'ಜಾತೀಯತೆಗೆ ಬ್ರಾಹ್ಮಣರು ಕಾರಣರಲ್ಲ'
ಮಂಗಳೂರು: ಅಸ್ಪೃಶ್ಯತೆ, ಜಾತೀಯತೆ ಬ್ರಾಹ್ಮಣರ ಕೊಡುಗೆ ಅಲ್ಲ, ಅದಕ್ಕಿಂತ ಮೊದಲೇ ದಕ್ಷಿಣ ಭಾರತದಲ್ಲಿ ಮೊದಲೇ ಇತ್ತು. ಆದರೂ ಬ್ರಾಹ್ಮಣರೆಡೆಗೆ ಬೊಟ್ಟು ಮಾಡುವುದು ಸರಿಯಲ್ಲ ಎಂದು ಪೇಜಾವರ ಮಠಾಧೀಶ ಶ್ರೀವಿಶ್ವೇಶ್ವರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಮಂಗಳೂರಿನ ಸಂಘನಿಕೇತನದಲ್ಲಿ ಭಾನುವಾರ ಬ್ರಾಹ್ಮಣರ ಒಕ್ಕೂಟ ಆಶ್ರದಲ್ಲಿ ನಡೆದ ಬ್ರಾಹ್ಮಣ ಜಾಗೃತಿ ಸಮ್ಮೇಳನದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಬ್ರಾಹ್ಮಣರು ಇತರೆ ಜಾತಿ ಸಂಘಟನೆಯಂತೆ ಅಲ್ಲ. ಅವರಿಗೆ ಸಮಗ್ರ ಮಾನವ ಸಮಾಜ, ಹಿಂದೂ ಸಮಾಜದ ಹಿತರಕ್ಷಣೆಯ ಹೊಣೆ ಇದೆ. ಬ್ರಾಹ್ಮಣರಿಂದ ದಲಿತರ ವರೆಗೆ ಮಾರ್ಗದರ್ಶನ ಮಾಡುವುದು ಬ್ರಾಹ್ಮಣ. ಅವರಿಗೆ ಸಂದೇಶ ನೀಡುವುದು, ಅನ್ಯಾಯವಾದಾಗ ಪ್ರತಿಭಟಿಸುವುದನ್ನು ಬ್ರಾಹ್ಮಣರು ಮಾಡುತ್ತಾರೆ. ಬ್ರಾಹ್ಮಣರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ಸಮಗ್ರ ಚಿಂತನೆ ಅಗತ್ಯವಿದೆ. ಬ್ರಾಹ್ಮಣರು ಗಾಯತ್ರೀ ಮಾತೆಯ ಪುತ್ರರಾಗಿದ್ದು, ವೇದಮಾತೆ ಎಲ್ಲರ ತಾಯಿ. ಭಿನ್ನ ಸಂಪ್ರದಾಯದ ಬ್ರಾಹ್ಮಣರ ಐಕ್ಯಕ್ಕೆ ಈ ಸಮ್ಮೇಳನ ನಾಂದಿಯಾಗಲಿ ಎಂದರು.
'ಬಿಸಿನೆಸ್ ಮೋಟಿವ್' ಡಾ.ಮಯ್ಯ ಆತಂಕ: ಬ್ರಾಹ್ಮಣ ಪರಂಪರೆಗೆ ಮಸಿ ಬಳಿಯುವ, ಮೂಲಭೂತ ನಂಬಿಕೆಯ ಮೇಲೆ ದಾಳಿ ನಡೆಸುವ 'ಬಿಸಿನೆಸ್ ಮೋಟಿವ್' ಭಾರತೀಯ ಧಾರ್ಮಿಕ ಬುನಾದಿಯನ್ನೇ ಅಲ್ಲಾಡಿಸುವ ಹಂತಕ್ಕೆ ಬಂದಿದೆ ಎಂದು ಬ್ರಾಹ್ಮಣ ಜಾಗೃತಿ ಸಮ್ಮೇಳನಾಧ್ಯಕ್ಷ, ಅಂಕಣಕಾರ ಡಾ.ಪಿ.ಸದಾನಂದ ಮಯ್ಯ ದುಗುಡ ವ್ಯಕ್ತಪಡಿಸಿದ್ದಾರೆ.
