ದಕ್ಷಿಣ ಕನ್ನಡ

ಮತದಾರರ ಸೆಳೆಯಲು ವಿವಿಧ ಪಕ್ಷಗಳ ಸರ್ಕಸ್

Published On :

ಬಂಟ್ವಾಳ: ಚುನಾವಣಾ ಆಯೋಗದ ಹದ್ದಿನ ಕಣ್ಣು, ಖರ್ಚು ವೆಚ್ಚಗಳಿಗೆ ಕಡಿವಾಣ, ನೀತಿಸಂಹಿತೆ ಎಂಬ ಲಗಾಮು, ಇವೆಲ್ಲದರ ನಡುವೆ ರಾಜಕೀಯ ಪಕ್ಷಗಳು ಮತದಾರನ್ನು ಸೆಳೆಯಲು ಸರ್ಕಸ್ ನಡೆಸುತ್ತಿದೆ.
ಕ್ಷೇತ್ರದಲ್ಲಿ ಕಣದಲ್ಲಿರುವ ಆರು ಪಕ್ಷಗಳ ಪೈಕಿ ಬಹಿರಂಗ ಪ್ರಚಾರದ ಭರಾಟೆಯಲ್ಲಿ ಕಾಂಗ್ರೆಸ್ ಮುಂದಿದ್ದರೆ, ಬಿಜೆಪಿ ಮನೆ ಭೇಟಿ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ನಡೆಸುತ್ತಿದೆ.
ಕಾಂಗ್ರೆಸ್ ಬಿರುಸಿನ ಪ್ರಚಾರ: ಕಾಂಗ್ರೆಸ್ ಅಭ್ಯರ್ಥಿ ರಮಾನಾಥ ರೈ ಪರ ಪ್ರಚಾರಕ್ಕೆ ನಾಯಕರಾದ ಜನಾರ್ದನ ಪೂಜಾರಿ, ವೀರಪ್ಪ ಮೊಯ್ಲಿ, ಆಸ್ಕರ್ ಫೆರ್ನಾಂಡಿಸ್, ಚಿತ್ರನಟಿ ರಮ್ಯಾ, ಹರಿಯಾಣ ಸಂಸದ ಅಶೋಕ್ ತಲ್ವಾರ್,  ಮಂಜೇಶ್ವರ ಶಾಸಕ ಅಬ್ದುಲ್ ರಝಾಕ್, ಕೇರಳ ಸಂಸದ ಕೆ.ಟಿ. ಥೋಮಸ್ ಮೊದಲಾದವರು ಭಾಗವಹಿಸಿದ್ದರೆ, ಬ್ಲಾಕ್ ಹಾಗೂ ಬೂತ್ ಮಟ್ಟದಲ್ಲಿ ಸಭೆ, ಪ್ರಚಾರ ಸಭೆ, ಮನೆ ಭೇಟಿ ಕಾರ್ಯದಲ್ಲೂ ಕಾಂಗ್ರೆಸ್ ಮುಂದಿದೆ.
ಬಿಜೆಪಿ ಪ್ರಚಾರಸಭೆ: ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಪರ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವರುಣ್ ಗಾಂಧಿ, ಉಪಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಪ್ರಚಾರ ನಡೆಸಿದ್ದಾರೆ. ಬಿ.ಸಿ. ರೋಡು ಪರಿಸರದಲ್ಲೇ ಪ್ರಮುಖ ಪ್ರಚಾರ ಸಭೆಗಳನ್ನು ನಡೆಸಿರುವ ಬಿಜೆಪಿ ತನ್ನ ಸಂಘಟನೆಯ ಕಾರ್ಯವನ್ನು ಚುರುಕಿನಿಂದ ನಡೆಸುತ್ತಿದೆ. ಕೇಂದ್ರ ಸರ್ಕಾರದ ಭ್ರಷ್ಟಾಚಾರ, ತಾರತಮ್ಯ ನೀತಿ, ಬಿಜೆಪಿ ಸರ್ಕಾರದ ಸಾಧನೆಗಳನ್ನು ಮತದಾರರ ಮುಂದಿಡುತ್ತಿದೆ.
