ದಕ್ಷಿಣ ಕನ್ನಡ

ತುಳು, ಕೊಂಕಣಿ ಸಿನಿಮಾದಲ್ಲೂ ಪಿಬಿಎಸ್ ಧ್ವನಿ ಸದಾ ಹಸಿರು

Published On :

-ಆತ್ಮಭೂಷಣ್
ಮಂಗಳೂರು: ಖ್ಯಾತ ಹಿನ್ನಲೆ ಗಾಯಕ ಪಿ.ಬಿ.ಶ್ರೀನಿವಾಸ್ ಕನ್ನಡ ಮಾತ್ರವಲ್ಲ ತುಳು, ಕೊಂಕಣಿ ಭಾಷೆಗೂ ಮಧುರ ಸ್ವರ ಕೊಡುಗೆ ನೀಡಿದ್ದಾರೆ. ಆ ಮೂಲಕ ತುಳುವ, ಕೊಂಕಣಿ ಭಾಷಿಗರ ಮನದಲ್ಲಿ ಗಾನ ಲಹರಿ ಅಚ್ಚೊತ್ತುವಂತೆ ಮಾಡಿದ್ದಾರೆ.
ತುಳುವಿನಲ್ಲಿ ತೆರೆ ಕಂಡ ಬಹುತೇಕ ಚಿತ್ರಗಳಲ್ಲಿ ಪಿ.ಬಿ.ಶ್ರೀನಿವಾಸ್ ಹಾಡಿನ ಝಲಕ್ ಇದೆ. 'ಕೋಟಿ ಚೆನ್ನಯ' ತುಳು ಸಿನಿಮಾದಲ್ಲಿ ಡಾ.ಅಮೃತ ಸೋಮೇಶ್ವರ ರಚನೆಯ ಜೋಡು ನಂದಾ ದೀಪ.. ಧ್ವನಿ ಪಿ.ಬಿ.ಎಸ್‌ರದ್ದು. ಕೆಮ್ಮಲೆತ ಬ್ರಹ್ಮ ಹಾಡು ಕೂಡಾ ಇದೇ ಸಿನಿಮಾದಲ್ಲಿ ಪಿಬಿಎಸ್ ಧ್ವನಿಯಲ್ಲಿ ಮೂಡಿ ಬಂದಿದೆ.
 'ಬೊಳ್ಳಿತೋಟ'ದಲ್ಲಿ ದಾನೆ ಪೊಣ್ಣೇ..., 'ಬಯ್ಯ ಮಲ್ಲಿಗೆ'ಯಲ್ಲಿ ಡಿಂಗ್ರಿ ಮಾಮ... ಹಾಡನ್ನು ತುಳುವರು ಈಗಲೂ ಗುನುಗುನಿಸುತ್ತಾರೆ.
'ದಾರೆದ ಬುಡೆದಿ'ಯಲ್ಲಿ ಓ ಮಂಜುನಾಥ..., ಬೊಳ್ಳಿದೋಟದಿಂದ ಪರಶುರಾಮನ ಕುಡರಿಗ್ ಪುಟ್ಟುನ ಈ ನಾಡ್..., ಉಡಲ್ ತುಡರ್, ಬ್ರಹ್ಮದ ಬರವು, ಪಗೆತ ಪೂಜೆ...ಹೀಗೆ ಸಾಗುತ್ತದೆ ಪಿ.ಬಿ.ಎಸ್ ಗಾನವೈಖರಿ.
ಮೆಲುಕು ಹಾಕುವ ಹಾಡು: ಸುಮಾರು 30-40ರಷ್ಟು ತುಳು ಹಾಡುಗಳನ್ನು ತುಳು ಸಿನಮಾದಲ್ಲಿ ಪಿ.ಬಿ.ಎಸ್. ಹಾಡಿದ್ದಾರೆ. ಹೆಚ್ಚಿನೆಲ್ಲ ಹಾಡುಗಳು ಮೆಲುಕು ಹಾಕುವಂತೆ ಇದೆ. ಇಂದಿಗೂ ತುಳುನಾಡಿನ ಕಣಗಳಲ್ಲಿ ಇವರ ಹಾಡು ಮತ್ತೆ ಮಾರ್ದನಿಸುತ್ತದೆ ಎಂದರೆ ಅತಿಶಯೋಕ್ತಿಯಲ್ಲ.
ಡಾ.ಅಮೃತ ಸೋಮೇಶ್ವರ ರಚನೆಯಲ್ಲಿ ಗೊಮಟೇಶ್ವರ ಕ್ಯಾಸೆಟ್‌ಗೆ ಧ್ವನಿ ನೀಡಿದ್ದು ಪಿ.ಬಿ.ಎಸ್. ತುಳು ಚಿತ್ರಗೀತೆಗಳ ಹಲವು ಕ್ಯಾಸೆಟ್‌ಗಳು ಮಾರುಕಟ್ಟೆಗೆ ಬಂದಿದೆ.