ಸಂಘಟಿತವಾಗಿ ಬಾಳ್ವೆ ಇಂದಿಗೂ ದೂರವಾಗಿಲ್ಲ, ಆದರೆ ದೈವ, ಮಠ ಮಾನ್ಯಗಳ ವಿಚಾರದಲ್ಲಿ ಕಾರ್ಪೊರೇಟ್ ಸಂಸ್ಕೃತಿ ಪರಾಕಾಷ್ಠೆಗೆ ತಲುಪಿದೆ. ಇದರ ಅವಾಂತರದ ಅರಿವಿದ್ದೂ ಸಾಮಾಜಿಕ ಸ್ಥಿತ್ಯಂತರದ ವಿಚಾರದಲ್ಲಿ ಎಡವುತ್ತಿದ್ದೇವೆ. ಇದನ್ನು ನೋಡಿಯೂ ವಿಪ್ರ ಸಮಾಜ ಸುಮ್ಮನಿರುವುದು ಶೋಭೆ ತರುವ ಸಂಗತಿಯಲ್ಲ ಎಂದರು.
ಬಹುಮುಖಿ ಸಂಸ್ಕೃತಿಯ ಹೆಸರಿನಡಿ ಬ್ರಾಹ್ಮಣ ಜೀವನ ಕ್ರಮ ಪಾಲನೆಗೆ ಹಿಂಜರಿಯುತ್ತಿದ್ದೇವೆ. ಇದರಿಂದ ಸಂಸ್ಕೃತಿಯ ಒಳತೋಟಿ ನಾಶವಾಗುತ್ತಿದೆ. ಇಡೀ ಸಮುದಾಯ ತನ್ನ ಕ್ರಿಯಾಶೀಲತೆಯನ್ನು ಕಳೆದುಕೊಳ್ಳುತ್ತಿರುವಾಗಲೂ ರಾಜಕೀಯ ಜಾಗೃತಿ ವಿಪ್ರರಲ್ಲಿ ಮೂಡುತ್ತಿಲ್ಲ. ಜಾಗತೀಕರಣವೂ ಇನ್ನೊಂದು ಕಾರಣವಾಗಿದ್ದು, ವೈಚಾರಿಕ ಮೌಢ್ಯದಿಂದ ಹೊರಗೆ ಬರಬೇಕು, ಧಾರ್ಮಿಕ ಹಾಗೂ ಸಾಂಸ್ಕೃತಿಕ ನಾಯಕತ್ವದ ಬಗ್ಗೆ ಬ್ರಾಹ್ಮಣ ಮಠಗಳು ಯೋಚಿಸಬೇಕಾಗಿದೆ, ಗುರುಕುಲಗಳು, ವೇದಪಾಠಶಾಲೆಗಳು ಪುನರುಜ್ಜೀವನಗೊಳ್ಳಬೇಕಿದೆ ಎಂದರು.
