ದಕ್ಷಿಣ ಕನ್ನಡ

ಯುಪಿಸಿಎಲ್‌ನಿಂದ ಹಣ ಪಡೆದಿಲ್ಲ- ನಾಳೆ ಖಡ್ಗೇಶ್ವರಿ ದೇವಿ ಸನ್ನಿಧಿಯಲ್ಲಿ ಪ್ರಮಾಣ: ವಿಜಯ ಕುಮಾರ್ ಹೆಗ್ಡೆ

Published On :

ಉಡುಪಿ: ತಾನು ಯುಪಿಸಿಎಲ್ ಉಷ್ಣವಿದ್ಯುತ್ ಸ್ಥಾವರದಿಂದ ಹಣ ತೆಗೆದುಕೊಂಡಿದ್ದೇನೆ ಎಂದು ತನ್ನ ಮೇಲೆ ಆರೋಪ ಮಾಡಲಾಗುತ್ತಿದೆ. ಆದ್ದರಿಂದ 24ರಂದು ಪಡುಬಿದ್ರಿಯ ಖಡ್ಗೇಶ್ವರಿ ದೇವಿಯ ಸನ್ನಿಧಿಯಲ್ಲಿ ತಾನು ಯುಪಿಸಿಎಲ್‌ನಿಂದ ಹಣವನ್ನು ಪಡೆದುಕೊಂಡಿಲ್ಲ ಅಥವಾ ಮುಂದೆ ಸಿಗಬೇಕು ಎನ್ನುವ ದಷ್ಟಿಯಿಂದ ಚುನಾವಣೆ ಎದುರಿಸುತ್ತಿಲ್ಲ ಎಂದು ಬುಧವಾರ ಬೆಳಗ್ಗೆ 7 ಗಂಟೆಗೆ ಪ್ರಮಾಣ ಮಾಡುವ ಮೂಲಕ ಚುನಾವಣಾ ಪ್ರಚಾರ ಪ್ರಾರಂಭಿಸುವುದಾಗಿ ಕಾಪು ವಿಧಾನ ಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ರಾಜ್ಯ ರೈತ ಸಂಘದ ನಾಯಕ ವಿಜಯಕುಮಾರ್ ಹೆಗ್ಡೆ ಘೋಷಿಸಿದರು.
ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಪು ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಲಾಲಾಜಿ ಮೆಂಡನ್, ಕಾಂಗ್ರೆಸ್ ಅಭ್ಯರ್ಥಿ ವಿನಯಕುಮಾರ್ ಸೊರಕೆ, ಜೆಡಿಎಸ್ ಅಭ್ಯರ್ಥಿ ವಸಂತ ಸಾಲ್ಯಾನ್ ಸೇರಿದಂತೆ ಇತರ ಎಲ್ಲಾ ಅಭ್ಯರ್ಥಿಗಳು ತಾವು ಕೂಡ ಯುಪಿಸಿಎಲ್‌ನಿಂದ ಹಣ ಪಡೆದಿಲ್ಲ ಅಥವಾ ಅಂತಹ ಉದ್ದೇಶ ಹೊಂದಿಲ್ಲ ಎಂದು ಪ್ರಮಾಣ ಮಾಡುವಂತೆ ಅವರು ಸವಾಲು ಹಾಕಿದ್ದಾರೆ. ಅಭ್ಯರ್ಥಿಗಳಂತೆ ಯಾವುದೇ ಜಾತಿ ರಾಜಕಾರಣ ಮಾಡುತ್ತಿಲ್ಲ. ಈ ಕ್ಷೇತ್ರದಲ್ಲಿ ಜನರ ಜೀವನ ಮತ್ತು ಪರಿಸರಕ್ಕೆ ಮಾರಕವಾಗಿರುವ ಯುಪಿಸಿಎಲ್ ಸ್ಥಾವರವನ್ನು ಕಾನೂನು ಹೋರಾಟದ ಮೂಲಕ ಒದ್ದೋಡಿಸುವುದಕ್ಕಾಗಿ ಸ್ಪರ್ಧಿಸುತ್ತಿದ್ದೇನೆ ಎಂದರು.
ಯುಪಿಸಿಎಲ್ ಶಾಶ್ವತವಾಗಿ ಕಾರ್ಯಸ್ಥಗಿತಗೊಳಿಸಿದರೇ ವಿದ್ಯುತ್ ಕೊರತೆಯಾದಂತೆ ಕಾಪು ಕ್ಷೇತ್ರದಲ್ಲಿ ಸಮುದ್ರದ ಅಲೆಗಳಿಂದ, ಸೂರ್ಯನ ಬೆಳಕಿನಿಂದ, ಗಾಳಿಯಿಂದ, ಬಯೋಗ್ಯಾಸ್, ಭೂಮಿಯ ಗುರುತ್ವಾಕರ್ಷಣಾ ಬಲದಿಂದ ಕ್ಷೇತ್ರಕ್ಕೆ ಮಾತ್ರವಲ್ಲ ರಾಜ್ಯಕ್ಕೆ ಯಥೇಚ್ಛ ವಿದ್ಯುತ್ ಉತ್ಪಾದನೆಯ ಯೋಜನೆಗಳನ್ನು ಜಾರಿಗೊಳಿಸುವುದಾಗಿ, ಆ ಮೂಲಕ ಪರಿಸರವನ್ನು ಉಳಿಸುವುದು ಮಾತ್ರವಲ್ಲ ಸ್ಥಳಿಯ ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವುದಾಗಿ ಅವರು ಹೇಳಿದರು.
ಕೃಷಿ, ನೀರು, ಆಹಾಸ ಸಂಸ್ಕರಣೆ, ಕಾಡು ಬೆಳೆಸುವುದು, ಕೆರೆಗಳ ಅಭಿವೃದ್ಧಿ ಇತ್ಯಾದಿಗೆ ಆದ್ಯತೆ ನೀಡುವುದರ ಜೊತೆಗೆ ನದಿ ತಿರುವು ಯೋಜನೆಯ ವಿರುದ್ಧ ಹೋರಾಟ ನಡೆಸುವುದಾಗಿಯೂ ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಅವರ ಬೆಂಬಲಿಗರಾದ ಜಯಪ್ರಕಾಶ ಶೆಟ್ಟಿ, ಮಹಮ್ಮದ್ ಫಯಾಸ್, ಯು. ಪದ್ಮನಾಭ ಶೆಟ್ಟಿ ನಿಡ್ಡೋಡಿ, ಸುದತ್ತ ಜೈನ್ ಶಿರ್ತಾಡಿ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.