ಸರ್ಕಾರಿ ಬಸ್ ಚಾಲಕಗೆ ಹಲ್ಲೆ ಆರೋಪಿಗಳಿಗೆ ಜಾಮೀನು
ಪುತ್ತೂರು: ಕರ್ತವ್ಯನಿರತ ಕೆಎಸ್,ಆರ್,ಟಿಸಿ ಬಸ್ಸು ಚಾಲಕನಿಗೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿದ್ದ 9 ಮಂದಿ ಆರೋಪಿಗಳಿಗೆ ಪುತ್ತೂರು ತ್ವರಿತಗತಿ ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ. ಮಾ.22ರಂದು ಸವಣೂರು ಸಮೀಪದ ಪರಣೆ ಎಂಬಲ್ಲಿ ಬಸ್ಸು ಚಾಲಕ ಪ್ರಶಾಂತ್ ಎಂಬವರಿಗೆ ಹಲ್ಲೆ ನಡೆಸಿದ ಆರೋಪಿಗಳಾದ ಪೆರುವಾಜೆಯ ಅಬೂಬಕ್ಕರ್ ಮತ್ತು ರಫೀಕ್, ಸವಣೂರಿನ ಶಮೀರ್, ಇಕ್ಬಾಲ್, ಬಶೀರ್, ತಾಹಿರ್ ಫೈಝಲ್ ಮತ್ತು ಅಶ್ರಫ್ ಹಾಗೂ ಬೆಳಂದೂರಿನ ಯಾಕೂಬ್ ಎಂಬವರು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿಪುರಸ್ಕರಿಸಿದ ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಡಬ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಇನ್ನೊಬ್ಬ ಆರೋಪಿ ಸವಣೂರಿನ ಅಶ್ರಫ್ ಎಂಬಾತನನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ವರದಕ್ಷಿಣೆ: ಪತಿ, ಅತ್ತೆಗೆ ಜಾಮೀನು
ಪುತ್ತೂರು: ಮಹಿಳೆಯ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿದ್ದ ಆಕೆಯ ಪತಿ ಮತ್ತು ಅತ್ತೆಗೆ ಪುತ್ತೂರಿನ ತ್ವರಿತಗತಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರುಗೊಳಿಸಿದೆ. ಪುತ್ತೂರು ತಾಲೂಕಿನ ಕೆಮ್ಮಿಂಜೆ ಗ್ರಾಮದ ನೈತಾಡಿ ನಿವಾಸಿ ಅಬ್ಬಾಸ್ ಎಂಬವರ ಪುತ್ರಿ ಅಸ್ಮಾ ಎಂಬವರಿಗೆ ವರದಕ್ಷಿಣೆ ತರುವಂತೆ ಆಗ್ರಹಿಸಿ ಗಂಭೀರ ಹಲ್ಲೆ ನಡೆಸಿ ಗಾಯಗೊಳಿಸಿದ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ನಿವಾಸಿಗಳಾದ ಇಸಾಕ್ ಮತ್ತು ಆತನ ತಾಯಿ ಆಸಿಯಮ್ಮ ಜಾಮೀನು ಪಡೆದುಕೊಂಡ ಆರೋಪಿಗಳು. ಕಳೆದ ಒಂದು ವರ್ಷಗಳ ಹಿಂದೆ ಅಸ್ಮಾ ಅವರನ್ನು ವಿವಾಹವಾಗಿದ್ದ ಇಸಾಕ್ ಬಳಿಕ ತನ್ನ ತಾಯಿ ಆಸಿಯಮ್ಮ ಅವರೊಂದಿಗೆ ಸೇರಿಕೊಂಡು ಹೆಚ್ಚಿನ ವರದಕ್ಷಿಣೆ ತರುವಂತೆ ಪತ್ನಿಗೆ ದೈಹಿಕ ಹಿಂಸೆ ನೀಡುತ್ತಿದ್ದ ಎನ್ನಲಾಗಿದ್ದು, ಕೆಲ ದಿನಗಳ ಹಿಂದೆ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದಾಗಿ ದೂರು ದಾಖಲಾಗಿತ್ತು. ಗಾಯಾಳು ಅಸ್ಮ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಪುತ್ತೂರು ತ್ವರಿತಗತಿ ನ್ಯಾಯಾಲಯ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರುಗೊಳಿಸಿದೆ.
