ಜೆಡಿಎಸ್ ಸಭೆಯಲ್ಲಿ ಊಟ: ನೀತಿ ಸಂಹಿತೆ ಉಲ್ಲಂಘನೆ
ಪುತ್ತೂರು: ಪುತ್ತೂರಿನ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಸೋಮವಾರ ನಡೆದ ಜೆಡಿಎಸ್ ಚುನಾವಣಾ ಸಭೆಯಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇರೆಗೆ ಪುತ್ತೂರು ನಗರ ಪೊಲೀಸರು, ಜೆಡಿಎಸ್ ಮುಖಂಡ ಅಶ್ರಫ್ ಕಲ್ಲೇಗ ಸೇರಿದಂತೆ ಹಲವರ ವಿರುದ್ಧ ಕೇಸು ದಾಖಲಿಸಿದ್ದಾರೆ. ಜೆಡಿಎಸ್ ಚುನಾವಣಾ ಸಭೆಗೆ ಆಗಮಿಸಿದ ಸುಮಾರು 200 ಮಂದಿಗೆ ಸ್ಥಳದಲ್ಲಿಯೇ ಊಟದ ವ್ಯವಸ್ಥೆ ಮಾಡಲಾಗಿತ್ತು. ಅಧಿಕಾರಿಗಳ ಅನುಮತಿ ಪಡೆಯದೆ ಸಭೆ ನಡೆಸಿರುವ ಬಗ್ಗೆ ಹಾಗೂ ಊಟದ ವ್ಯವಸ್ಥೆ ಮಾಡಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಲಾಗಿದೆ ಎಂದು ಚುನಾವಣಾ ನೋಡೆಲ್ ಅಧಿಕಾರಿ ರಾಜಶೇಖರ್ ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪುತ್ತೂರು ನಗರ ಠಾಣೆ ಇನ್ಸ್ಪೆಕ್ಟರ್ ಸುದರ್ಶನ್, ಸಬ್ಇನ್ಸ್ಪೆಕ್ಟರ್ ರಫೀಕ್ ಮತ್ತು ಸಿಬ್ಬಂದಿ ಸಭಾಂಗಣದ ಬಳಿ ತೆರಳಿ ಕಾರ್ಯಕ್ರಮ ಕೊನೆಗೊಳ್ಳುತ್ತಿದ್ದಂತೆ ಸ್ಥಳದಲ್ಲಿ ತಂದಿರಿಸಲಾಗಿದ್ದ ಊಟವನ್ನು ವಶಪಡಿಸಿಕೊಂಡು, ಅಲ್ಲಿ ಸೇರಿದ್ದ ಜೆಡಿಎಸ್ ಪ್ರಮುಖರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಅಶ್ಲೀಲ ವರ್ತನೆ: ಯುವಕನ ಸೆರೆ
ಮಂಗಳೂರು: ಕೊಣಾಜೆ ವಿಶ್ವವಿದ್ಯಾಲಯ ಲೇಡಿಸ್ ಹಾಸ್ಟೆಲ್ ಬಳಿ ಪ್ಯಾಂಟ್ ಜಾರಿಸಿ ಲಿಂಗ ಪ್ರದರ್ಶಿಸುತ್ತಿದ್ದ ಯುವಕನೊಬ್ಬನನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ನರಿಂಗಾನ ಮೋರ್ಲ ನಿವಾಸಿ, ಮರದ ಮಿಲ್ನಲ್ಲಿ ಹೆಲ್ಪರ್ ಆಗಿ ಕಾರ್ಯನಿರ್ವಹಿಸುತ್ತಿರುವ ಹರೀಶ್ ಪೂಜಾರಿ (31) ಬಂಧಿತ. ಸೋಮವಾರ ಬೆಳಗ್ಗೆ ಈತ ಲೇಡಿಸ್ ಹಾಸ್ಟೆಲ್ ಬದಿಯಲ್ಲಿ ನಿಂತು ಪ್ಯಾಂಟ್ ಜಿಪ್ ಜಾರಿಸಿ ಅಶ್ಲೀಲವಾಗಿ ವರ್ತಿಸುತ್ತಿದ್ದ. ಇದನ್ನು ನೋಡಿದ ದಾರಿಹೋಕರು ಹಿಡಿದು ಕೊಣಾಜೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ವರ್ತನೆ ತೋರಿದ ಪ್ರಕರಣ ದಾಖಲಿಸಿ, ಆರೋಪಿಯನ್ನು ಕೋರ್ಟ್ಗೆ ಹಾಜರು ಪಡಿಸಿದ್ದಾರೆ. 200 ಭದ್ರತೆ ಪಡೆದು ನ್ಯಾಯಾಧೀಶರು ಜಾಮೀನು ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