ಜೆಡಿಎಸ್ ಪ್ರಚಾರ: ಜೆಡಿಎಸ್ ಅಭ್ಯರ್ಥಿ ಕೃಷ್ಣಪ್ಪ ಪೂಜಾರಿ, ಜಿಲ್ಲಾ ಉಪಾಧ್ಯಕ್ಷ ಮಹಮ್ಮದ್ ಶಫಿ ಹಾಗೂ ಪಕ್ಷದ ಸ್ಥಳೀಯ ಮುಖಂಡರೊಂದಿಗೆ ಮತಯಾಚನೆ ನಡೆಸಿದ್ದಾರೆ. ಮನೆ ಭೇಟಿ, ಗ್ರಾಮ ಮಟ್ಟದಲ್ಲಿ ಪ್ರಚಾರ ಸಭೆಗಳನ್ನು ಜೆಡಿಎಸ್ ನಡೆಸಿದೆ.
ತಾಲೂಕಿನ ವಿವಿಧೆಡೆಗಳಲ್ಲಿ ಪಾದಯಾತ್ರೆ, ಪ್ರಚಾರ ಸಭೆ ಹಾಗೂ ಮನೆ ಭೇಟಿ ನಡೆಸಿರುವ ಎಸ್‌ಡಿಪಿಐ ಅಭ್ಯರ್ಥಿ ಮಜೀದ್‌ಖಾನ್‌ಗೆ ಬಂಟ್ವಾಳ ನಿವಾಸಿಗಳೇ ಆಗಿರುವ ಪಕ್ಷದ ರಾಜ್ಯ ನಾಯಕರು ಮತಪ್ರಚಾರದ ವೇಗ ಹೆಚ್ಚಿಸಿದ್ದಾರೆ. ರಾಜ್ಯ ಸಮಿತಿ ಪ್ರಮುಖ ಹನೀಫ್ ಖಾನ್ ಕೊಡಾಜೆ, ಅನ್ವರ್ ಸಾದಾತ್ ಮೊದಲಾದವರು ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ.
ಕೆಜೆಪಿ ಅಭ್ಯರ್ಥಿ ಇಬ್ರಾಹಿಂ ಕೈಲಾರ್ ಸ್ಥಳೀಯ ಕಾರ್ಯಕರ್ತರ ಜೊತೆಯಲ್ಲಿಯೇ ಮತ ಯಾಚನೆಯಲ್ಲಿ ಬ್ಯುಸಿಯಾಗಿದ್ದಾರೆ. ಜಿಲ್ಲಾ ಮುಖಂಡರಾದ ನಾಗೇಶ್ ಹಾಗೂ ಗೋಕುಲ್‌ದಾಸ್ ಭಂಡಾರ್ಕರ್ ಇಬ್ರಾಹಿಂ ಪರ ಪ್ರಚಾರ ನಡೆಸಿ ತೆರಳಿದ್ದಾರೆ. ತಾಲೂಕಿನ ಗ್ರಾಮ ಗ್ರಾಮಗಳಲ್ಲಿ ಕೆಜೆಪಿ ಮನೆಮನೆ ಭೇಟಿ ನಡೆಸುತ್ತಿದೆ.
ಇದೇ ಮೊದಲ ಬಾರಿಗೆ ಬಂಟ್ವಾಳ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಆರ್‌ಪಿಐ ಅಭ್ಯರ್ಥಿ ಲೋಲಾಕ್ಷ ನಾಮಪತ್ರ ಸಲ್ಲಿಕೆಯ ಜೊತೆಗೆ ನಡೆಸಿದ ಒಂದು ಪತ್ರಿಕಾಗೋಷ್ಠಿ ಹೊರತುಪಡಿಸಿದರೆ, ಮತದಾರರನ್ನು ಸೆಳೆಯುವ ಯಾವುದೇ ಪ್ರಚಾರ ಕಾರ್ಯ ನಡೆಸಿದಂತಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.