ಪೆರ್ನೆ ದುರಂತ ಚಿತ್ರೀಕರಣ ದುರುದ್ದೇಶದಿಂದ ಮಾಡಿಲ್ಲ
ಉಪ್ಪಿನಂಗಡಿ: ಕಳೆದ ಮಂಗಳವಾರ ಉಪ್ಪಿನಂಗಡಿ ಸಮೀಪದ ಪೆರ್ನೆಯಲ್ಲಿ ಅಡುಗೆ ಅನಿಲ ಸಾಗಾಟದ ಟ್ಯಾಂಕರ್ ಅಪಘಾತಕ್ಕೀಡಾಗಿ ಹತ್ತು ಮಂದಿ ಸಾವನ್ನಪ್ಪಿದ ಘಟನೆಯಲ್ಲಿ ಜೀವಂತ ಬೆಂದು ಸಹಾಯಕ್ಕಾಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಸಂತನ ಸಾವಿನ ದಾರುಣ ದೃಶ್ಯವನ್ನು ವಿಡಿಯೊ ಚಿತ್ರೀಕರಣ ಮಾಡಿದ್ದು ವಿದ್ಯಾರ್ಥಿ ಎನ್ನುವುದು ತಿಳಿದುಬಂದಿದೆ.
ತಾನು ವಸಂತರ ದಾರುಣ ಸ್ಥಿತಿಯನ್ನು ಚಿತ್ರೀಕರಿಸುವ ಉದ್ದೇಶವನ್ನು ಹೊಂದಿರಲಿಲ್ಲ. ಟ್ಯಾಂಕರ್ ಹೊತ್ತಿ ಉರಿಯುತ್ತಿದ್ದ ದೃಶ್ಯವನ್ನು ರಸ್ತೆಯ ಇನ್ನೊಂದು ಪಾರ್ಶ್ವದಲ್ಲಿ ನಿಂತು ಸೆರೆ ಹಿಡಿಯುತ್ತಿದ್ದಾಗ ಘಟನಾ ಸ್ಥಳದಿಂದ ಏಕಾಏಕಿ ಎದ್ದು ಬಂದ ವಸಂತ ಅವರ ಹೃದಯವಿದ್ರಾವಕ ಸ್ಥಿತಿ ಚಿತ್ರೀಕರಣದಲ್ಲಿ ಸೇರಿತ್ತೇ ವಿನಾ ಅವರ ಸ್ಥಿತಿಯನ್ನು ಸೆರೆ ಹಿಡಿಯಲೆಂದೇ ಚಿತ್ರೀಕರಿಸಿದ್ದಲ್ಲ ಎಂದು ವಿದ್ಯಾರ್ಥಿಯಾಗಿರುವ ಆತ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾನೆ.
ಈತ ಪೆರ್ನೆಯ ಶ್ರೀರಾಮಚಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿ. ತನ್ನ ಕೃತ್ಯದ ಬಗ್ಗೆ ಏನನಿಸುತ್ತಿದೆ ಎಂದು ಪ್ರಶ್ನಿಸಿದಾಗ, 'ನಾನು ಯಾವುದೇ ತಪ್ಪು ಮಾಡಿಲ್ಲ. ಮಾನವ ಸಹಜ ಕುತೂಹಲದಿಂದ ನಾನು ಅಗ್ನಿಸ್ಪರ್ಶಗೊಂಡ ಟ್ಯಾಂಕರ್ ಹೊತ್ತಿ ಉರಿಯುತ್ತಿದ್ದ ದೃಶ್ಯವನ್ನು ನನ್ನ ಮೊಬೈಲ್ನಿಂದ ಸೆರೆ ಹಿಡಿಯುತ್ತಿದ್ದೆ. ಆ ಸಂದರ್ಭ ನಾನೂ ಸೇರಿದಂತೆ ಯಾರಿಗೂ ಬೇರೇನೂ ಮಾಡುವಂತಿರಲಿಲ್ಲ. ಟ್ಯಾಂಕರ್ ಸ್ಫೋಟದ ಭೀತಿಯ ನಡುವೆಯೂ ನಾನು ದೃಶ್ಯವನ್ನು ಸೆರೆ ಹಿಡಿಯುತಿದ್ದಂತೆಯೇ ಬೆಂಕಿ ಹಾಗೂ ಹೊಗೆ ವ್ಯಾಪ್ತಿಸಿದ ಸ್ಥಳದಿಂದ ಒಂದು ವ್ಯಕ್ತಿ ಎದ್ದು ಬರುತ್ತಿರುವಂತೆ ಕಂಡು ಬಂತು. ಸಹಜ ಕುತೂಹಲದಿಂದ ಆ ದೃಶ್ಯವನ್ನು ನಾನು ಸೆರೆ ಹಿಡಿದೆ. ಬಳಿಗೆ ಬಂದ ಆ ವ್ಯಕ್ತಿಯನ್ನು ರಿಕ್ಷಾದಲ್ಲಿ ಕರೆದೊಯ್ಯುವ ಬಗ್ಗೆ ತಿಳಿಸಿಲಾಯಿತಾದರೂ ಅದಕ್ಕೆ ಅವರು ನಿರಾಕರಿಸಿ, ಅಂಬುಲೆನ್ಸ್ ತರಲು ತುಳುವಿನಲ್ಲಿ ತಿಳಿಸಿದರು. ಅಂಬುಲೆನ್ಸ್ ಬರುವುದು ವಿಳಂಬವಾಗಬಹುದು. ಅಲ್ಲಿಯವರೆಗೆ ರಿಕ್ಷಾದಲ್ಲೇ ಹೋಗೋಣವೆಂದು ಮನವರಿಕೆ ಮಾಡಿ ಬಳಿಕ ಅವರನ್ನು ರಿಕ್ಷಾದಲ್ಲಿ ಕರೆದೊಯ್ಯಲಾಯಿತು.
