ಬಿಜೆಪಿ ಭ್ರಷ್ಟ ಅಭ್ಯರ್ಥಿಗಳ ವಿರುದ್ಧ ಸಮರ ಸಾರಿದ ಹಿರಿಯರ ವೇದಿಕೆ
ಕ.ಪ್ರ. ವಾರ್ತೆ , ಮಂಗಳೂರು , ಏ.21
ರಾಜ್ಯದಲ್ಲಿ ದಾರಿತಪ್ಪುತ್ತಿರುವ ಬಿಜೆಪಿಯ ಕಿವಿಹಿಂಡಲು ಅಸ್ತಿತ್ವಕ್ಕೆ ಬಂದ ಭಾಜಪ ಹಿರಿಯ ವೇದಿಕೆ ಈ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭ್ರಷ್ಟ ಅಭ್ಯರ್ಥಿಗಳ ವಿರುದ್ಧ ಸಮರ ನಡೆಸಲಿದೆ. ಚುನಾವಣೆ ಬಳಿಕ ರಾಷ್ಟ್ರ ಮಟ್ಟದಲ್ಲೇ ಸ್ವಚ್ಛ ಚಿಂತನೆಯ ಹೊಸ ಪಕ್ಷ ರಚನೆಗೆ ಚಿಂತನೆ ನಡೆಸಿದೆ.
ಭಾಜಪ ಹಿರಿಯರ ವೇದಿಕೆ ಮುಖಂಡರು ಹಿರಿಯ ಬಿಜೆಪಿಗರ ಜತೆ ಮಾತುಕತೆ ನಡೆಸಿದ್ದು, ಈ ಚುನಾವಣೆಯಲ್ಲಿ ಬಿಜೆಪಿಯನ್ನು ಮಾತ್ರ ಬೆಂಬಲಿಸಿ ಎನ್ನುವುದಿಲ್ಲ. ಇತರೆ ಪಕ್ಷಗಳ ಸಚ್ಚಾರಿತ್ರ್ಯ ಅಭ್ಯರ್ಥಿಗಳನ್ನೂ ಬೆಂಬಲಿಸಿ ಎಂದು ಕರೆ ನೀಡಲಿದೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬಿಜೆಪಿ ಬಿಟ್ಟರೂ ಪಕ್ಷದಲ್ಲಿ ಭ್ರಷ್ಟಾಚಾರ ಆರೋಪಕ್ಕೆ ಒಳಗಾದವರು ಇನ್ನೂ ಇದ್ದಾರೆ. ಅವರ ವಿರುದ್ಧ ಯಾವುದೇ ಕ್ರಮ ಆಗಿಲ್ಲ. ಪಕ್ಷ ನಾಯಕರೂ ಆ ವಿಚಾರದಲ್ಲಿ ಮೌನವಾಗಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಇನ್ನೊಂದು ಕಾಂಗ್ರೆಸ್ ಆಗುತ್ತಿದೆ ಎಂದು ವೇದಿಕೆ ಅಸಮಾಧಾನ ವ್ಯಕ್ತಪಡಿಸಿದೆ.
ಈಗಾಗಲೇ ಭೂಹಗರಣ ಆರೋಪಕ್ಕೆ ಒಳಗಾಗಿರುವ ಬಿಜೆಪಿ ಸಚಿವರು, ಶಾಸಕರಿಗೆ ಮತ್ತೆ ಟಿಕೆಟ್ ನೀಡಿರುವುದು ಭಾಜಪ ಹಿರಿಯ ವೇದಿಕೆಯ ಕಣ್ಣು ಕೆಂಪಾಗಿಸಿದೆ. ಇಂಥ ಭ್ರಷ್ಟಾಚಾರಿಗಳು ಆರಿಸಿ ಬಂದರೆ ಪಕ್ಷದ ವರ್ಚಸ್ಸು ಮರಳುವ ಸಾಧ್ಯತೆಯೇ ಇಲ್ಲ. ಕೊನೆಗೆ ಬಿಜೆಪಿ ರಾಜ್ಯದಲ್ಲಿ ಮೂಲೆಗುಂಪಾಗುವುದು ನಿಶ್ಚಿತ. ಹಾಗಾಗಿ ಭ್ರಷ್ಟಾಚಾರಿಗಳು ಚುನಾವಣೆಯಲ್ಲಿ ಏನೇ ಆದರೂ ಆರಿಸಿ ಬರಬಾರದು. ಅದಕ್ಕಾಗಿ ಅಂಥವರು ಸ್ಪರ್ಧಿಸುವಲ್ಲಿ ವಿರೋಧಿ ಅಭಿಯಾನ ನಡೆಸಲು ಭಾಜಪ ಹಿರಿಯರ ವೇದಿಕೆ ಸಜ್ಜಾಗಿದೆ.
