ಚುನಾವಣೆ ಬಳಿಕ ಸ್ಮಾರ್ಟ್ಫೋನ್ ವಿವಿಧ ಇಲಾಖಾ ಸೇವೆಗೆ: ಹರ್ಷಗುಪ್ತ
ಮಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಮತಗಟ್ಟೆ ಅಧಿಕಾರಿಗಳು ದ.ಕ. ಜಿಲ್ಲೆಯಲ್ಲಿ ಮೊದಲ ಬಾರಿಗೆ ಸ್ಮಾರ್ಟ್ಫೋನ್ ಬಳಸುತ್ತಿದ್ದಾರೆ. ಚುನಾವಣಾ ಉಸ್ತುವಾರಿ ವಹಿಸಿರುವ ಜಿಲ್ಲಾಧಿಕಾರಿ ಹರ್ಷಗುಪ್ತ, ಏನೆಲ್ಲ ಆಧುನಿಕ ತಂತ್ರಜ್ಞಾನ ಬಳಸಲು ಸಾಧ್ಯವಾಗುತ್ತದೋ ಅದನ್ನೆಲ್ಲ ಜಿಲ್ಲೆಯಲ್ಲಿ ಚುನಾವಣಾ ಯಶಸ್ಸಿಗೆ ಪ್ರಯೋಗ ಮಾಡುತ್ತಿದ್ದಾರೆ.
ಚುನಾವಣೆ ಬಳಿಕ ಈ ಸ್ಮಾರ್ಟ್ಫೋನ್ನ್ನು ಶಿಕ್ಷಣ, ಅಂಗನವಾಡಿ, ಆರೋಗ್ಯ ಇಲಾಖೆಯ ಸೇವೆಗೆ ಬಳಸಿಕೊಳ್ಳಲು ಉದ್ದೇಶಿಸಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, 24 ಮಂದಿ ಸೆಕ್ಟರ್ ಮ್ಯಾಜಿಸ್ಟ್ರೇಟ್, 8 ಮಂದಿ ರಿಟರ್ನಿಂಗ್ ಅಧಿಕಾರಿಗಳಿಗೆ ಸ್ಮಾರ್ಟ್ಫೋನ್ ಒದಗಿಸಲಾಗಿದೆ. ಉಳಿದ 161 ಮಂದಿ ಸೆಕ್ಟರ್ ಅಧಿಕಾರಿಗಳಿಗೆ ಇನ್ನಷ್ಟೆ ಸ್ಮಾರ್ಟ್ಫೋನ್ ಕೊಡಬೇಕು. ಚುನಾವಣಾ ಪೂರ್ವ ಮತಗಟ್ಟೆ ಸಿದ್ಧತೆಯಿಂದ ತೊಡಗಿ ಚುನಾವಣೆ ಮುಕ್ತಾಯವರೆಗೆ ಸ್ಮಾರ್ಟ್ಫೋನ್ ಬಳಕೆಯಲ್ಲಿರಲಿದೆ ಎಂದು ತಿಳಿಸಿದರು.
ಇದಕ್ಕೆ ಬೇಕಾದ ತರಬೇತಿ ಕೊಡಲಾಗಿದೆ. ಬಿಎಸ್ಎನ್ಎಲ್ ಜತೆ ಮಾತುಕತೆ ನಡೆಸಿದ್ದು, ಅಗತ್ಯ ತಾಂತ್ರಿಕ ನೆರವನ್ನು ನೀಡುತ್ತಿದೆ. ಮೊಬೈಲ್ ನೆಟ್ವರ್ಕ್ ಇಲ್ಲದ ಕಡೆಗಳಲ್ಲಿ ತಾತ್ಕಾಲಿಕ ಸ್ಥಿರ ದೂರವಾಣಿ ಸ್ಥಾಪನೆಗೆ ಬಿಎಸ್ಎನ್ಎಲ್ ಸಮ್ಮತಿಸಿದೆ ಎಂದು ಹೇಳಿದರು.
ಅಂತರ್ಜಾಲ ತಾಣಕ್ಕೆ ಅಪ್ಲೋಡ್: ಮತಗಟ್ಟೆಗಳಲ್ಲಿ ಮಾತ್ರವಲ್ಲ ರಾಜಕೀಯ ಪಕ್ಷಗಳು ಅನಧಿಕೃತವಾಗಿ ಮತದಾರರನ್ನು ಕರೆದುಕೊಂಡು ಬರುವುದು, ನೀತಿಸಂಹಿತೆ ಉಲ್ಲಂಘಿಸುವ ಯಾವುದೇ ಪ್ರಕರಣಗಳನ್ನು ಸ್ಮಾರ್ಟ್ಫೋನ್ಗಳಲ್ಲಿ ಸೆರೆಹಿಡಿದು ಆಯೋಗದ ವೆಬ್ಸೈಟ್ಗೆ ಅಪ್ಲೋಡ್ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಣ್ಣಪ್ರಮಾಣದ ವಿಡಿಯೋ ಚಿತ್ರೀಕರಣವನ್ನೂ ಸ್ಮಾರ್ಟ್ಫೋನ್ಗಳಲ್ಲಿ ಮಾಡಬಹುದು. ಇದಲ್ಲದೆ ವಾಕಿಟಾಕಿ ಕ್ಷಿಪ್ರ ಸ್ಪಂದನಕ್ಕೆ ಚಾಲನೆಯಲ್ಲಿರುತ್ತದೆ ಎಂದರು.
