ಹಣವಿದ್ದರೆ ಸಾಲದು, ಜೀವನಪ್ರಜ್ಞೆ ಮುಖ್ಯ: ಡಾ.ಹೆಗ್ಗಡೆ
ಬೆಳ್ತಂಗಡಿ: ಬದುಕಿನಲ್ಲಿ ಹಣವೊಂದಿದ್ದರೆ ಸಾಲದು, ಬದುಕುವ ಯೋಗ್ಯತೆ, ಜೀವನ ಪ್ರಜ್ಞೆ ಇರಬೇಕು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಬುಧವಾರ ಚಾರ್ಮಾಡಿ ಶ್ರೀ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಚಾರ್ಮಾಡಿ ವಲಯ ಪ್ರಗತಿಬಂಧು, ಜ್ಞಾನವಿಕಾಸ, ಸ್ವಸಹಾಯ ಸಂಘಗಳ ಒಕ್ಕೂಟಗಳ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮಾಭಿವೃದ್ಧಿ ಯೋಜನೆಯನ್ನು ಐದು ವರ್ಷಗಳ ಮಟ್ಟಿಗೆ ಎಂದು ಪ್ರಾರಂಭಿಸಿದ್ದು ರೈತರ, ಕೃಷಿಕರ ಸಮಗ್ರ ಅಭಿವೃದ್ಧಿ ಬಡತನ ನಿರ್ಮೂಲನೆ ಇದರ ಧ್ಯೆಯವಾಗಿತ್ತು. ಆದರೆ ಇಂದು ನಿರಂತರವಾಗಿ ಯೋಜನೆ ನಡೆದು ಬಂದು 18 ಜಿಲ್ಲೆಗಳನ್ನು ಸ್ಥಾಪಿಸಿದೆ. ಮನೆ ಮನೆಗಳಲ್ಲಿ ಶಾಂತಿ, ಸಮೃದ್ಧಿ ನೆಲೆಸಿದೆ. ಬದುಕಿಗೆ ರಕ್ಷಣೆ, ಭದ್ರತೆ ಒದಗಿಸಿದೆ ಎಂದರು.
ಸರ್ಕಾರ ಹಾಗೂ ಯೋಜನೆಯ ಸೌಲಭ್ಯಗಳ ಸದುಪಯೋಗ ಪಡೆದರೆ ಅಭಿವೃದ್ಧಿ ಸಾಧ್ಯ. ಯೋಜನೆ ಎಂದರೆ ಕೇವಲ ಸಾಲ ಕೊಡುವ ಸಂಸ್ಥೆ ಅಲ್ಲ. ಬದುಕು ಕಟ್ಟುವ ಸಂಸ್ಥೆ ಜನ ಸ್ವಾವಲಂಬಿಗಳಾಗಬೇಕು. ಇನ್ನೊಬ್ಬರ ಬಳಿ ದೇಹಿ ಎಂದು ಕೇಳುವಂತಾಗಬಾರದು. ಕೆಲವೆಡೆ ಸಾಲ ಪಡೆದು ಆತ್ಯಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬರುತ್ತದೆ. ಆದರೆ ಯೋಜನೆಯ ಫಲಾನುಭವಿಗಳು ಸಕಾಲದಲ್ಲಿ ಮರುಪಾವತಿ ಮಾಡುತ್ತಾರೆ. ಉಳಿತಾಯ, ಲಾಭಾಂಶವನ್ನೂ ಪಡೆಯುತ್ತಾರೆ. ಶಿಸ್ತಿನ ವ್ಯವಹಾರ ಹೇಳಿಕೊಡುವ ಸಂಸ್ಥೆ ಇದು ಎಂದರು.
ಮುಖ್ಯ ಅತಿಥಿ ಮುಂಡಾಜೆ ಸಿ.ಎ. ಬ್ಯಾಂಕ್ ಅಧ್ಯಕ್ಷ ಎನ್.ಎಸ್. ಗೋಖಲೆ, ಸಿ.ಎ. ಬ್ಯಾಂಕ್ ವತಿಯಿಂದ ರೈತರಿಗೆ ಬತ್ತದ ಬೆಳೆಗೆ ಪ್ರೋತ್ಸಾಹ ಸಲುವಾಗಿ ಉಚಿತ ರಸಗೊಬ್ಬರ ನೀಡಲಾಗಿದೆ. ಇದು ಯೋಜನೆಯ ಫಲಾನುಭವಿಗಳ ಮೂಲಕ ಸದುಪಯೋಗವಾಗಿದೆ. ಕೃಷಿ ಸಾಲ ತೀರುವಳಿ ಯೋಜನೆಯನ್ನು ಕೂಡ ಬ್ಯಾಂಕ್ ಹಾಕಿಕೊಂಡಿದ್ದು ಯೋಜನೆ ಸಹಯೋಗದಲ್ಲಿ ಯಶಸ್ವಿಗೊಳಿಸಲಾಗುವುದು ಎಂದರು.
ಕಟೀಲಿನ ಜ್ಞಾನರತ್ನ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಭಾಸ್ಕರ ದೇವಸ್ಯ, ವೈಎಂಕೆ ಮಂಗಳೂರಿನ ನಿರ್ದೇಶಕ ಜಾವೇದ್ ಯೇನಪೋಯ, ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಕೃಷ್ಣ ಭಟ್ ಕೊಡಿಹಿತ್ತಿಲು, ಚಾರ್ಮಾಡಿ ಪಂಚಾಯತ್ ಅಧ್ಯಕ್ಷ ಅಶೋಕ್ ಜೈನ್, ಸಿಯೋನ್ ಆಶ್ರಮ ಟ್ರಸ್ಟ್ ಮಂಡಿಬಾಗಿಲಿನ ಮೇನೆಜಿಂಗ್ ಟ್ರಸ್ಟಿ ಯು. ಸಿ. ಪೌಲೋಸ್, ಚಾರ್ಮಾಡಿ ವಲಯದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ವಲಯಾಧ್ಯಕ್ಷ ಉಮೇಶ್ ಗೌಡ, ಜನಜಾಗೃತಿ ವಲಯಾಧ್ಯಕ್ಷ ಬೇಬಿ ಚೆರಿಯನ್ ಉಪಸ್ಥಿತರಿದ್ದರು.
ಧರ್ಮಸ್ಥಳ ಮೇಲ್ವಿಚಾರಕ ಸುರೇಶ್ ಗೊಗೆರೋಡಿ ನಿರ್ವಹಿಸಿ, ಜನಜಾಗೃತಿ ಮಾಜಿ ಅಧ್ಯಕ್ಷ ಡಿ.ಎ. ರೆಹಮಾನ್ ಸ್ವಾಗತಿಸಿದರು.
ಒಕ್ಕೂಟ ಕಾರ್ಯದರ್ಶಿ ನವೀನ್ ಕುಮಾರ್ ವಂದಿಸಿದರು.
ನಿರ್ಗಮನ ಅಧ್ಯಕ್ಷ ಗೋಪಾಲಕೃಷ್ಣ ನೂತನ ಅಧ್ಯಕ್ಷ ಕೇಶವ ಎಂ. ಅನಿಸಿಕೆ ಹೇಳಿದರು. ಚಾರ್ಮಾಡಿ ವಲಯ ಮೇಲ್ವಿಚಾರಕ ದಯಾನಂದ ವರದಿ ವಾಚಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

