ಯಕ್ಷರಂಗದಿಂದ ಶಾಸಕಾಂಗಕ್ಕೆ ಮಂಗಳೂರಿಂದ ಇಬ್ಬರು ಶಾಸಕರು
ರಾಘವೇಂದ್ರ ಅಗ್ನಿಹೋತ್ರಿ
ಮಂಗಳೂರು: ಸಿನೆಮಾ ರಂಗದ ಜನಪ್ರಿಯತೆಯನ್ನೇ ಬಂಡವಾಳವಾಗಿಸಿ ರಾಜ್ಯ ರಾಜಕೀಯದಲ್ಲಿ ಮಿಂಚಿದವರು ಹಲವಾರು ಮಂದಿ. ಕರ್ನಾಟಕದಲ್ಲಿ ಮುಖ್ಯಮಂತ್ರಿಯಲ್ಲದಿದ್ದರೂ ಹಲವರು ಮಂತ್ರಿಯಾಗಿ, ಸಂಸದರಾಗಿ ಮಿಂಚಿ ಮರೆಯಾದರೆ, ಇನ್ನೂ ಕೆಲವರು ಈಗಲೂ ರಾಜಕೀಯಕ್ಕೆ 'ತಾರಾ ಮೆರಗು' ನೀಡುತ್ತಿದ್ದಾರೆ. ಆದರೆ ಯಕ್ಷಗಾನದಂಥ ಸೀಮಿತ ಪ್ರೇಕ್ಷಕರ ಹೊಂದಿರುವ ಕಲೆಯಿಂದಲೇ ಜನಪ್ರಿಯತೆ ಗಳಿಸಿ ಯಕ್ಷರಂಗದಿಂದ ಕರ್ನಾಟಕ ಶಾಸನಸಭೆಗೆ ಮಂಗಳೂರಿಂದ ಇಬ್ಬರು ಆಯ್ಕೆಯಾಗಿದ್ದಾರೆ.
ಚುನಾವಣೆಯಲ್ಲಿ ಗೆದ್ದು ವಿಧಾನಸಭೆಗೆ ಪ್ರವೇಶಿಸಿದ ಏಕೈಕ ಕಲಾವಿದ ಕುಂಬ್ಳೆ ಸುಂದರ್ ರಾವ್, ಆದರೆ ಅವರಿಗಿಂತ ಮುಂಚೆ ಕುಬಣೂರು ಬಾಲಕೃಷ್ಣ ರಾಯರು ಮೇಲ್ಮನೆಗೆ ನಾಮಕರಣಗೊಂಡಿದ್ದರು.
ಪ್ರಥಮ ನಾಮಕರಣ ಸದಸ್ಯ: ಮಂಗಳೂರಿನ ಪ್ರಸಿದ್ಧ ಅರ್ಥಧಾರಿ, ನ್ಯಾಯವಾದಿಯೂ ಆಗಿದ್ದ ಕುಬಣೂರು ಬಾಲಕೃಷ್ಣ ರಾವ್ ಅವರ ಯಕ್ಷಗಾನ ರಂಗಕ್ಕೆ ಅವರು ನೀಡಿದ ಕೊಡುಗೆಯನ್ನು ಗಮನಿಸಿ, ಕಲಾವಿದನ ಹಿನ್ನೆಲೆಯಲ್ಲಿ ನಿಜಲಿಂಗಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಅವರನ್ನು ನಾಮಕರಣ ಮಾಡಲಾಗಿತ್ತು.
ಹಿಂದೆ ಗ್ರಾಮಗಳಲ್ಲಿ ಯಕ್ಷಗಾನವಾಗುತ್ತಿದ್ದ ಸಂದರ್ಭ ಎಷ್ಟು ಟಿಕೆಟ್ ಮಾರಾಟವಾಗಿತ್ತೊ ಅಷ್ಟಕ್ಕೆ ಗ್ರಾಮ ಪಂಚಾಯ್ತಿಗೆ ತೆರಿಗೆ ಪಾವತಿಸಬೇಕಿತ್ತು. ಕುಬಣೂರು ಅವರು ಶಾಸಕರಾಗಿದ್ದ ಸಂದರ್ಭ ಅದನ್ನು ತೆಗೆಸಿದ್ದರು. ಮೊಟ್ಟ ಮೊದಲ ಬಾರಿಗೆ ಹೈದ್ರಾಬಾದ್ ಸ್ಟುಡಿಯೋಕ್ಕೆ ಯಕ್ಷಗಾನ ತಂಡ ಕರೆದೊಯ್ದಿದ್ದರು ಎಂದು ಕಟೀಲು ಮೇಳದ ಪ್ರಧಾನ ಭಾಗವತ, ಬಾಲಕೃಷ್ಣ ರಾಯರ ಸಂಬಂಧಿ ಕುಬಣೂರು ಶ್ರೀಧರರಾಯರು ಸ್ಮರಿಸಿದ್ದಾರೆ.
