'ಧರ್ಮಪಾಲನೆ ಮಾಡದಿರುವುದು ಕೋಮುವಾದಕ್ಕೆ ಕಾರಣ'
ಗಂಗೊಳ್ಳಿ: ಇಂದು ಎಲ್ಲ ಕ್ಷೇತ್ರಗಳಲ್ಲಿಯೂ ಕೋಮುವಾದ ಮತ್ತು ಅಸಹಿಷ್ಣುತೆ ಎಂಬುದು ಕ್ಯಾನ್ಸರ್‌ನಂತೆ ಹಬ್ಬುತ್ತಿದೆ. ಇದಕ್ಕೆ ನಿಜವಾದ ಕಾರಣ ಅವರವರ ಧರ್ಮವನ್ನು ಸರಿಯಾಗಿ ಪಾಲಿಸದೆ ಇರುವುದು ಎಂದು ತೊಕ್ಕೊಟ್ಟು ಜುಮ್ಮಾ ಮಸೀದಿ ಖತೀಬ ಮಹಮ್ಮದ್ ಕುಂಞ ಅಭಿಪ್ರಾಯಪಟ್ಟಿದ್ದಾರೆ.
ಇಲ್ಲಿನ ಎಸ್.ವಿ. ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ಭಾನುವಾರ ಸರ್ವಧರ್ಮ ಮಹಾಸಮ್ಮೇಳನ ಹಾಗೂ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯಾವುದೇ ಧರ್ಮ ಇನ್ನೊಂದು ಧರ್ಮದ ವಿರುದ್ಧ ಇಲ್ಲ, ಇದನ್ನು ಒಪ್ಪದ ಧಾರ್ಮಿಕ ವಾದ ಸಮಾಜದಲ್ಲಿ ಬೆಳೆಯುತ್ತಿದೆಯೇ ಹೊರತು ಧಾರ್ಮಿಕ ಪ್ರಜ್ಞೆ ಬೆಳೆಯುತ್ತಿಲ್ಲ. ಧರ್ಮಗಳ ನಿಜವಾದ ಚಿಂತನೆ ಹಾಗೂ ಮೌಲ್ಯವನ್ನು ಪಾಲಿಸದಿರುವುರಿಂದ ಕೋಮು ಗಲಭೆಗಳು ನಡೆಯುತ್ತವೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಡುಪಿಯ ಜ್ಯೋತಿಷಿ ಕಬ್ಯಾಡಿ ಜಯರಾಮ ಆಚಾರ್ಯ, ಮಕ್ಕಳಲ್ಲಿ ಸರ್ವಧರ್ಮ ಸಮಭಾವವನ್ನು ಹುಟ್ಟಿಸಿದರೆ ಅವರು ಭವಿಷ್ಯದ ಶ್ರೇಷ್ಠ ನಾಗರಿಕರಾಗುವುದಕ್ಕೆ ಸಾಧ್ಯ ಎಂದರು.
ಅಧ್ಯಕ್ಷತೆಯನ್ನು ಯುಎಇ ಉದ್ಯಮಿ ಪ್ರವೀಣ್ ವಹಿಸಿದ್ದರು. ಧರ್ಮಾಧ್ಯಕ್ಷ ಬಿಷಪ್ ಪೀಟರ್ ಮಚಾದೊ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ಉಡುