ದಕ್ಷಿಣ ಕನ್ನಡ

ಅಕ್ಷರಶಃ ಉರಿದ ಪೆರ್ನೆಯಲ್ಲಿ ಸಾಹಸ ಮೆರೆದ ಗ್ರಾಮಸ್ಥರು

Published On :

ಉಪ್ಪಿನಂಗಡಿ: ಗ್ಯಾಸ್ ಟ್ಯಾಂಕರ್ ಪಲ್ಟಿಯಿಂದ ಉಪ್ಪಿನಂಗಡಿಯ ಪೆರ್ನೆ ಅಕ್ಷರಶಃ ಹೊತ್ತಿ ಉರಿಯಿತು. ಉರಿಯುವ ಬೆಂಕಿಯ ಮಧ್ಯೆ ಐದಾರು ಮಂದಿ ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸುವಲ್ಲಿ ನಾಗರಿಕರು ಸಾಹಸ ಮೆರೆದರು.
 ಬೆಂಕಿಯಲ್ಲಿ ಬೆಂದು ಮುದ್ದೆಯಾದ ಶವಗಳನ್ನು ಹೊರ ತೆಗೆಯುವಲ್ಲಿ ನಾಗರಿಕರು ಸ್ಪಂದಿಸಿದರು. ರಕ್ಷಣಾ ಕಾರ್ಯದಲ್ಲಿ ನವೀನ್ ಕುಮಾರ್, ಶಿವಪ್ಪ ನಾಯ್ಕ್, ಇಕ್ಬಾಲ್, ಗೋಪಾಲ ನಾಯ್ಕ್, ಕಿರಣ್ ಶೆಟ್ಟಿ, ಶರೀಫ್, ಉಮ್ಮರಬ್ಬ, ಸುಧಾಕರ ಶೆಟ್ಟಿ, ನೌಫಾಲ್, ಜಿ.ಪಂ. ಸದಸ್ಯರಾದ ಪ್ರಕಾಶ್ ಶೆಟ್ಟಿ, ಕೇಶವ ಗೌಡ ಮೊದಲಾದವರು ನೇತೃತ್ವ ವಹಿಸಿದ್ದರು.

ದುರಂತ ಸರಮಾಲೆ
ಸಾವನ್ನಪ್ಪಿದ ಶೋಭಾ ಬದುಕೇ ದೊಡ್ಡ ದುರಂತಗಳ ಸರಮಾಲೆಯನ್ನು ಕಾಣುತ್ತಿದೆ. ಪತಿ ಶಂಕರ ರೈ ಮತ್ತು ತನ್ನ ಇಬ್ಬರು ಮಕ್ಕಳನ್ನು ಅಗಲಿರುವ ಶೋಭಾ ರೈ ಜೀವನದಲ್ಲಿ ಈ ಮೊದಲು ದೊಡ್ಡ ದುರಂತ ಎದುರಾಗಿತ್ತು. 1998ರ ಮೇಯಲ್ಲಿ ಉಪ್ಪಿನಂಗಡಿಯ ಕಲ್ಯಾಣ ಮಂಟಪದಲ್ಲಿ ಶಂಕರ ರೈ ಜೊತೆ ವಿವಾಹವಾಗಿದ್ದ ಶುಭದಿನದಂದೇ ಮದುವೆ ಮಂಟಪದಿಂದ ಮನೆಗೆ ನೆಂಟರಿಷ್ಟರನ್ನು ಕರೆದೊಯ್ಯುತ್ತಿದ್ದ ವಾಹನಕ್ಕೆ ಅಡುಗೆ ಅನಿಲದ ಟ್ಯಾಂಕರ್ ಡಿಕ್ಕಿ ಹೊಡೆದು ಬರೋಬ್ಬರಿ 9 ಮಂದಿ ಸಾವನ್ನಪ್ಪಿದ್ದರು. ಇದೀಗ ಮಕ್ಕಳನ್ನು ಶಾಲೆಗೆ ಕಳುಹಿಸಿ, ಮನೆ ಮಂದಿಯ ಬಟ್ಟೆ ಒಗೆಯುತ್ತಿದ್ದ ವೇಳೆ ಮನೆಯ ಬಳಿ ಸಂಭವಿಸಿದ ಟ್ಯಾಂಕರ್ ಅಪಘಾತದಲ್ಲಿ ಮೂಡಿದ್ದ ಬೆಂಕಿಯ ಕೆನ್ನಾಲೆಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಬೆಂಕಿ ವ್ಯಾಪಿಸಿದಾಗ ಜೀವ ರಕ್ಷಣೆಗಾಗಿ ಓಡಾಡಿದ ಈಕೆ ಮನೆಯ ಹಿಂಬಾಗ ಬೆಟ್ಟ ಪ್ರದೇಶವಾಗಿದ್ದ ಹಿನ್ನೆಲೆಯಲ್ಲಿ ಸುಲಲಿತವಾಗಿ ಓಡಿ ರಕ್ಷಿಸಿಕೊಳ್ಳಲು ಅಸಾಧ್ಯವಾಗಿ ಮನೆಯ ಹಿಂಭಾಗದ ತೆಂಗಿನ ಮರದ ಬುಡದಲ್ಲಿ ಸಾವನ್ನಪ್ಪಿ ಬಿದಿದ್ದರು.  

