ಆಯುಧಗಳನ್ನು ಠಾಣೆಗೆ ಒಪ್ಪಿಸಿ...
ಮಂಗಳೂರು: ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ವಿವಿಧ ಕಾರಣಗಳಿಂದ ಶಸ್ತ್ರಾಸ್ತ್ರ ಹೊಂದಲು ಪರವಾನಗಿ ಪಡೆದಿರುವವರು ತಮ್ಮಲ್ಲಿರುವ ಆಯುಧಗಳನ್ನು ಏ. 20ರೊಳಗೆ ಸಂಬಂಧಪಟ್ಟ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಠೇವಣಿ ಇಡಲು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಹರ್ಷಗುಪ್ತ ಹೇಳಿದ್ದಾರೆ.
ಬುಧವಾರ ಚುನಾವಣಾ ಸಂಬಂಧ ಕಾನೂನು ಪಾಲನೆಗೆ ಸಂಬಂಧಿಸಿದ ಪೊಲೀಸ್ ಆಯುಕ್ತರ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜತೆ ನಡೆದ ಸಭೆಯಲ್ಲಿ ಮಾತನಾಡಿದರು. ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಕ್ರಮ ಕೈಗೊಂಡಿದ್ದು, ಚುನಾವಣಾ ಅವಧಿಯಲ್ಲಿ ಸಾರ್ವಜನಿಕ ಶಾಂತಿ, ಸುವ್ಯವಸ್ಥೆ, ಸುರಕ್ಷತೆ ಕಾಪಾಡುವ ದೃಷ್ಟಿಯಿಂದ ಆದೇಶ ಹೊರಡಿಸಲಾಗಿದೆ ಎಂದರು.
ಜಿಲ್ಲೆಯಲ್ಲಿನ ಪ್ರಸಕ್ತ ಕಾನೂನು ಸುವ್ಯವಸ್ಥೆ ಪರಿಶೀಲನೆ ನಡೆಸಿದ್ದು, ಬೆಳೆ ರಕ್ಷಣೆಗಾಗಿ, ಆತ್ಮರಕ್ಷಣೆಗಾಗಿ ಮಂಜೂರು ಮಾಡಲಾಗಿರುವ ಆಯುಧ ಪರವಾನಗಿಗಳನ್ನು ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ ಅನ್ವಯ ತಾತ್ಕಾಲಿಕತ ಅವಧಿಗೆ ಅಮಾನತಿನಲ್ಲಿರಿಸಲಾಗುವುದು.
ಬೆಳೆಯ ರಕ್ಷಣೆಗಾಗಿ, ಆತ್ಮರಕ್ಷಣೆಗಾಗಿ ಶಸ್ತ್ರಾಸ್ತ್ರ ಪರವಾನಗಿ ಹೊಂದಿರುವವರು ಶಸ್ತ್ರಾಸ್ತ್ರಗಳನ್ನು ನಮೂನೆ ನಂಬರ್ 14ರ ಪರವಾನಗಿ ಹೊಂದಿರುವ ಅಧಿಕೃತ ಕೋವಿ ಮದ್ದುಗುಂಡು ವ್ಯಾಪಾರಿಗಳಲ್ಲಿ ಠೇವಣಿ ಇಡುವುದು. ಈ ಬಗ್ಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ತಮ್ಮ ಬೆಳೆ ರಕ್ಷಣೆಗಾಗಿ ಆಯುಧದ ತೀರಾ ಅವಶ್ಯಕತೆ ಇದೆ ಎಂದಾದಲ್ಲಿ ಆದೇಶ ಹೊರಡಿಸಿದ ಒಂದುವಾರದೊಳಗೆ ಪೂರಕ ದಾಖಲೆಗಳಲ್ಲಿ ತಹಸೀಲ್ದಾರ್,ರಿಗೆ ಅಹವಾಲು ಸಲ್ಲಿಸಬಹುದು ಎಂದರು.