ಮೈಯೆಲ್ಲ ಸುಟ್ಟ ಸ್ಥಿತಿಯಲ್ಲಿ ಎದ್ದು ಬಂದ ಅವರನ್ನು ನೀರು ಕೊಟ್ಟು ಸಹಕರಿಸೋಣವೆಂದರೆ ಯಾರೋ ಒಬ್ಬರು ಈ ಸ್ಥಿತಿಯಲ್ಲಿ ನೀರು ಕೊಟ್ಟರೆ ಪ್ರಾಣ ಹೋಗುತ್ತೆ ಎಂದರು. ಅದಕ್ಕಾಗಿ ನೀರು ಕೊಡುವ ಸಾಹಸಕ್ಕೆ ಹೋಗಿಲ್ಲ. ಅಲ್ಲಿನ ಪರಿಸ್ಥಿತಿಯಲ್ಲಿ ಏನನ್ನು ಮಾಡಲು ಸಾಧ್ಯವಿದೆಯೋ ಅದೆಲ್ಲವನ್ನು ಅಲ್ಲಿನ ಜನ ಮಾಡಿದ್ದಾರೆ. ಅವರ ದಾರುಣ ಸ್ಥಿತಿಯನ್ನು ಚಿತ್ರೀಕರಿಸಿ ಸಂತಸಪಡುವ ಮನೋಭಾವದಿಂದ ಖಂಡಿತ ಈ ಕಾರ್ಯ ಎಸಗಿಲ್ಲ' ಎಂದು ವಿದ್ಯಾರ್ಥಿ ತಿಳಿಸಿದ.
ಸಾವಿನ ನಡುವೆಯೂ ಅನ್ಯರ ಹಿತ ಕಾಯ್ದ ವಸಂತ
ಮೈಯೆಲ್ಲಾ ಸುಟ್ಟ ಗಾಯ ಪಡೆದು ನೋಡುವುದಕ್ಕೂ ಭೀತಿ ಮೂಡುವಂತೆ ಎದ್ದು ಬಂದ ವಸಂತ ಸಾವಿನ ದವಡೆಯಲ್ಲೂ ಅನ್ಯರ ಹಿತಕ್ಕಾಗಿ ಹಾತೊರೆದಿದ್ದರು. ಘಟನೆ ವೇಳೆ ಅಲ್ಲಿದ್ದ ಜನರಲ್ಲಿ 'ದಯವಿಟ್ಟು ನನ್ನ ಕಾರಿನ ಬಳಿ ಹೋಗಬೇಡಿ. ಕಾರಿನಲ್ಲಿ ಗ್ಯಾಸ್ ಸಿಲಿಂಡರ್ ಇದೆ. ಅದು ಸ್ಫೋಟಗೊಂಡರೆ ನಿಮಗೂ ತೊಂದರೆಯಾದೀತು. ದಯವಿಟ್ಟು ದೂರ ಹೋಗಿ' ಎಂದು ವಿನಂತಿಸಿದ್ದ ಎಂಬುದಾಗಿ ಈ ದೃಶ್ಯವನ್ನು ಚಿತ್ರೀಕರಣ ಮಾಡಿದ್ದ ವಿದ್ಯಾರ್ಥಿ ತಿಳಿಸಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

