ದಕ್ಷಿಣ ಕನ್ನಡ

ಕಾಲುಸಂಕ ನಿರ್ಮಾಣಕ್ಕೆ ಅಡ್ಡಿಯಾಗುತ್ತಿರುವ ಸಂಹಿತೆ

Published On :

ಬೆಳ್ತಂಗಡಿ: ತಾಲೂಕಿಗೆ ವಿವಿಧ ಯೋಜನೆ ಅನುದಾನದಡಿ ಮಂಜೂರಾಗಿರುವ ಅನೇಕ ಕಾಮಗಾರಿಗಳು ನೀತಿ ಸಂಹಿತೆ ಜಾರಿಯಾಗುವ ಮೊದಲೇ ಪ್ರಾರಂಭವಾಗಿದ್ದರಿಂದ ಒಂದು ಹಂತದಲ್ಲಿ ಗುತ್ತಿಗೆದಾರರು ಸಮಾಧಾನದಿಂದ ಇದ್ದಾರೆ. ಆದರೆ ಹಂತ ಹಂತದಲ್ಲಿ ಸಿಗುವ ಅನುದಾನ ಮಾತ್ರ ನೀತಿ ಸಂಹಿತೆಯಿಂದಾಗಿ ತಡೆಯುಂಟಾಗಿದೆ. ಆದರೂ ಕಾಮಗಾರಿಗಳು ಮುಂದುವರಿಯುತ್ತಿವೆ ಎಂದು ಎಂಜಿನಿಯರ್ಗಳು ಹೇಳುತ್ತಾರೆ.
ಚುನಾವಣಾ ನೀತಿ ಸಂಹಿತೆಯ ಪರಿಣಾಮ ತಾಲೂಕಿನ ಕೆಲವು ಭಾಗಗಳಲ್ಲಿ ಕಾಣಿಸಿಕೊಂಡಿದೆ. ಆಗಬೇಕಾದ ಕಾಮಗಾರಿಗಳು ನಿಂತಿದ್ದು ಜನರು ತೊಂದರೆಗೊಳಗಾಗಿದ್ದಾರೆ.
ಕಾಲುಸಂಕ ಎಂದು?: ವೇಣೂರು ಗ್ರಾಮದ ಹಂದೇಲು ಎಂಬಲ್ಲಿ 2 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಬೇಕಾಗಿದ್ದ ಕಾಲುಸಂಕಕ್ಕೆ ಸಂಹಿತೆ ಅಡ್ಡಿಯಾಗಿದೆ. ಅಂಡಿಂಜೆ ಗ್ರಾಮದ ಕೊಕ್ರಾಡಿ ಗ್ರಾಮದ ಪುಣ್ಕೆದಡಿ ಎಂಬಲ್ಲಿ 2ಲಕ್ಷ ವೆಚ್ಚದಲ್ಲಿ ನಿರ್ಮಾಣಕ್ಕೆ ಅಣಿಯಾಗುತ್ತಿದ್ದ ಕಾಲುಸಂಕದ ಕಾಮಗಾರಿಯೂ ನಿಂತಿದೆ. ಅದೇ ರೀತಿ ಬಡಕೋಡಿ ಗ್ರಾಮದ ಹೆಡ್ಮೆ ಎಂಬಲ್ಲಿ 2.5 ಲಕ್ಷದಲ್ಲಿ ನಿರ್ಮಾಣವಾಗಬೇಕಾಗಿದ್ದ ಕಾಲುಸಂಕಕ್ಕೆ ಸಂಹಿತೆ ತಡೆಯಾಜ್ಞೆ ನೀಡಿದೆ. ಬಡಕೋಡಿ ಗ್ರಾಮದ ಪೊಸೊಕ್ಲು ಎಂಬಲ್ಲಿನ ಜನತೆಗೆ ಅನುಕೂಲವಾಗಬೇಕಾಗಿದ್ದ 2 ಲಕ್ಷ ವೆಚ್ಚದ ಕಾಲುಸಂಕ ಚುನಾವಣೆ ಮುಗಿದ ಮೇಲಷ್ಟೇ ಜನರಿಗೆ ಲಭ್ಯವಾಗಬಹುದು.
ಹೊಸಂಗಡಿ ಗ್ರಾಮದ ಸುದೆಕ್ಕಾರು ಎಂಬಲ್ಲಿ 50 ಸಾವಿರದಲ್ಲಿ ಕಾಲುಸಂಕ ನಿರ್ಮಾಣವಾಗಬೇಕಾಗಿತ್ತು ಅದನ್ನೂ ಮುಂದೂಡಲಾಗಿದೆ. ಈ ಎಲ್ಲಾ ಕಾಮಗಾರಿಗಳು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ಬರುತ್ತಿವೆ. ಇನ್ನೇನು ಮಳೆಗಾಲವೂ ಆರಂಭವಾಗುವುದರಿಂದ ಇಲ್ಲಿನ ಗ್ರಾಮಸ್ಥರ ಸಂಚಾರಕ್ಕೆ ಭಾರಿ ತೊಂದರೆಯಾಗಬಹುದು.
ತಾಲೂಕು ಕಚೇರಿಯ ಹೆಚ್ಚಿನ ಸಿಬಂದಿಯೆಲ್ಲ ಚುನಾಣಾ ಕರ್ತವ್ಯದಲ್ಲಿ ನಿರತರಾಗಿರುವುದರಿಂದ ಕೆಲಸಗಳೂ ಸ್ಥಗಿತಗೊಂಡಿವೆ. ಮೊದಲೇ ಸರ್ಕಾರಿ ಕೆಲಸಗಳು ನಡೆಯುವುದು ನಿಧಾನಗತಿಯಲ್ಲಿ. ಈಗ ನೀತಿ ಸಂಹಿತೆಯ ನೆಪ ಸಿಕ್ಕಿದೆ. ಲೋಕೋಪಯೋಗಿ ಅಧಿಕಾರಿಗಳೂ ಚುನಾವಣಾ ತಯಾರಿಯಲ್ಲಿ ನಿರತರಾಗಿರುವುದರಿಂದ ಅಗತ್ಯದ ಕಾಮಗಾರಿಗಳೂ ನಡೆಯದಂತಾಗಿವೆ.
ಇತ್ತ ಮಳೆಯ ಬರುವಿಕೆ ದಿನದಿಂದ ದಿನಕ್ಕೆ ತಡವಾಗುತ್ತಿದೆ. ನದಿಗಳೆಲ್ಲಾ ಬತ್ತಿಹೋಗಿವೆ. ಕೃಷಿ ಕಾರ್ಯಕ್ಕೆ ನೀರಿನ ತೊಂದರೆ ಆರಂಭವಾಗಿದೆ. ಹಲವೆಡೆ ಕುಡಿಯಲು ನೀರನ್ನು ದೂರ ದೂರದಿಂದ ತರಬೇಕಾದ ಪರಿಸ್ಥಿತಿ ಉದ್ಭವವಾಗಿದೆ. ಹೀಗಿರುವಾಗ ಜನರ ಮೂಲಭೂತ ಅಗತ್ಯವಾದ ನೀರನ್ನು ಪೂರೈಸಲೂ ನೀತಿ ಸಂಹಿತೆ ಅಡ್ಡಿಯಾಗಿ ಜನರು ಪರಿತಪಿಸುವುದರಲ್ಲಿ ಸಂದೇಹವಿಲ್ಲ.
- ದೀಪಕ್ ಅಳದಂಗಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.