ಕೊಂಕಣಿ ಸಿನಿಮಾಕ್ಕೆ ಧ್ವನಿ: ಕೊಂಕಣಿ ಭಾಷಿಗರ ಮನಗೆಲ್ಲುವಲ್ಲೂ ಪಿ.ಬಿ.ಶ್ರೀನಿವಾಸ್ ಯಶಸ್ವಿಯಾಗಿದ್ದಾರೆ. 1977ರಲ್ಲಿ ತೆರೆ ಕಂಡ ಮರ್ವಿನ್ ಪಿಂಟೋ ನಿರ್ಮಾಣದ, ಎನ್‌ಎಲ್‌ಆರ್ ಶೇಷಾದ್ರಿ ನಿರ್ದೇಶನದ 'ಕೊಂಕಣಿ ಮೋಗ್ ಅನಿ ಮೈಪಾಸ್‌' ಚಿತ್ರದಲ್ಲಿ ವಿಲ್ಫಿ ರಿಬಿಂಬಸ್ ಸಂಗೀತ ನಿರ್ದೇಶನದಲ್ಲಿ ಮೊಗ್ ತುಜೋ ಕಿತ್ಲೋ ಅಸೀಲೋ.. .ಹಾಡಿಗೆ ಪಿ.ಬಿ.ಶ್ರೀನಿವಾಸ್ ಧ್ವನಿ ನೀಡಿದ್ದು ಕರಾವಳಿಯಲ್ಲಿ ಭಾರೀ ಜನಪ್ರಿಯತೆ ಗಳಿಸಿತ್ತು.
ಕನ್ನಡದಲ್ಲಿ ಬರೆದು ಹಾಡುತ್ತಿದ್ದರು: ಪಿ.ಬಿ.ಶ್ರೀನಿವಾಸ್‌ಗೆ ತುಳು, ಕೊಂಕಣಿ ಭಾಷೆ ಬರುತ್ತಿರಲ್ಲ. ಅವರು ಕನ್ನಡದಲ್ಲಿ ಬರೆದು ಹಾಡುತ್ತಿದ್ದರು. ಸಾಹಿತ್ಯ ರಚನೆಗೆ ಧಕ್ಕೆ ಬಾರದಂತೆ ಭಾವನೆಗೆ ಒತ್ತು ನೀಡಿ ಸುಶ್ರಾವ್ಯವಾಗಿ ಹಾಡುತ್ತಿದ್ದುದು ಎಂಥವರನ್ನು ನಿಬ್ಬೆರಗಾಗಿಸುತ್ತಿತ್ತು ಎನ್ನುತ್ತಾರೆ ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಮಾಜಿ ಅಧ್ಯಕ್ಷ ಸೀತಾರಾಮ ಕುಲಾಲ್.
ಪಿಬಿಎಸ್ ಧ್ವನಿಗೆ ಬೇಡಿಕೆ ಇತ್ತು: ಆಗಿನ ಕಾಲದಲ್ಲಿ ಸಿನಿಮಾಗೆ ಹಾಡುವವರೇ ಬೇಕಿತ್ತು. ಹಾಗಾಗಿ ತುಳು ಸಿನಿಮಾಗಳಲ್ಲೂ ಪಿ.ಬಿ.ಶ್ರೀನಿವಾಸ್ ಧ್ವನಿಗೆ ಬೇಡಿಕೆ ಬಂತು. ಅವರೊಬ್ಬ ಸಂಸ್ಕೃತ ವಿದ್ವಾಂಸರೂ ಆಗಿದ್ದರು. ತನ್ನ ಸಹ ನಿರ್ದೇಶನದ 'ಉಡಲು ತುಡರ್‌' ಸಿನಿಮಾಗೆ ಧ್ವನಿಗೆ ಪಿ.ಬಿ.ಶ್ರೀನಿವಾಸ್‌ರನ್ನು ಭೇಟಿಯಾಗಿದ್ದೆ. ಇದಲ್ಲದೆ ತುಳು ಸಿನಿಮಾಕ್ಕೆ ತಾನು ಸ್ಕ್ರಿಪ್ಟ್ ಬರೆಯುತ್ತಿದ್ದೆ. ಹಾಗಾಗಿ ಪಿ.ಬಿ.ಶ್ರೀನಿವಾಸ್ ಜತೆ ಸಾಮಾನ್ಯ ನಂಟು ಹೊಂದಿದ್ದೆ ಎಂದು ಮೆಲುಕು ಹಾಕುತ್ತಾರೆ ಸೀತಾರಾಮ ಕುಲಾಲ್.
ಮಂಗಳೂರಿನ ಮಂಗಳಾ ಸ್ಟೇಡಿಯಂ ಹಾಗೂ ಗಣಪತಿ ಹೈಸ್ಕೂಲ್ ಒಳಾಂಗಣದಲ್ಲಿ ನಡೆದ ಮ್ಯೂಸಿಕಲ್ ನೈಟ್ ಕಾರ್ಯಕ್ರಮಕ್ಕೆ ಪಿ.ಬಿ.ಶ್ರೀನಿವಾಸ್ ತಮ್ಮ ಗಾನಸುಧೆ ಹರಿಸಲು ಬಂದಿದ್ದರು ಎಂದು ನೆನಪಿಸುತ್ತಾರೆ ಅವರ ಅಭಿಮಾನಿಗಳು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.