ತಾಯಿ- ಮಗಳು ನಾಪತ್ತೆ
ಬಂಟ್ವಾಳ: ಬೀಡಿ ಕಚೇರಿಗೆ ತೆರಳಿದ ಮಹಿಳೆ ತನ್ನ ಮಗಳೊಂದಿಗೆ ಕಾಣೆಯಾದ ಘಟನೆ ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಸಾಣೂರು ಪದವಿನಲ್ಲಿ ನಡೆದಿದೆ. ಇಲ್ಲಿನ ಬಾಬು ಪೂಜಾರಿ ಎಂಬವರ ಪತ್ನಿ ಮೋಹಿನಿ (35) ಕೈಕಂಬದ ಬೀಡಿ ಕಾರ್ಮಿಕರ ಕಚೇರಿಗೆ ಹೋಗಿ ಅಲ್ಲಿಂದ ತಲೆನೋವಿಗೆ ಔಷಧಿ ತೆಗೆದುಕೊಂಡು ಬರುತ್ತೇನೆ ಎಂದು ಆಕೆಯ ಮಗಳು ಮನೀಷಾಳನ್ನು (9) ಕರೆದುಕೊಂಡು ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದಾಳೆ. ಇವಳಿಗೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ನರೇಂದ್ರ ಎಂಬವನ ಪರಿಚಯವಿದ್ದು, ಆತನೊಂದಿಗೆ ತೆರಳಿರಬೇಕೆಂದು ಶಂಕಿಸಲಾಗಿದೆ. ಈ ಬಗ್ಗೆ ಆಕೆಯ ಪತಿ ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ತಾಯಿ ಮಗಳ ಮಾಹಿತಿ ಸಿಕ್ಕಿದರೆ ಬಂಟ್ವಾಳ ಗ್ರಾಮಾಂತರ ಠಾಣೆಯ ದೂರವಾಣೆ ಸಂಖ್ಯೆ 08255235000 ಸಂಪರ್ಕಿಸುವಂತೆ ಎಸ್,ಐ ಮಹೇಶ್ ಪ್ರಸಾದ್ ಪ್ರಕಟಣೆಯಲ್ಲಿ ಕೋರಿದ್ದಾರೆ.
ಮದ್ಯ ಅಕ್ರಮ ಮಾರಾಟ: ಜಾಮೀನು
ಪುತ್ತೂರು: ಅಕ್ರಮ ಮದ್ಯ ಮಾರಾಟ ಪ್ರಕರಣಕ್ಕೆ ಸಂಬಧಿಸಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಯನ್ನು ಪುತ್ತೂರು ತ್ವರಿತಗತಿ ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ. ಉಪ್ಪಿನಂಗಡಿ ಸುಬ್ರಹ್ಮಣ್ಯ ರಸ್ತೆ ಕ್ರಾಸ್ ಬಳಿ ಅಂಗಡಿಯೊಂದರಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಸುತ್ತಿದ್ದ ಉಮೇಶ್ ಪೂಜಾರಿ ಜಾಮೀನು ಪಡೆದ ಆರೋಪಿ. ಈತನ ಅಂಗಡಿಗೆ ದಾಳಿ ನಡೆಸಿದ ಉಪ್ಪಿನಂಗಡಿ ಪೊಲೀಸರು ಅಂಗಡಿಯಲ್ಲಿ ಅಕ್ರಮವಾಗಿ ದಾಸ್ತಾನಿರಿಸಲಾಗಿದ್ದ 88 ಬಾಟಲಿ ಮದ್ಯವನ್ನು ವಶಕ್ಕೆ ಪಡೆದುಕೊಂಡು ಆರೋಪಿ ಉಮೇಶ್ ಪೂಜಾರಿಯನ್ನು ಬಂಧಿಸಿದ್ದರು. ಬಳಿಕ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಇದೀಗ ಆತನಿಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿದೆ.