ಅಲ್ಲದೆ ಆತ್ಮರಕ್ಷಣೆಗಾಗಿ ಶಸ್ತ್ರಾಸ್ತ್ರದ ಅಗತ್ಯವಿದ್ದರೆ ದಾಖಲೆಯೊಂದಿಗೆ ಒಂದುವಾರದೊಳಗೆ ಮಂಗಳೂರು ನಗರ ವ್ಯಾಪ್ತಿಯ ಆಯುಕ್ತರಿಗೆ ಹಾಗೂ ಪೊಲೀಸ್ ಅಧೀಕ್ಷಕರಿಗೆ ಸಲ್ಲಿಸಬಹುದು. ಅಮಾನತಿನ ಅವಧಿ ಮುಗಿದ ತಕ್ಷಣ ಆಯುಧ ಠೇವಣಿ ಪಡೆದ ಅಧಿಕಾರಿ, ಡೀಲರುಗಳು, ಅಂತಹ ಆಯುಧಗಳನ್ನು ಠೇವಣಿದಾರರಿಗೆ ಹಿಂದಿರುಗಿಸುವಂತೆ, ಪರವಾನಿಗೆದಾರರು ಆಯುಧವನ್ನು ಮುರು ಪಡೆದುಕೊಳ್ಳಬಹುದು ಎಂದು ಹೇಳಿದ್ದಾರೆ.
ಎಲ್ಲ ಶಿಕ್ಷಕರ ಗಮನಕ್ಕೆ: ಚುನಾವಣೆ ಹಿನ್ನಲೆಯಲ್ಲಿ ಶಾಲಾ ಶಿಕ್ಷಕರು ಬೇಸಿಗೆ ರಜೆಯಲ್ಲಿ ಕೇಂದ್ರಸ್ಥಾನ ಬಿಟ್ಟು ತೆರಳುವ ಸಂದರ್ಭದಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿ ಕಡ್ಡಾಯವಾಗಿ ಪಡೆಯಬೇಕು ಎಂದು ಸೂಚನೆ ನೀಡಿದ್ದಾರೆ. ಯಶಸ್ವಿ ಚುನಾವಣಾ ಪ್ರಕ್ರಿಯೆಗೆ ಶಿಕ್ಷಕರ ಸಹಕಾರ ಅಗತ್ಯವಿದ್ದು, ಶಿಕ್ಷಕರ ತಮ್ಮ ಶಾಲಾ ಮುಖ್ಯ ಶಿಕ್ಷಕರೊಂದಿಗೆ ಸಂಪರ್ಕದಲ್ಲಿರಬೇಕು ಎಂದರು.
ಚುನಾವಣೆ ಪ್ರಚಾರ ಅನುಮತಿ ಪಡೆಯಲು ಏಕಗವಾಕ್ಷಿ ಕೇಂದ್ರ: ಚುನಾವಣೆ ಸಂದರ್ಭ ಪ್ರಚಾರ, ಮೆರವಣಿಗೆ, ಸಾರ್ವಜನಿಕ ಸಮಾರಂಭಗಳಿಗೆ ಸಂಬಂಧಿಸಿದಂತೆ ಪರವಾನಗಿ ಪಡೆಯಲು ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. 8 ವಿಧಾನಸಭಾ ಕ್ಷೇತ್ರಗಳ ಆರ್.ಒ ಕಚೇರಿಗಳಲ್ಲಿ ಏಕಗವಾಕ್ಷಿ ಕೇಂದ್ರ ಕಾರ್ಯನಿರ್ವಹಿಸಲಿದೆ ಎಂದರು.
ಕಳೆದ ಚುನಾವಣೆಗಳಲ್ಲಿ ರಾಜಕೀಯ ಕಾರ್ಯಕ್ರಮಗಳಿಗೆ ಪರವಾನಿಗೆ ಪಡೆಯಲು ವಿವಿಧ ಇಲಾಕೆಗಳಿಗೆ ತೆರಳಿ ಪಡೆಯಬೇಕಾಗಿರುವುದರಿಂದ ತೀರಾ ವಿಳಂಬವಾಗುತ್ತಿದೆ ಎಂಬ ದೂರುಗಳ ಹಿನ್ನಲೆಯಲ್ಲಿ ಈ ಹೊಸ ವ್ಯವಸ್ಥೆ ರೂಪಿಸಲಾಗಿದೆ ಎಂದು ಹೇಳಿದರು.