ಮಡಿದವರಿಗೆ ಲಕ್ಷ ಪರಿಹಾರ
ಮಂಗಳೂರು: ಪೆರ್ನೆ ಗ್ಯಾಸ್‌ಟ್ಯಾಂಕರ್ ದುರಂತದಲ್ಲಿ ಮಡಿದವರಿಗೆ ಜಿಲ್ಲಾಡಳಿತ ತಲಾ 1ಲಕ್ಷ ಪರಿಹಾರ ಘೋಷಿಸಿದೆ.  ಶೇ.50ಕ್ಕೂ ಹೆಚ್ಚು ಸುಟ್ಟ ಗಾಯವಿದ್ದವರಿಗೂ 1 ಲಕ್ಷ ಪರಿಹಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಹರ್ಷ ಗುಪ್ತ ತಿಳಿಸಿದ್ದಾರೆ. ಶೇ.50ಕ್ಕಿಂತ ಕಡಿಮೆ ಗಾಯಗೊಂಡವರಿಗೆ 50 ಸಾವಿರ ಪರಿಹಾರ ಧನ ನೀಡಲಾಗುವುದು. ಸಂಬಂಧ ಪಟ್ಟ ಅನಿಲ ಸರಬರಾಜು ಸಂಸ್ಥೆಯಿಂದಲೂ ಸಿಗಬೇಕಾದ ಎಲ್ಲ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ನೊಂದವರಿಗೆ ಡೀವಿ ಸಾಂತ್ವನ
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಮುಖ್ಯ ಮಂತ್ರಿ ಡಿ.ವಿ. ಸದಾನಂದ ಗೌಡ ಮೃತರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಜಿಲ್ಲಾಧಿಕಾರಿಯನ್ನು ಸಂಪರ್ಕಿಸಿ, ಚುನಾವಣಾ ಸಮಯವಾದುದ್ದರಿಂದ ಸರ್ಕಾರದ ವತಿಯಿಂದ ಅಧಿಕಾರಿಗಳೇ ನತದೃಷ್ಟ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವ ಹಾಗೂ ಮನೆ ಕಳೆದುಕೊಂಡು ನಿರ್ಗತಿಕರಾದ ಮಂದಿಗೆ ವಾಸ್ತವ್ಯದ ಅನುಕೂಲತೆ ಮಾಡಿಕೊಡುವ ಕ್ರಮವನ್ನು ತುರ್ತಾಗಿ ಕೈಗೊಳ್ಳುವಂತೆ ವಿನಂತಿಸಿದರು. ಹೆದ್ದಾರಿಯ ಈ ರೀತಿಯ ತಿರುವಿನಲ್ಲಿ ಭವಿಷ್ಯದಲ್ಲಿ ಇಂತಹ ದುರ್ಘಟನೆಯಾದಾಗದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆಯೂ ಕ್ರಮ ಕೈಗೊಳ್ಳಲು ಅವರು ವಿನಂತಿಸಿದರು.

