು ತಿಳಿಸಿದರು.
ಇನ್ನು ಭೂಮಿಯಿರುವ ಪರಿಶಿಷ್ಟ ಜಾತಿಯವರಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಸಂಬಂಧ ಹನುಮಂತಪ್ಪ, ನರಸಪ್ಪ, ಎಸ್.ಕೆ. ದುರಪ್ಪ, ನರಸಮ್ಮ, ಗೋವಿಂದಪ್ಪ ಎಂಬವರಿಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಕೊಳವೆ ಬಾವಿಗಳನ್ನು ಮಂಜೂರು ಮಾಡಲಾಗಿದೆ. ಸ್ವಯಂ -ಉದ್ಯೋಗಕ್ಕೆ ಸಾಲ ಮತ್ತು ಸಹಾಯಧನ ಕೊಡಿಸುವ ವಿಚಾರದಲ್ಲಿ 36 ಫಲಾನುಭವಿಗಳಿಗೆ ಹೈನುಗಾರಿಕೆ ನಡೆಸಲು 5.49 ಲಕ್ಷ ಅಂಬೇಡ್ಕರ್ ಅಭಿವೃದ್ಧಿ ನಿಗಮದ ನೇರ ಸಾಲ ಮಂಜೂರಾಗಿದೆ.
ಖರೀದಿ ಪ್ರಕ್ರಿಯೆ: ಪರಿಶಿಷ್ಟರಿಗೆ ಭೂ-ಒಡೆತನ ಸೌಲಭ್ಯ ಕಲ್ಪಿಸುವ ವಿಚಾರದಲ್ಲಿ ಗ್ರಾಮದಲ್ಲಿ ಈಗಾಗಲೇ 14.30 ಎಕರೆ ಭೂಮಿಯನ್ನು ಗುರುತು ಮಾಡಲಾಗಿದ್ದು, ಸದರಿ ಜಮೀನಿನ ಮಾಲಿಕರು ಭೂಮಿಯನ್ನು ಮಾರಾಟ ಮಾಡಲು ಒಪ್ಪಿದ್ದಾರೆ. ಹಾಗೆಯೇ ಉಪವಿಭಾಗಾಧಿಕಾರಿಗಳು ಸ್ಥಳಪರಿಶೀಲನೆ ನಡೆಸಿದ ನಂತರ ಖರೀದಿ ಪ್ರಕ್ರಿಯೆ ಆರಂಭಗೊಳ್ಳಲಿದ್ದು ಇನ್ನೂ ಹೆಚ್ಚಿನ ಭೂಮಿ ಖರೀದಿಗೆ ಗ್ರಾಮಸ್ಥರೊಡನೆ ಸಂಧಾನ ನಡೆಸಲಾಗುತ್ತಿದೆಯೆಂದು ಹೇಳಿದರು.
ಕೆಲಸಕ್ಕೆ ಬರುತ್ತಿಲ್ಲ: ಇನ್ನು ನಮಗೆ ಗ್ರಾಮದಲ್ಲಿ ಯಾರೂ ಕೂಲಿ ಕರೆಯುತ್ತಿಲ್ಲ ಎಂಬ ಧರಣಿ ನಿರತರ ಆರೋಪಕ್ಕೆ ಸಂಬಂಧಪಟ್ಟಂತೆ 33 ಜನ ಕೂಲಿ ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಲಾಗಿದೆ. ಈ ಸಂಬಂಧ ಆರು ದಿನಗಳ ಕಾಲ ಕೆಲಸ ನಿರ್ವಹಿಸಿದ ಕೂಲಿಯ ಬಾಬ್ತು 30.690 ರು.ಗಳನ್ನು ಅವರ ಬ್ಯಾಂಕ್ ಖಾತೆಗೆ ತುಂಬಲಾಗಿದ್ದು, ಇನ್ನೂ ಸಾಕಷ್ಟು ಕೂಲಿ ದಿನಗಳು ಬಾಕಿಯುಳಿದಿದ್ದರೂ ಅವರುಗಳು ಕೆಲಸಕ್ಕೆ ಬರುತ್ತಿಲ್ಲವೆಂದು ಹೇಳಿದರು.
ಈ ನಡುವೆ ಶಿವನಗರ ಗ್ರಾಮಕ್ಕೆ ಸಂಬಂಧಪಟ್ಟಂತೆ ಉಳುವ ಭೂಮಿಯ ಕೊರತೆಯಿರುವುದರಿಂದ ತಾಲೂಕಿನ ಉಡುವಳ್ಳಿ, ಬೀರೇನಹಳ್ಳಿ, ಪರಮೇನಹಳ್ಳಿ ಬಳಿ ಇರುವ ಸರ್ಕಾರಿ ಭೂಮಿಯನ್ನು ಮಂಜೂರು ಮಾಡುವಂತೆ ಕೋರಿ ಧರಣಿ ನಿರತರು ಬೇಡಿಕೆಯಿಟ್ಟಿದ್ದು ಸದರಿ ಬೇಡಿಕೆಯನ್ನು ಪರಿಶೀಲಿಸಲಾಗಿ ಮೇಲ್ಕಂಡ ಊರುಗಳ ಅಲ್ಲಿನ ಜಾನುವಾರು ಸಂಖ್ಯೆಗೆ ಹೋಲಿಕೆ ಮಾಡಿದಾಗ ಕಡಿಮೆ ಜಮೀನು ಇದೆ.
ಅಲ್ಲದೇ  2007 ರ ಉಚ್ಚನ್ಯಾಯಾಲಯದ ತೀರ್ಪಿನಂತೆ ಗೋಮಾಳ, ಹುಲ್ಲು ಬನ್ನಿ ಕರಾಬು, ಗಾಯಿರಾಣ ಭೂಮಿಯನ್ನು ಖಾಸಗಿ ವ್ಯಕ್ತಿ ಅಥವಾ ಸಂಸ್ಥೆಗಳಿಗೆ ನೀಡಲು ಬರುವುದಿಲ್ಲ. ಒಂದು ವೇಳೆ ಸ್ಥಳೀಯ ಬಗರ್ ಹುಕುಂ ಸಾಗುವಳಿದಾರರು ನಿಗದಿತ ಕಾಲಾವಧಿಯೊಳಗೆ ಜಮೀನು ಕೋರಿ ಅರ್ಜಿ ಸಲ್ಲಿಸಿ ಜಮೀನಿನ ಉಳುಮೆ ಮಾಡುತ್ತಿದ್ದರೆ ಮಾತ್ರ ಮಂಜೂರಾತಿಗೆ ಅವಕಾಶವಿದ್ದು ಜಾನುವಾರುಗಳಿಗೆ ಮೀಸಲಿಟ್ಟ ಜಮೀನನ್ನು ಕೊಡಲು ಬರುವುದಿಲ್ಲವಾದ್ದರಿಂದ ಜಿಲ್ಲಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ಕೋರಿ ಪತ್ರ ಬರೆಯಾಲಾಗಿದೆಯೆಂದು ಅವರು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.