'ಈ ಚುನಾವಣೆಯಲ್ಲಿ ಭ್ರಷ್ಟಾಚಾರ ಆರೋಪವಿದ್ದು ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿಗಳನ್ನು ನಿಶ್ಚಿತವಾಗಿ ಸೋಲಿಸುತ್ತೇವೆ. ಯಾವುದೇ ಪಕ್ಷವಿರಲಿ, ಯಾರನ್ನು ಗೆಲ್ಲಿಸಬೇಕೋ ಅವರನ್ನು ಗೆಲ್ಲಿಸುತ್ತೇವೆ' ಎಂದು ವೇದಿಕೆ ಪ್ರಧಾನ ಕಾರ್ಯದರ್ಶಿ ವಿನಯಚಂದ್ರ 'ಕನ್ನಡಪ್ರಭ'ಕ್ಕೆ ಮಾರ್ಮಿಕವಾಗಿ ನುಡಿದಿದ್ದಾರೆ.
ಬಿಜೆಪಿಗೆ ಪರ್ಯಾಯ ಪಕ್ಷ ರಚನೆ: ರಾಜ್ಯ ಬಿಜೆಪಿಯಂತೆ ಕೇಂದ್ರದಲ್ಲೂ ಬಿಜೆಪಿ ತತ್ವ ಸಿದ್ಧಾಂತ, ಆದರ್ಶ ಮರೆತಿದೆ. ಭ್ರಷ್ಟಾಚಾರ ಆರೋಪಕ್ಕೆ ಒಳಗಾದ ಗಡ್ಕರಿಗೆ ಎರಡನೇ ಅವಧಿಗೆ ಆಯ್ಕೆಯಾಗಲು ಕೇಂದ್ರ ನಾಯಕರು ಬಿಜೆಪಿ ಸಂವಿಧಾನಕ್ಕೆ ತಿದ್ದುಪಡಿ ತಂದಿದ್ದಾರೆ. ಅಲ್ಲಿ ಹಿರಿಯ ನಾಯಕ ಲಾಲಕೃಷ್ಣ ಆಡ್ವಾಣಿ ಮಾತನ್ನೂ ಕೇಳುತ್ತಿಲ್ಲ. ಇವರೆಲ್ಲರಿಗೆ ಮೂಗುದಾರ ಹಾಕಬೇಕಾದ ಸಂಘ ಪರಿವಾರ ಹೊಣೆಯರಿತು ವರ್ತಿಸಿಲ್ಲ.
ಅಲ್ಲಿ ಪರಿಸ್ಥಿತಿ ವೈಪರೀತ್ಯ ಇರುವಾಗ ರಾಜ್ಯದಲ್ಲಿ ಬಿಜೆಪಿ ಸರಿದಾರಿಗೆ ಬರುವ ಸಂಭವ ಇಲ್ಲ. ಹಾಗಾಗಿ ಚುನಾವಣೆ ಬಳಿಕ ಅರವಿಂದ ಕೇಜ್ರಿವಾಲ್ರ ಅಮ್ ಆದ್ಮಿ, ಜಯಪ್ರಕಾಶ್ ನಾರಾಯಣರ ಲೋಕಸತ್ತಾ ಮುಂತಾದ ಪಕ್ಷಗಳನ್ನು ಸೇರಿಸಿ ರಾಷ್ಟ್ರ ಮಟ್ಟದಲ್ಲಿ ಹೊಸ ಪಕ್ಷ ರಚಿಸಲು ತೀರ್ಮಾನಿಸಲಾಗಿದೆ ಎನ್ನುತ್ತಾರೆ ವಿನಯಚಂದ್ರ.
-ಆತ್ಮಭೂಷಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