ಹೆದ್ದಾರಿ ಸಂಚಾರ ಅಸ್ತವ್ಯಸ್ತ
ಅಪಘಾತದಿಂದ ಉಂಟಾದ ಅಗ್ನಿ ಅನಾಹುತ ಹಾಗೂ ಅಪಘಾತಕ್ಕಿಡಾದ ಟ್ಯಾಂಕರ್‌ನಿಂದ ನಿರಂತರ ಅನಿಲ ಸೋರಿಕೆಯುಂಟಾದ ಕಾರಣ ರಾ.ಹೆ. 75 (ಮಂಗಳೂರು-ಬೆಂಗಳೂರು)ರಲ್ಲಿ ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ವಾಹನಗಳು ಪುತ್ತೂರು - ಮಾಣಿ ಮಾರ್ಗವಾಗಿ ಸಂಚಾರ ನಡೆಸಿದವು. ಸಂಜೆ 7 ಗಂಟೆ ವೇಳೆಗೆ ಬೆಂಕಿ ಪೂರ್ಣ ಪ್ರಮಾಣದಲ್ಲಿ ನಿಯಂತ್ರಣವಾದ ಬಳಿಕ ಸಂಚಾರ ಯಥಾಸ್ಥಿತಿಗೆ ಮರಳಿತು.

ಮಾನವೀಯ ಕಾರ್ಯ
ದುರಂತದ ನಿರ್ವಹಣೆಗಾಗಿ ನೀರಿನ ಮೂಲಾಶ್ರಯದಿಂದ ನೀರು ಮೇಲೆತ್ತಲು ವಿದ್ಯುತ್ ಅಗತ್ಯ ಮೂಡಿದಾಗ , ತುರ್ತು ಸ್ಪಂದನ ತೋರಿದ ಮೆಸ್ಕಾಂ ಸಿಬ್ಬಂದಿ ಅಪಘಾತದಿಂದ ಹಾನಿಗೀಡಾದ ವಿದ್ಯುತ್ ಸಂಪರ್ಕ ದುರಸ್ತಿ ನಡುವೆಯೂ ವಿದ್ಯುತ್ ಸರಬರಾಜು ನಿರಂತರ ಒದಗಿಸಿ ಸಹಕರಿಸಿದರು.
ಅಗ್ನಿಶಾಮಕ ದಳ ಹೋರಾಟ:  ಆಗಮನದಲ್ಲಿ ವಿಳಂಬ ಲೋಪ  ಹೊರತುಪಡಿಸಿ ಆಗಮಿಸಿದ ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ಹೋರಾಟಮಯವಾಗಿತ್ತು. 13 ಅಗ್ನಿಶಾಮಕ ದಳಗಳನ್ನು ಸನ್ನದ್ಧಗೊಳಿಸಿ, ಯಾವುದೇ ಸಂದರ್ಭದಲ್ಲಿ ಟ್ಯಾಂಕರ್ ಸ್ಫೋಟದ ಭೀತಿಯ ನಡುವೆಯೂ ಹೋರಾಟಮಯ ಕಾರ್ಯಾಚರಣೆ ನಡೆಸಿ ಬೆಂಕಿ ನಿಯಂತ್ರಿಸುವಲ್ಲಿ ಸಿಬ್ಬಂದಿ ಯಶಸ್ಸು ಸಾಧಿಸಿದರು. ಸತತ ಅನಿಲ ಸೋರಿಕೆ ಕಂಡು ಬಂದ ಟ್ಯಾಂಕರನ್ನು ಸತತ ನೀರು ಸಿಂಪಡಿಸುವ ಮೂಲಕ ತಂಪುಗೊಳಿಸಿ ಸಂಭವನೀಯ ಅಪಾಯ ತಡೆಗಟ್ಟಲು ನೆರವಾದರು.