ಯಕ್ಷಗಾನ ಪ್ರಚಾರಕ್ಕೆಂದೇ ಕುಬಣೂರು ಅವರು ಸಂಘ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದರು. ಇತ್ತೀಚೆಗಷ್ಟೇ ಅವರ ಸ್ಮರಣೆಗಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ಖ್ಯಾತ ಅರ್ಥಧಾರಿ ಡಾ. ಪ್ರಭಾಕರ ಜೋಶಿ ಅವರು 'ಕನ್ನಡಪ್ರಭ'ಕ್ಕೆ ತಿಳಿಸಿದರು.
ಚುನಾವಣೆಯಲ್ಲಿ ಗೆದ್ದದ್ದು ಕುಂಬ್ಳೆ: ಯಕ್ಷಗಾನ ಮತ್ತು ತಾಳಮದ್ದಳೆಗಳಲ್ಲಿ ತನ್ನ ವಾಗ್ಝರಿ ಪ್ರದರ್ಶಿಸಿ ಅದನ್ನೇ ರಾಜಕೀಯ ರಂಗದಲ್ಲೂ ಬಂಡವಾಳವಾಗಿಸಿ 1994 ರಲ್ಲಿ ಸುರತ್ಕಲ್ (ಈಗಿನ ಮಂಗಳೂರು ಉತ್ತರ) ಕ್ಷೇತ್ರದಿಂದ ಕುಂಬ್ಳೆಯವರು ಆಯ್ಕೆಯಾಗಿದ್ದರು. ಕಾಂಗ್ರೆಸ್ನ ವಿಜಯಕುಮಾರ ಶೆಟ್ಟಿ ವಿರುದ್ಧ ಗೆಲ್ಲಲು ಕ್ಷೇತ್ರಾದ್ಯಂತ ಅವರು ಅಂದು ಮಾಡಿದ ಭಾಷಣ ಮತಗಳಾಗಿ ಮಾರ್ಪಟ್ಟಿತ್ತು. 25 ವರ್ಷಗಳ ಕಾಲ ಧರ್ಮಸ್ಥಳ ಮೇಳ, ಅದಕ್ಕೂ ಮೊದಲು ಹಲವು ಮೇಳಗಳಲ್ಲಿ ದುಡಿದು ಗಳಿಸಿದ ಜನಪ್ರಿಯತೆ ಕುಂಬ್ಳೆ ಅವರಿಗೆ ಶಾಸಕ ಸ್ಥಾನಕ್ಕೇರಲು ಸಹಕರಿಸಿತ್ತು ಎಂಬುದನ್ನು ಸ್ವತಃ ಅವರೇ ಒಪ್ಪಿಕೊಳ್ಳುತ್ತಾರೆ.
ಅವರು ನಾಮಪತ್ರ ಸಲ್ಲಿಸುವ ಸಂದರ್ಭ ಅವರ ಜತೆ ಇನ್ನೋರ್ವ ಯಕ್ಷ ಕಲಾವಿದ ಶೇಣಿ ಗೋಪಾಲಕೃಷ್ಣ ಭಟ್ಟರೂ ಇದ್ದರು ಎಂಬುದನ್ನು ಯಕ್ಷಗಾನ ಅಕಾಡೆಮಿ ಈಗಿನ ಅಧ್ಯಕ್ಷ ಪ್ರೊ. ಎಂ. ಎಲ್. ಸಾಮಗ ಸ್ಮರಿಸುತ್ತಾರೆ.