ಕೊಲ್ಲೂರು ದೇವಳದಲ್ಲಿ ಪರ್ಸ್ ಕಳವು
ಕೊಲ್ಲೂರು: ಇಲ್ಲಿನ ದೇವಾಲಯಕ್ಕೆ ಬಂದಿದ್ದ ಚೆನ್ನೈಯ ಭಕ್ತರೊಬ್ಬರ ಪರ್ಸು- ನಗದನ್ನು ಕಳವು ಮಾಡಿದ ಘಟನೆ ಮಂಗಳವಾರ ಸಂಜೆ ನಡೆದಿದೆ. ಪರ್ಸು ಕಳೆದುಕೊಂಡವರು ಚೆನ್ನೈನ ಅಣ್ಣಾನಗರದ ಗೋಲ್ಡನ್ ಕಾಲೋನಿಯ ನಿವಾಸಿ ಡಾ. ಆರ್. ಸುಬ್ರಹ್ಮಣ್ಯನ್ ದೇವಸ್ಥಾನದಲ್ಲಿ ದರ್ಶನ ಪಡೆಯಲು ಪ್ರವೇಶ ದ್ವಾರ ಬಾಗಿಲ ಬಳಿ ನಿಂತಿರುವಾಗ ಅವರ ಜೇಬಿನಲ್ಲಿದ್ದ ಪರ್ಸು ಕಳವಾಗಿದೆ. ಅದರಲ್ಲಿ ರು. 5,000 ನಗದು, ಎ.ಟಿ.ಎಂ ಕಾರ್ಡು, ಡೆಬಿಟ್ ಕಾರ್ಡು ಮತ್ತು ಐ.ಡಿ. ಕಾರ್ಡು ಇತ್ತು ಎಂದವರು ನೀಡಿದ ದೂರಿನಂತೆ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾರಿಗೆ ಆಕಸ್ಮಿಕ ಬೆಂಕಿ
ವಿಟ್ಲ: ಮನೆ ಪಕ್ಕ ನಿಲ್ಲಿಸಿದ್ದ ಲಾರಿಗೆ ಬೆಂಕಿ ತಗುಲಿ ಭಾರಿ ಹಾನಿಯಾದ ಘಟನೆ ಬುಧವಾರ ರಾತ್ರಿ ನೆತ್ರಕೆರೆಯಲ್ಲಿ ನಡೆದಿದೆ. ವಿಟ್ಲ ಕಸಬಾ ಗ್ರಾಮದ ನೆತ್ರಕೆರೆ ಬಸವನಗುಡಿ ನಿವಾಸಿ ನಾಗೇಶ್ ಎಂಬವರಿಗೆ ಸೇರಿದ ಲಾರಿಯನ್ನು ದಿನದ ಟ್ರಿಪ್ ಮುಗಿಸಿ ಚಾಲಕ ಮನೆಯ ಪಕ್ಕದಲ್ಲಿ ನಿಲ್ಲಿಸಿದ್ದ. ರಾತ್ರಿ 8.30ರ ಸುಮಾರಿಗೆ ಲಾರಿಯಿಂದ ಹೊಗೆ ಬರುತ್ತಿದ್ದುದನ್ನು ಮನೆಯವರು ಗಮನಿಸಿದ್ದಾರೆ. ಹೋಗಿ ನೋಡಿದಾಗ ಮುಂಭಾಗ ಬೆಂಕಿಗೆ ಆಹುತಿಯಾಗುವ ಜೊತೆಗೆ ಲಾರಿಯ ದಾಖಲೆಗಳು ಸಂಪೂರ್ಣ ಭಸ್ಮವಾಗಿದ್ದವು. ಸ್ಥಳೀಯರ ನೆರವಿನೊಂದಿಗೆ ಬೆಂಕಿ ನಂದಿಸುವ ಕಾರ್ಯ ಮಾಡಲಾಯಿತಾದರೂ ಸ್ಥಳಕ್ಕೆ ಬಂಟ್ವಾಳ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಘಟನೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಬೆಂಕಿಗೆ ಲಾರಿಯ ಬ್ಯಾಟರಿಯಲ್ಲಾದ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ತಿಳಿದು ಬಂದಿದೆ.
ಅಪಘಾತ; ಬೈಕ್ ಸವಾರನಿಗೆ ಗಾಯ
ಕಾರ್ಕಳ: ತಾಲೂಕಿನ ಕುಕ್ಕುಂದೂರು ಶಾಲೆ ಬಳಿ ಟಾಟಾ ಏಸ್ ಗೂಡ್ಸ್ ವಾಹನ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಎರ್ಲಪಾಡಿ ನಿವಾಸಿ ಸಂಜೀವ ಎಂಬವರು ಗಾಯಗೊಂಡಿದ್ದಾರೆ. ಕಾರ್ಕಳ ಉಡುಪಿ ಮುಖ್ಯ ರಸ್ತೆಯತ್ತ ಹೋಗುತ್ತಿದ್ದ ಇವರ ಬೈಕಿಗೆ ಅತೀವೇಗದಿಂದ ಬಂದ ಗೂಡ್ಸ್ ವಾಹನ ಡಿಕ್ಕಿ ಹೊಡೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