ಪತ್ನಿ ಮಾತು ಜೀವ ಉಳಿಸಿತು

ಘಟನಾ ಸ್ಥಳದ ಬಳಿಯಲ್ಲಿಯೇ ಸುಟ್ಟು ಕರಕಲಾದ ಹಲವು ಮನೆ-ಅಂಗಡಿಗಳ ಪೈಕಿ ಬೈಕ್ ದುರಸ್ತಿಯ ಗ್ಯಾರೇಜ್ ಕೂಡಾ ಅಗ್ನಿಗಾಹುತಿಯಾಗಿತ್ತು. ಈ ಗ್ಯಾರೇಜ್ ಮಾಲೀಕ ಚಂದ್ರಶೇಖರ್ ಎಂದಿನಂತೆ ಬೆಳಗ್ಗೆ ಅಂಗಡಿ ತೆರೆಯಲು ಬಂದಿದ್ದರು. ಆ ವೇಳೆಗೆ ತವರು ಮನೆಯಿಂದ ಹಿಂತಿರುಗಿ ಬಂದಿದ್ದ ಅವರ ಪತ್ನಿ ಗ್ಯಾರೇಜ್ ಬಳಿ ನಿಂತಿದ್ದು, ತನ್ನನ್ನು ಕೂಡಲೇ ಮನೆಗೆ ಬಿಟ್ಟು ಬನ್ನಿ. ಆಮೇಲೆ ಅಂಗಡಿ ತೆರೆಯಿರಿ ಎಂದು ಒತ್ತಾಯಿಸಿದರು. ಪತ್ನಿ ಮಾತಿನಂತೆ ಆಕೆಯನ್ನು  ತನ್ನ ಬೈಕ್‌ನಲ್ಲಿ ಕುಳ್ಳಿರಿಸಿ ಅರ್ಧ ಕಿ.ಮೀ.ನಷ್ಟು ಸಾಗುವಷ್ಟರಲ್ಲಿ ಟ್ಯಾಂಕರ್ ಅಪಘಾತಕ್ಕೀಡಾಗಿ ಉಂಟಾಗಿದ್ದು, ಆ ಮೂಲಕ ಬದುಕುಳಿದಿದ್ದಾರೆ. ಘಟನೆ ಬಳಿಕ ಚಂದ್ರಶೇಖರ್, ಸಂಪೂರ್ಣ ಸುಟ್ಟು ಕರಕಲಾಗಿದ್ದ ತನ್ನ ಗ್ಯಾರೇಜ್‌ನ್ನು ನೋಡುತ್ತಾ ದೇವರು ಪತ್ನಿಯ ರೂಪದಲ್ಲಿ ಬಂದು ನಮ್ಮನ್ನು ಬದುಕಿಸಿದ ಎಂದು ಹೇಳುತ್ತಿದ್ದರು.  

ಪೊಲೀಸರ ಜತೆ ಸಂಘರ್ಷ
ಪರಿಸರವಿಡೀ ಬೆಂಕಿಯಿಂದ ಧಗ ಧಗ ಉರಿಯುತ್ತಿದ್ದರೆ, ಘಟನೆಯಿಂದ ಪ್ರಾಣ ಕಳೆದುಕೊಂಡ ಬಂಧುಗಳ ಕಳವಳ ಮುಗಿಲು ಮುಟ್ಟಿತ್ತು. ತಮ್ಮವರನ್ನು ರಕ್ಷಿಸಲು ಅವರೆಲ್ಲರೂ ಪ್ರಾಣದ ಹಂಗು ತೊರೆದು ಮುಂದಾಗುತ್ತಿದ್ದರೆ, ಇತ್ತ ಅಗ್ನಿ ದುರಂತದ ಪ್ರಮಾಣ ಅಂದಾಜಿಸಲಾಗದೆ ಸ್ಥಳಕ್ಕೇ ಹೋಗಲೂ ಆಗದೇ ಇದ್ದ ಪೊಲಿಸರು, ಹೆಚ್ಚಿನ ಪ್ರಾಣಾಹಾನಿ ತಪ್ಪಿಸಲು ಜನರ ಸಂಚಾರ ತಡೆಗಟ್ಟುತ್ತಿದ್ದರು. ಇದರಿಂದ ರೊಚ್ಚಿಗೆದ್ದ ಜನರು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದು, ನಿಮಗೆ ನಮ್ಮವರನ್ನು ರಕ್ಷಿಸಲು ಅಸಾಧ್ಯವಾದರೆ ನಮಗದಾರೂ ರಕ್ಷಿಸಲು ಅವಕಾಶ ನೀಡಿ ಎಂದು ವಾದಿಸಿದರು. ಬಳಿಕ ಪೊಲಿಸರು ಘಟನಾ ಸ್ಥಳಕ್ಕೆ ಜನರ ಸಂಚಾರ ಮುಕ್ತಗೊಳಿಸಿದರು.