ಆಡಳಿತಾತ್ಮಕ ಉದ್ದೇಶಕ್ಕೆ ಬಳಕೆ: ಚುನಾವಣೆ ಬಳಿ ಈ ಸ್ಮಾರ್ಟ್ಫೋನ್ಗಳನ್ನು ಆಡಳಿತಾತ್ಮಕ ಉದ್ದೇಶಕ್ಕೆ ಬಳಕೆ ಮಾಡಲು ನಿರ್ಧರಿಸಲಾಗಿದೆ. ಶಿಕ್ಷಣ ಇಲಾಖೆಯಲ್ಲಿ ಶಾಲಾ ತಪಾಸಣೆಗೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಅಂಗನವಾಡಿ ಸೂಪರ್ವೈಸರ್ಗೆ, ಆರೋಗ್ಯ ಇಲಾಖೆಯಲ್ಲಿ ಆರೋಗ್ಯ ಸಹಾಯಕರಿಗೆ ನೀಡಲಾಗುವುದು. ಸ್ಮಾರ್ಟ್ಫೋನ್ ಖರೀದಿಗೆ ಚುನಾವಣಾ ಬೊಕ್ಕಸದಿಂದ ಬಳಸದೆ, ಆಯಾ ಇಲಾಖೆಗಳು ಒದಗಿಸಲಿವೆ ಎಂದರು.
ಕಂಟ್ರೋಲ್ ರೂಂ: ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಕಂಟ್ರೋಲ್ ರೂಂನ್ನು ಅಭಿವೃದ್ಧಿಪಡಿಸಲಾಗುವುದು. ಚುನಾವಣೆಗೆ ಸಂಬಂಧಿಸಿ ಕುಂದುಕೊರತೆ ಆಲಿಕೆಗೆ, ಅಧಿಕಾರಿಗಳ ಜತೆ ನೇರ ಸಂಪರ್ಕಕ್ಕೆ ಹಾಗೂ ಮುಂದೆ ಆಡಳಿತಾತ್ಮಕ ಉದ್ದೇಶಕ್ಕೆ ಬಳಸಿಕೊಳ್ಳಲಾಗುವುದು. 1077 ನಂಬರಿಗೆ ದಿನದ 24 ಗಂಟೆ ಯಾವಾಗ ಬೇಕಾದರೂ ಸಮಸ್ಯೆಗಳಿದ್ದರೆ ಕರೆ ಮಾಡಬಹುದು ಎಂದರು.
ಮಾಧ್ಯಮ ನಿಗಾ ಕೇಂದ್ರ: ಜಿಲ್ಲಾ ವಾರ್ತಾ ಇಲಾಖೆಯಲ್ಲಿ ಮಾಧ್ಯಮ ನಿಗಾ ಕೇಂದ್ರ ತೆರೆಯಲಾಗಿದೆ. ಇಲ್ಲಿ ದಿನದ 24 ಗಂಟೆ ಸ್ಥಳೀಯ ಚಾನೆಲ್ಗಳಲ್ಲಿ ಪ್ರಸಾರವಾಗುವ ಜಾಹಿರಾತು ಸೇರಿದಂತೆ ರಾಜಕೀಯ ಪಕ್ಷಗಳ ಪ್ರಚಾರದ ಮೇಲೆ ನಿಗಾ ಇರಿಸಲಾಗುತ್ತದೆ. ಇಲ್ಲಿ 8 ಕೇಬಲ್ ಟಿವಿ ಇದ್ದು, 15 ಕಡೆ ಚಾನೆಲ್ಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮ ಪರಿಶೀಲಿಸಲಾಗುತ್ತಿದೆ. ಅಲ್ಲದೆ ಅವನ್ನು ರೆಕಾರ್ಡ್ ಮಾಡಲಾಗುತ್ತಿದೆ. ಪಾವತಿ ಸುದ್ದಿ ಎಂಬುದು ಗೊತ್ತಾದರೆ ಅದನ್ನು ಆಯಾ ರಾಜಕೀಯ ಪಕ್ಷಗಳ ವೆಚ್ಚದ ಲೆಕ್ಕಕ್ಕೆ ತೆಗೆದುಕೊಳ್ಳಲಾಗುವುದು ಎಂದರು.