ಮೂಲತಃ ರಾಜಕಾರಣಿಯಲ್ಲ: ಕುಂಬ್ಳೆ ಸುಂದರ್ ರಾವ್ ಅವರು ಮೂಲತಃ ಕಲಾವಿದನೇ ಹೊರತೂ ರಾಜಕಾರಣಿಯಲ್ಲ. ಮೇಳಗಳಲ್ಲಿ ದುಡಿದು ಉಳಿದ ಸಮಯದಲ್ಲಿ ವಿಹಿಂಪ ಸಭೆಗಳಲ್ಲಿ ಭಾಷಣ ಮಾಡುತ್ತಿದ್ದರು. ಇವರ ಭಾಷಣದ ಜನಪ್ರಿಯತೆಯನ್ನೇ ಬಿಜೆಪಿ ಬಳಸಿ 1994 ರಲ್ಲಿ ಟಿಕೆಟ್ ನೀಡಿತ್ತು. ತಂತ್ರ ಫಲಿಸಿ ಶಾಸಕರಾಗಿ ಆಯ್ಕೆಯಾಗಿದ್ದರು.
ಶಾಸಕರಾಗಿದ್ದಾಗ ಶಾಸನಸಭೆಯಲ್ಲಿ ಯಕ್ಷಗಾನಕ್ಕೊಂದು ಪ್ರತ್ಯೇಕ ಅಕಾಡೆಮಿ ಬೇಕು ಎಂದು ಅವರು ಅಂದು ಆಗ್ರಹಿಸಿದ ಪರಿಣಾಮ 2008 ರಲ್ಲಿ ಯಕ್ಷಗಾನಕ್ಕೆ ಅಕಾಡೆಮಿ ಸ್ಥಾಪನೆಯಾಯಿತು. ಪ್ರಥಮ ಅಧ್ಯಕ್ಷರಾಗಿಯೂ ಅವರೇ ಅಧಿಕಾರ ವಹಿಸುವಂತಾಯಿತು.
ಸೋತಾಗಲೂ ಸಂತೋಷ ಪಟ್ಟರು!: 'ರಾಜಕೀಯ ನನ್ನ ಕ್ಷೇತ್ರವಲ್ಲ, ನನ್ನದಲ್ಲದ ಕ್ಷೇತ್ರಕ್ಕೆ ಹೋಗಿ ನಾನು ಕೊರಗಿದ್ದಿದೆ. ಮುಂದಿನ ಚುನಾವಣೆಯಲ್ಲಿ (1999) ಸೋತಾಗ ನಾನು ಬೇಸರಿಸಲಿಲ್ಲ.
ಬಂಧನದಿಂದ ಬಿಡುಗಡೆಯಾದ ಅನುಭವ ಆಯಿತು' ಎಂದು ಸೋತಾಗಲೂ ಸಂತೋಷ ಪಟ್ಟವರು ಕುಂಬ್ಳೆ ಸುಂದರ ರಾಯರು. 'ಆಗೆಲ್ಲ ನೂರಾರು ಕೋಟಿಗಳ ಅನುದಾನ ಸಿಕ್ತಿರಲಿಲ್ಲ, 5 ವರ್ಷಗಳಲ್ಲಿ 30 ಕೋಟಿ ಅನುದಾನ ಬಂದಿತ್ತು. ಅದನ್ನು ಪಂಚಕಜ್ಜಾಯದಂತೇ ಕ್ಷೇತ್ರದೆಲ್ಲೆಡೆ ಹಂಚಿದ್ದೆ' ಎಂದು 'ಕನ್ನಡಪ್ರಭ'ದೊಂದಿಗೆ ತಮ್ಮ ಅನುಭವ ಹಂಚಿಕೊಂಡರು.
ಬಲ್ಲಿರೇನಯ್ಯ..
ಟಿ ಚುನಾವಣೆಯಲ್ಲಿ ಗೆದ್ದು ವಿಧಾನಸಭೆಗೆ ಪ್ರವೇಶಿಸಿದ ಏಕೈಕ ಕಲಾವಿದ ಕುಂಬ್ಳೆ ಸುಂದರ್ ರಾವ್, ಆದರೆ ಅವರಿಗಿಂತ ಮುಂಚೆ ಕುಬಣೂರು ಬಾಲಕೃಷ್ಣ ರಾಯರು ಮೇಲ್ಮನೆಗೆ ನಾಮಕರಣಗೊಂಡಿದ್ದರು.
ಟಿ ಕುಬಣೂರು ಬಾಲಕೃಷ್ಣ ರಾವ್ ಯಕ್ಷಗಾನ ರಂಗಕ್ಕೆ ನೀಡಿದ ಕೊಡುಗೆ ಗಮನಿಸಿ, ನಿಜಲಿಂಗಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಅವರನ್ನು ನಾಮಕರಣ ಮಾಡಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