ಬೀಸಿದ ಗಾಳಿ, ತಗ್ಗಿದ ಜ್ವಾಲೆ
ಪ್ರತ್ಯಕ್ಷದರ್ಶಿ ನವೀನ್ ಕುಮಾರ್ ತಿಳಿಸಿದಂತೆ, ಘಟನಾ ಸ್ಥಳದಿಂದ ತುಸು ದೂರದಲ್ಲಿ ಬೈಕ್‌ನಲ್ಲಿ ಸಂಚರಿಸುತ್ತಾ ಬರುತ್ತಿದ್ದ ಇವರಿಗೆ ದಟ್ಟ ಹೊಗೆ ಅದರ ಬೆನ್ನಿಗೆ ಅಗ್ನಿ ಜ್ವಾಲೆಗಳು ಅಲೆ ಅಲೆಯಾಗಿ ಬರುತ್ತಿರುವುದನ್ನು ಕಂಡಿತು. ತಕ್ಷಣ ಬೈಕ್ ಅಲ್ಲೇ ಬಿಟ್ಟು ಓಡಿ ಸುರಕ್ಷಿತ ಸ್ಥಳ ಸೇರಿಕೊಳ್ಳುತ್ತಿದ್ದಂತೆಯೇ ವಿರುದ್ಧ ದಿಕ್ಕಿನಿಂದ ಬೀಸಿ ಬಂದ ಭಾರಿ ಗಾಳಿ ಬೆಂಕಿಯ ಕೆನ್ನಾಲಗೆಯನ್ನು ಹಿಂದಕ್ಕೆ ಒಯ್ಯಲು ಸಹಕಾರಿಯಾಯಿತು. ಇಲ್ಲವಾದರೆ ಪೆರ್ನೆಯ ಇನ್ನೊಂದು ಪಾರ್ಶ್ವದಲ್ಲಿದ್ದ ನೂರಾರು ಜನರು ಬೆಂಕಿಯ ಕೆನ್ನಾಲಗೆಯಲ್ಲಿ ಸಿಲುಕುವ ಸಾಧ್ಯತೆ ಎದುರಾಗುತ್ತಿತ್ತು. ಸೋರಿಕೆಯಾದ ಅನಿಲ ಅಗ್ನಿ ಸ್ಪರ್ಶಗೊಂಡು ಅಲೆ ಅಲೆಯಾಗಿ ಪ್ರಸರಿಸಿತ್ತಾದರೂ ಗಾಳಿಯ ಒತ್ತಡಕ್ಕೆ ಸಿಲುಕಿ ನಿಯಂತ್ರಿಸಲ್ಪಟ್ಟಿತ್ತು.

ವಾಹನಗಳು ಅಗ್ನಿಗಾಹುತಿ
ಘಟನೆಯಿಂದ ಐದು ಮನೆಗಳು ಸಂಪೂರ್ಣ ಸುಟ್ಟು ಹೋಗಿದ್ದು 6 ಅಂಗಡಿಗಳು ಸುಟ್ಟು ಹೋಗಿದೆ. ಒಂದು ಟೆಂಪೋ ಒಂದು ಕಾರು, ನಾಲ್ಕು ದ್ವಿಚಕ್ರ ವಾಹನಗಳು ಬಿಂಕಿಗಾಹುತಿಯಾಗಿದೆ.  ಒಂದು ಓಮ್ನಿ ಕಾರು ತಿಂಡಿಗಳ ಪ್ಯಾಕೆಟನ್ನು ಸ್ಥಳಿಯ ಅಂಗಡಿಗೆ ನೀಡುತ್ತಿದಂತೆಯೇ ಘಟನೆ ಸಂಭವಿಸಿದೆ. ಬೆಂಕಿಗಾಹುತಿಯಾಗುವುದು ತಪ್ಪಿಸಲು ಕಾರು ಚಾಲಕ ವಸಂತ (30) ರಣವೇಗದಲ್ಲಿ ಕಾರನ್ನು ತಿರುಗಿಸಲು ಮುಂದಾದಾಗ ಕಾರು ಮಗುಚಿ ಬಿದ್ದು ಚಾಲಕನೂ ಅದರೊಳಗೆ ಸಿಲುಕಿ ಬೆಂಕಿಯ ಕೆನ್ನಾಲಗೆಗೆ ಸಿಲುಕಿ ಗಂಭೀರವಾಗಿ ಗಾಯಗೊಂಡರು. ಬಳಿಕ ಆಸ್ಪತ್ರೆಗೆ ಕರೆದೊಯ್ದರೂ ಗಂಭೀರ ಸ್ಥಿತಿಯಲ್ಲಿದ್ದ ಅವರು ರಾತ್ರಿ ವೇಳೆಗೆ ಮೃತಪಟ್ಟರು.  ಇದೇ ಸಮಯದಲ್ಲಿ ಗೂಡ್ಸ್ ಟೆಂಪೋದಲ್ಲಿ ತಿಂಡಿ ಸಾಗಿಸುತ್ತಿದ್ದ ಚಾಲಕ ಬೆಂಕಿಯ ಜ್ವಾಲೆ ವ್ಯಾಪಿಸುತ್ತಿರುವುದನ್ನು ಕಂಡು, ವಾಹನವನ್ನು ಹೆದ್ದಾರಿ ಬದಿಯಲ್ಲಿ ನಿಲ್ಲಿಸಿ ಓಡಿ ಪರಾರಿಯಾಗಿದ್ದಾನೆ. ವ್ಯಾಪಿಸಿದ ಬೆಂಕಿಗೆ ತಿಂಡಿಗಳು ತುಂಬಿದ ಟೆಂಪೋ ತಿಂಡಿ ಸಹಿತ ಬೆಂಕಿಗಾಹುತಿಯಾಯಿತು. ಚಾಲಕ ಜೀವ ಸಹಿತ ಬದುಕುಉಳಿದ.  ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠ, ಅಗ್ನಿಶಾಮಕ ದಳದ ವರಿಷ್ಠಾಧಿಕಾರಿ, ಎಲ್ಲಾ ಅಧಿಕಾರಿ ವರ್ಗದವರು ಭೇಟಿ ನೀಡಿ ಪರಿಹಾರ ಮಾರ್ಗದರ್ಶನ ನೀಡಿದರರು.

