ತಿಂಗಳ ಬಳಿಕ ಮುಷ್ಕರನಿರತ ತಮಿಳು ಕಾರ್ಮಿಕರ ಅಹವಾಲು ಆಲಿಸಿದ ಡಿಸಿ
ಸುಳ್ಯ: ತಮಿಳರಿಗೆ ಜಾತಿ ಸರ್ಟಿಫಿಕೇಟ್, ಮೂರನೇ ತಲೆಮಾರಿಗೆ ಉದ್ಯೋಗ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿರಿಸಿ ತಮಿಳು ಕಾರ್ಮಿಕರು ಸುಳ್ಯ ತಾಲೂಕು ಕಚೇರಿ ಎದುರು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ತಿಂಗಳು ಪೂರೈಸಿದ್ದು, ಶನಿವಾರ ಜಿಲ್ಲಾಧಿಕಾರಿ ಹರ್ಷಗುಪ್ತಾ ಸ್ಥಳಕ್ಕೆ ಭೇಟಿ ನೀಡಿ ಅವರ ಅಹವಾಲು ಆಲಿಸಿದ್ದಾರೆ.
ಚುನಾವಣೆ ಸಿದ್ಧತೆ ಪರಿಶೀಲಿಸಲು ಸುಳ್ಯಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿ ಪ್ರತಿಭಟನಾ ನಿರತರ ಬಳಿಗೆ ತೆರಳಿ ಮಾತುಕತೆಗೆ ಬರುವಂತೆ ಸೂಚಿಸಿದರು. ಅದರಂತೆ ಕಾರ್ಮಿಕ ಮುಖಂಡರು ತಾಲೂಕು ಕಚೇರಿಯ ಕೊಠಡಿಗೆ ತೆರಳಿ ಮಾತುಕತೆ ನಡೆಸಿದರು.
ಕಾರ್ಮಿಕ ಮುಖಂಡರಾದ ಚಂದ್ರಲಿಂಗಂ ಮತ್ತು ಶಿವಕುಮಾರ್ ಕೌಡಿಚ್ಚಾರ್ ತಮ್ಮ ಸಮಸ್ಯೆಗಳನ್ನು ತಿಳಿಸಿದಾಗ ಜಿಲ್ಲಾಧಿಕಾರಿ ಆಲಿಸಿದರು.
ಸುದೀರ್ಘ ಚರ್ಚೆಯ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ, ಈ ಸಮಸ್ಯೆ ಪರಿಹಾರ ಜಿಲ್ಲಾಧಿಕಾರಿ ವ್ಯಾಪ್ತಿಯಲ್ಲಿ ಇಲ್ಲ. ಜಿಲ್ಲಾಧಿಕಾರಿ ಮಾಡುವುದು ಕಾನೂನು ಆಗುವುದಿಲ್ಲ. ಆದರೆ ನಾವು ಕಾನೂನು ಪ್ರಕಾರವೇ ಮಾಡಬೇಕಾಗಿದೆ. ಹೀಗಾಗಿ ಈಗಾಗಲೇ ಈ ಕುರಿತಂತೆ ರಚಿಸಲಾಗಿರುವ ಹೈ ಪವರ್ ಕಮಿಟಿಯ ಕಾಲಬದ್ಧತೆ ಕುರಿತಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯುತ್ತೇನೆ ಎಂದು ಹೇಳಿದರು.
ಪ್ರಮಾಣಪತ್ರ ಮುಂದುವರಿಕೆ ಪರಿಶೀಲನೆ: ಶಾಲಾ ಮಕ್ಕಳ ದಾಖಲಾತಿ ಕುರಿತಂತೆ ಜಾತಿ ಪ್ರಮಾಣ ಪತ್ರ ಬೇಕಿರುವುದರಿಂದ ಈ ಕುರಿತಂತೆ ಹಳೆಯ ಪ್ರಮಾಣ ಪತ್ರಗಳನ್ನೇ ಮುಂದುವರಿಸಲು ಆದೇಶ ನೀಡಬೇಕೆಂದು ಮುಖಂಡರು ಕೇಳಿಕೊಂಡಾಗ, ಈ ಕುರಿತಂತೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ. ನಿಮಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಗ್ರಾಮ ಪಂಚಾಯಿತಿ ಮತ್ತು ಗ್ರಾಮ ಕರಣಿಕರ ಸಭೆ ಕರೆಯಲು ಕಾರ್ಯ ನಿರ್ವಹಣಾಧಿಕಾರಿಗೆ ಸೂಚಿಸುತ್ತೇನೆ. ಅಲ್ಲದೆ ತನ್ನ ಕಚೇರಿಯಲ್ಲಿ ಕೆಎಫ್‌ಡಿಸಿ ಅಧಿಕಾರಿಗಳ ಸಭೆ ನಡೆಸಿ ಆ ಸಭೆಗೆ ನಿಮ್ಮನ್ನು ಕರೆಯಲಾಗುವುದು ಎಂದು ಭರವಸೆ ನೀಡಿದರು.
ಮಂಗಳೂರು ಮಹಾನಗರ ಪಾಲಿಕೆ ಕಮಿಷನರ್ ಡಾ. ಹರೀಶ್ ಕುಮಾರ್, ಪುತ್ತೂರು ಸಹಾಯಕ ಕಮಿಷನರ್ ಪ್ರಸನ್ನ, ತಹಸೀಲ್ದಾರ್ ವೇಣುಗೋಪಾಲ್ ಮೊದಲಾದವರು ಇ್ಲದ್ದರು.
ಇಂದು ಸಭೆ: ಜಿಲ್ಲಾಧಿಕಾರಿ ಭರವಸೆಯ ಹಿನ್ನೆಲೆಯಲ್ಲಿ ಮುಂದಿನ ಹೆಜ್ಜೆಯ ಬಗ್ಗೆ ನಿರ್ಧರಿಸಲು ಭಾನುವಾರ ಕಾರ್ಮಿಕರ ಜಂಟಿ ಹೋರಾಟ ಸಮಿತಿಯ ಸಭೆ ನಡೆಯಲಿದೆ ಎಂದು ತಿಳಿದು ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