ರಾಮಕೃಷ್ಣ ಮಠದ ಶ್ರೀಜಿತಕಾಮಾನಂದಜೀ, ಸುಬ್ರಹ್ಮಣ್ಯ ಮಠಾಧೀಶ ಶ್ರೀವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠದ ಕಿರಿಯಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಸುನಂದಾ ಮಯ್ಯ, ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಪಿ.ಜಯರಾಮ ಭಟ್, ಪದ್ಮಶ್ರೀ ಬನ್ನಂಜೆ ಗೋವಿಂದಾಚಾರ್ಯ, ಚೆನ್ನೈ ಮುರಳಿ ರಾವ್, ಮುಂಬೈ ಅರುಣಾ ನಾಗೇಂದ್ರ ಆಚಾರ್ಯ, ವಿಷ್ಣುಮೂರ್ತಿ ಎರ್ಕಾಡಿತ್ತಾಯ, ಒಕ್ಕೂಟ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು, ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕೋಶಾಧಿಕಾರಿ ಶರವು ರಾಘವೇಂದ್ರ ಶಾಸ್ತ್ರೀ, ವಿವಿಧ ಬ್ರಾಹ್ಮಣ ಸಮುದಾಯದ ಮುಖಂಡರಾದ ವಿಜಯರಾಘವ ಪಡವಟ್ನಾಯ, ಎಂ.ಬಿ.ಮುಳಿಯ, ಪಯ್ಯಗದ್ದೆ ವೆಂಕಟ ರಾವ್, ನೇರಂಬಳ್ಳಿ ನಾರಾಯಣ ರಾವ್, ಪಿ.ಎಲ್.ಉಪಾಧ್ಯಾಯ, ಸಿ.ಎಸ್.ರಾವ್, ಡಾ.ಪ್ರಭಾಕರ ಜೋಶಿ, ವೇ.ಮೂ.ನಾರಾಯಣ ಭಟ್, ಪಿ.ಎನ್.ರಾಜಾರಾಂ ಹಾಜರಿದ್ದರು.
ಸಮಾರಂಭಕ್ಕೆ ಮೊದಲು ಸಮ್ಮೇಳನಾಧ್ಯಕ್ಷ ಡಾ.ಸದಾನಂದ ಮಯ್ಯರನ್ನು ಮೆರವಣಿಗೆಯಲ್ಲಿ ವೇದಿಕೆಗೆ ಕರೆತರಲಾಯಿತು. ಸಮ್ಮೇಳನದಲ್ಲಿ ಮೆಯ್ಯಾಸ್ ಉತ್ಪನ್ನಗಳಲ್ಲದೆ, ವಿವಿಧ ವೈದಿಕ, ಸಾಂಸ್ಕೃತಿಕ ಹೊತ್ತಗೆಗಳ ಪ್ರದರ್ಶನ ಮಾರಾಟ ಇತ್ತು.
ಸಿನಿಮಾದಲ್ಲಿ ಜುಟ್ಟುಬಿಟ್ಟರೆ ಮಾತ್ರ ನಂಬ್ತಾರೆ!
ಬ್ರಾಹ್ಮಣ ಯುವಕರಿಗೆ ಮದುವೆಗೆ ಹುಡುಗಿ ಸಿಗುವುದಿಲ್ಲ, ಸಿಕ್ಕಿದರೂ ಜುಟ್ಟುಬಿಟ್ಟವರನ್ನು, ಪ್ಯಾಂಟ್ ಹಾಕಿದವರನ್ನು ಒಪ್ಪುವುದಿಲ್ಲ ಎನ್ನುವುದು ಮಾಮೂಲು ಕೇಳಿಬರುವ ಮಾತು. ಇದಕ್ಕೆ ಧರ್ಮಶಾಸ್ತ್ರ ಮಾತನಾಡಿದರೆ ಹುಡುಗಿಯರು ಒಪ್ಪುವುದಿಲ್ಲ. ಅದರ ಬದಲು ಇನ್ನು ಸಿನಿಮಾದಲ್ಲಿ ಜುಟ್ಟುಬಿಟ್ಟು ಪ್ಯಾಂಟ್ ಹಾಕಿಕೊಂಡು ಬಂದರೆ ಮಾತ್ರ ಅದನ್ನು ಸ್ವೀಕರಿಸಬಹುದು. ಅಲ್ಲಿವರೆಗೆ ಯುವಜನಾಂಗವನ್ನು ಸಿನಿಮಾ ಮೋಡಿ ಮಾಡಿದೆ. ಅದರಲ್ಲಿರುವುದೇ ಸರಿ ಎನ್ನುವಂತಾಗಿದೆ ಎಂದು ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಸಮಾರೋಪ ಭಾಷಣದಲ್ಲಿ ಹೇಳಿದಾಗ ಸಭೆಯಲ್ಲಿದ್ದವರು ಚಪ್ಪಾಳೆ ತಟ್ಟಿ ಅನುಮೋದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