ಬೇರೆ ಬೇರೆ ಇಲಾಖೆಗಳ ಅನುಮತಿಗಾಗಿ ಆಯಾ ಇಲಾಖೆಗಳಿಗೆ ಅಲೆಯುವುದನ್ನು ಈ ವ್ಯವಸ್ಥೆ ತಪ್ಪಿಸಲಿದೆ. ಜಿಲ್ಲಾಧಿಕಾರಿಗಳು, ವಿವಿಧ ಇಲಾಖೆಯ ಮುಖ್ಯಸ್ಥರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ. ಪೊಲೀಸ್ ಇಲಾಖೆ- ಸರ್ಕಲ್ ಇನ್ಸ್,ಪೆಕ್ಟರ್, ಸಾರಿಗೆ ಇಲಾಖೆ- ಸಾರಿಗೆ ಅಧಿಕಾರಿ, ಸ್ಥಳೀಯ ಸಂಸ್ಥೆ- ನಗರ ಆಯುಕ್ತ ಮುಖ್ಯಾಧಿಕಾರಿ, ಗ್ರಾಮಾಂತರ- ಕಾರ್ಯನಿರ್ವಾಹಣಾಧಿಕಾರಿ, ತಾಲೂಕು ಪಂಚಾಯ್ತಿ, ಚುನಾವಣಾಧಿಕಾರಿ ಕಚೇರಿ- ಸಹಾಯಕ ಚುನಾವಣಾಧಿಕಾರಿಗಳು ತಂಡದ ಸದಸ್ಯರಾಗಿರುತ್ತಾರೆ.
ಸಹಾಯಕ ಚುನಾವಣಾಧಿಕಾರಿಯವರು ಅರ್ಜಿಯನ್ನು ಒಂದು ಗಂಟೆಯೊಳಗೆ ಸಂಬಂಧಿಸಿತ ಇಲಾಖೆ. ನೋಡಲ್ ಅಧಿಕಾರಿಯವರಿಗೆ ತಲುಪಿಸುವರು. ಇಲಾಖೆಯ ನೋಡಲ್ ಅಧಿಕಾರಿಗಳು 24 ಗಂಟೆಯೊಳಗೆ ಅಧೀನ ಹಂತದ ಕಚೇರಿಯಿಂದ ಅರ್ಜಿಯ ಕುರಿತು ನಿಯಾಮನುಸಾರ ಅಭಿಪ್ರಾಯ ಪಡೆದು ಸಹಾಯಕ ಚುನಾವಣಾಧಿಕಾರಿವರಿಗೆ ಲಿಖಿತವಾಗಿ ನೀಡುವುದು.
ಸಹಾಯಕ ಚುನಾವಣಾಧಿಕಾರಿಯವರು ಪರಿಶೀಲಿಸಿ ಪುರಸ್ಕರಿಸಬಹುದಾದ ಅರ್ಜಿಯನ್ನು ಚುನಾವಣಾಧಿಕಾರಿ ಒಪ್ಪಿಸುವುದು. ಚುನಾವಣಾಧಿಕಾರಿವವರು ನಿಯಮಾನುಸಾರ ಅನುಮತಿ ನೀಡಿ ಈ ಕುರಿತು ಜಿಲ್ಲಾ ಕಂಟ್ರೋಲ್ ರೂಂ(1077)ಗೆ ಮಾಹಿತಿ ನೀಡುವುದು. ಅನುಮತಿ ನೀಡಿರುವ ಪ್ರಕರಣಗಳನ್ನು ಚುನಾವಣಾ ಖರ್ಚು ವೆಚ್ಚಗಳ ಲೆಕ್ಕಾಚಾರದ ಉದ್ದೇಶಕ್ಕಾಗಿ ಮತ್ತು ಮಾದರಿ ನೀತಿ ಸಂಹಿತೆಯ ಪಾಲನೆಗಾಗಿ ನಿಗದಿತ ತಂಡಗಳು ಮುಂಚಿತವಾಗಿ ಚುನಾವಣಾಧಿಕಾರಿಗಳಿಗೆ ತಿಳಿಸಿವುದು.
ಪಕ್ಷಗಳು, ಅಭ್ಯರ್ಥಿಗಳು ರಾಜಕೀಯ ಸಭೆ, ಸಮಾರಂಭ, ಸಮಾವೇಶ, ರ್ಯಾಲಿ, ಯಾವುದೇ ಚುನಾವಣಾ ಸಂಬಂಧಿ ಕಾರ್ಯಕ್ರಮ ನಡೆಸುವಾಗ ಮಾದರಿ ನೀತಿ ಸಂಹಿತೆ ಪಾಲನೆ ಕಡ್ಡಾಯ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

