ದಕ್ಷಿಣ ಕನ್ನಡ

ಚಿಕ್ಕವರಿಗೂ, ದೊಡ್ಡವರಿಗೂ ಇದು ಪರೀಕ್ಷೆಯ ಕಾಲ!

Published On :

ಸುಳ್ಯ: ಎಸ್‌ಎಸ್‌ಎಲ್‌ಸಿ ಮಕ್ಕಳು ಪರೀಕ್ಷೆ ಬರೆಯುತ್ತಿದ್ದಾರೆ, ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭಗೊಂಡಿದೆ, ರೈತರು ನೀರಿಲ್ಲದೆ ಚಡಪಡಿಸುತ್ತಿದ್ದಾರೆ, ಜನರು ತೀವ್ರ ವಿದ್ಯುತ್ ಕ್ಷಾಮದಿಂದಾಗಿ ಗಾಡಾಂಧಕಾರದಲ್ಲಿದ್ದಾರೆ.
ಕಳೆದ ಮೂರು ವಾರಗಳಿಂದ ಸುಳ್ಯ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ಗಂಭೀರವಾಗಿದೆ. ಪ್ರತಿಅರ್ಧ ಅಥವಾ ಒಂದು ಗಂಟೆಗೆ ಒಮ್ಮೆ ವಿದ್ಯುತ್ ಕಡಿತ ಉಂಟಾಗುತ್ತಿದೆ. ನಗರದಲ್ಲಿ ಇದಕ್ಕೆ ಸಮಯ ನಿಗದಿಪಡಿಸಿದ್ದರೂ ಗ್ರಾಮೀಣ ಭಾಗದಲ್ಲಿ ಇದೂ ಅನ್ವಯವಾಗುವುದಿಲ್ಲ. ಹೀಗಾಗಿ ಬಳಕೆದಾರರು ಮೆಸ್ಕಾಂಗೆ ಹಿಡಿಶಾಪ ಹಾಕುವಂತಾಗಿದೆ.
ಪರೀಕ್ಷಾ ಕಾಲ: ಉಡುಪಿ ಪವರ್ ಕಾರ್ಪೊರೇಷನ್‌ನಲ್ಲಿ ಕಲ್ಲಿದ್ದಲು ಕೊರತೆಯಿಂದ ವಿದ್ಯುತ್ ಉತ್ಪಾದನೆಯಾಗದೆ ಈ ಸಮಸ್ಯೆ ಎಂದು ಮೆಸ್ಕಾಂ ಹೇಳುತ್ತಿದೆ. ಆದರೆ, ಸಮಸ್ಯೆಗೆ ಉತ್ತರ ಹುಡುಕುವ ಪ್ರಯತ್ನ ಯಾರಿಂದಲೂ ಆಗುತ್ತಿಲ್ಲ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ತಮ್ಮ ಬದುಕಿನ ಅತ್ಯಂತ ಮುಖ್ಯ ಘಟ್ಟವಾಗಿರುವ ಪರೀಕ್ಷೆ ನಡೆಯುತ್ತಿದೆ. ವಿದ್ಯುತ್ ಸಮಸ್ಯೆಯಿಂದ ಸರಿಯಾಗಿ ಅಭ್ಯಾಸ ಮಾಡಲು ವಿದ್ಯಾರ್ಥಿಗಳಿಗೆ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಪರೀಕ್ಷೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಒಣಗಿದ ತೋಟ: ಬಿರುಬೇಸಗೆ ಉರಿಗೆ ಅಡಕೆ ತೋಟಗಳು ಒಣಗಿ ಹೋಗುತ್ತಿದ್ದು, ಅಡಕೆ ಬೆಳೆಗಾರರು ಕಂಗಾಲಾಗಿದ್ದಾರೆ. ತೋಟಕ್ಕೆ ನೀರು ಹಾಯಿಸಲು ತ್ರೀ ಫೇಸ್ ವಿದ್ಯುತ್‌ಗಾಗಿ ಕಾಯುತ್ತಿರುವ ಅವರ ನಿರೀಕ್ಷೆ ಹುಸಿಯಾಗುತ್ತಿದೆ. ರಾತ್ರಿಯೂ ಆಗಾಗ ಕೈ ಕೊಡುವ ವಿದ್ಯುತ್‌ನಿಂದಾಗಿ ತೋಟಕ್ಕೆ ಹೋಗಿ ನೀರು ಹಾಯಿಸಿ ಮನೆಗೆ ಬರುವಷ್ಟರಲ್ಲಿ ವಿದ್ಯುತ್ ನಾಪತ್ತೆಯಾಗಿರುತ್ತದೆ. ಹೀಗಾಗಿ ಕೃಷಿಕರು ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯುವಂತಾಗಿದೆ.
ನೀರಿನ ಕೊರತೆ: ಇದಲ್ಲದೆ ಹಲವು ಊರುಗಳು ಪಂಚಾಯಿತಿಯ ಕುಡಿಯುವ ನೀರಿನ ವ್ಯವಸ್ಥೆಯನ್ನು ಉಪಯೋಗಿಸುತ್ತಿದ್ದು, ವಿದ್ಯುತ್ ಕೊರತೆಯಿಂದಾಗಿ ಕುಡಿಯುವ ನೀರಿಗೆ ಬವಣೆಪಡಬೇಕಾದ ಸ್ಥಿತಿ ಎದುರಾಗಿದೆ. ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು, ಬ್ಯಾಂಕ್‌ಗಳು ಕೂಡ ವಿದ್ಯುತ್ ಸಮಸ್ಯೆಯಿಂದ ತೊಂದರೆ ಅನುಭವಿಸುವಂತಾಗಿದೆ. ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆದಾರರು, ತಾಂತ್ರಿಕ ಯಂತ್ರೋಪಕರಣಗಳನ್ನು ಬಳಸಿ ವ್ಯವಹಾರ ನಡೆಸುವ ಬಳಕೆದಾರರು, ಅಂಗಡಿ ವ್ಯಾಪಾರಸ್ಥರು ಹೀಗೆ ಎಲ್ಲರನ್ನೂ ವಿದ್ಯುತ್ ಸಮಸ್ಯೆ ಬಾಧಿಸುತ್ತಿದೆ. ಇದು ಚುನಾವಣಾ ಕಾಲವಾದುದರಿಂದ ಸಮಸ್ಯೆ ಪರಿಹಾರಕ್ಕೆ ಜನಪ್ರತಿನಿಧಿಗಳು ಮುಂದಾಗುತ್ತಿಲ್ಲ. ಸುಳ್ಯಕ್ಕೆ ಬರುವ ಕರೆಂಟ್ ಬೇಡಿಕೆಗಿಂತ ಕಡಿಮೆ ಆಗಿರುವುದರಿಂದ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಬಳಕೆದಾರರು ಮಾತ್ರ ಸಮಸ್ಯೆ ಹರಿಸುವವರು ಯಾರು ಎಂಬ ಗೊಂದಲದಲ್ಲಿ ಇದ್ದಾರೆ.

-ದುರ್ಗಾಕುಮಾರ್ ನಾಯರ್‌ಕೆರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.