ಪುಟಾಣಿಯ ದುರ್ವಿಧಿ
ದುರ್ಘಟನೆಯಲ್ಲಿ ಸಾವನ್ನಪ್ಪಿದ ಹಸುಳೆಗಳ ಪೈಕಿ ಸುನಿಲ್ (5) ಸೀತಾರಾಮ ನಾಯಕ್ ಎಂಬವರ ಮಗ. ತನ್ನ ತಾಯಿ ಸ್ವಾತಿ ಕಚೇರಿಯೊಂದರ ಕಾರ್ಯಕ್ಕೆ ಹೋಗುವ ಸಲುವಾಗಿ ಮಗನನ್ನು ಪರಿಚಯಸ್ಥರಾಗಿರುವ ವನಿತಾ ುನೆಯಲ್ಲಿ ಬಿಟ್ಟು ಹೋಗಿದ್ದರು. ಮಗುವನ್ನು ಬಿಟ್ಟು ಹೋಗಿ ಅರ್ಧ ಗಂಟೆ ಕಳೆಯಿತ್ತೆನ್ನುವಷ್ಟರಲ್ಲಿ ವನಿತಾ ಮನೆ ಮುಂಭಾಗ ಟ್ಯಾಂಕರ್ ಅಪಘಾತಕ್ಕೀಡಾಗಿ ಮೂಡಿದ ಅಗ್ನಿಜ್ವಾಲೆಯಲ್ಲಿ, ಸುನಿಲ್ ತನ್ನ ಅಂಗನವಾಡಿಯ ಒಡನಾಡಿ, ಸುನಿತಾರ ಮಗ ಚಿತೇಶ್‌ನೊಂದಿಗೆ ಸುಟ್ಟು ಕರಕಲಾಗಿ ಹೋದ. ತನ್ನ ಸಂಚಾರದ ವೇಳೆ ಮಗುವಿಗೆ ಯಾವುದೆ ತೊಂದರೆಯಾಗದಿರಲಿ ಎಂದು ತಾಯಿ ವಹಿಸಿದ್ದ ಕಾಳಜಿಯೇ ಮಗುವಿನ ಪಾಲಿಗೆ ಯಮ ಪಾಶವಾದದ್ದು ವಿಪರ್ಯಾಸ.
ರಕ್ಷಿಸಹೋದ ಗೃಹಿಣಿಯೂ ಬಲಿ: ಈ ಪುಟ್ಟ ಕಂದಮ್ಮಗಳೆರಡನ್ನು ರಕ್ಷಿಸಲು ಮುಂದಾದ ವನಿತಾ ಕೂಡಾ ಸಾವನ್ನಪ್ಪಿದ್ದಾರೆ. ನಾರಾಯಣ ಎಂಬವರ ಪತ್ನಿ ವನಿತಾ ಅವರ ಇನ್ನೆರಡು ಹೆಣ್ಣುಮಕ್ಕಳು ಶಾಲೆಗೆ ಹೋಗಿದ್ದರಿಂದ ಅವರು ಪ್ರಾಣ ಹಾನಿಯಿಂದ ಬಚವಾಗಿದ್ದರೂ, ಮಮತೆಯ ತಾಯಿ , ಮುದ್ದಿನ ತಮ್ಮನನ್ನು ಕಳೆದುಕೊಂಡು ಆಘಾತದಲ್ಲಿದ್ದಾರೆ.
-ಉಲುಕ್ ಉಪ್ಪಿನಂಗಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.