24 ಹೆಚ್ಚುವರಿ ಚೆಕ್ಪೋಸ್ಟ್: ಜಿಲ್ಲೆಯ ಗಡಿ ಭಾಗಗಳಲ್ಲಿ ಹಾಲಿ ಚೆಕ್ಪೋಸ್ಟ್ಗಳಲ್ಲದೆ, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ 3ರಂತೆ 8 ಕ್ಷೇತ್ರಗಳಲ್ಲಿ 24 ಹೆಚ್ಚುವರಿ ಚೆಕ್ಪೋಸ್ಟ್ಗಳನ್ನು ಹಾಕಲಾಗುವುದು. ಏ.10ರ ವೇಳೆಗೆ ಆಯೋಗದಿಂದ ಬಿಗು ತಪಾಸಣೆ ಪ್ರಾರಂಭವಾಗಲಿದೆ. ಇದಕ್ಕೆ ಬೇಕಾದ ಅಧಿಕಾರಿ, ಸಿಬ್ಬಂದಿಯನ್ನು ಸನ್ನದ್ಧಗೊಳಿಸಲಾಗಿದೆ ಎಂದರು.
ಚುನಾವಣಾ ಪ್ರಚಾರಕ್ಕೆ ಬೇಕಾದ ಅನುಮತಿಗೆ ಸಿಂಗಲ್ ವಿಂಡೋ ವ್ಯವಸ್ಥೆ ಜಾರಿಗೆ ತರಲಾಗಿದ್ದು, ಒಂದೇ ಕಡೆ ಪರವಾನಗಿ ನೀಡಲಾಗುವುದು. ಇದಕ್ಕಾಗಿ ರಾಜಕೀಯ ಪಕ್ಷಗಳು ಇಲಾಖೆಗಳಿಗೆ ಅಲೆಯಬೇಕಾಗಿಲ್ಲ ಎಂದರು.
ಫೇಸ್ಬುಕ್ ಬಚಾವ್: ಫೇಸ್ಬುಕ್ನಂಥ ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣಾ ಪ್ರಚಾರಕ್ಕೆ ನಿರ್ದಿಷ್ಟ ನಿಬಂಧನೆ ಇಷ್ಟರವರೆಗೆ ಆಯೋಗ ಸೂಚಿಸಿಲ್ಲ. ಅಲ್ಲಿ ಜಾಹಿರಾತು ಮಾದರಿಯಲ್ಲಿ ಪ್ರಚಾರ ಮಾಡಿದರೂ ಸೂಕ್ತ ಕ್ರಮದ ಬಗ್ಗೆ ನಿಯಮ ಸ್ಪಷ್ಟವಾಗಿಲ್ಲ. ಆದರೆ ವೆಬ್ಸೈಟ್ಗಳಲ್ಲಿ ಜಾಹಿರಾತು ನೀಡಿದರೆ ಅದನ್ನು ಅಭ್ಯರ್ಥಿ ವೆಚ್ಚಕ್ಕೆ ಪರಿಗಣಿಸಲಾಗುವುದು. ಧಾರ್ಮಿಕ ಕಾರ್ಯಕ್ರಮಗಳಿಗೆ ಯಾವುದೇ ನಿಷೇಧ ಇಲ್ಲ ಎಂದು ಹರ್ಷಗುಪ್ತ ಹೇಳಿದರು.
ಮತದಾರರ ಪಟ್ಟಿಗೆ ನೋಂದಣಿಗೆ ಸ್ವೀಪ್ ಕಾರ್ಯಕ್ರಮದಲ್ಲಿ ಇದುವರೆಗೆ 18 ಸಾವಿರ ಅರ್ಜಿ ಬಂದಿದೆ. 6 ಸಾವಿರ ಅರ್ಜಿ ವಿವೇವಾರಿ ಮಾಡಲಾಗಿದೆ. 2 ಸಾವಿರ ಹೆಸರು ತೆಗೆದುಹಾಕಲಾಗಿದೆ. 6 ಸಾವಿರ ಬೇರೆಡೆಯಿಂದ ಸೇರ್ಪಡೆಗೊಳಿಸಲಾಗಿದೆ ಎಂದರು.
ಒಮ್ಮೆಗೆ 4.2 ಲೀಟರ್ನಷ್ಟು ಮಾತ್ರ ಮದ್ಯ ಸಂಗ್ರಹಿಸಲು ಅವಕಾಶವಿದೆ. ಯಾವುದೇ ಕಾರಣಕ್ಕೂ ಮದ್ಯ ದಾಸ್ತಾನು ಕೂಡದು. ಮದ್ಯ ದಾಸ್ತಾನು ಪತ್ತೆಯಾದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಮಹಾನಗರ ಪಾಲಿಕೆ ಆಯುಕ್ತ ಡಾ.ಹರೀಶ್ ಕುಮಾರ್ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

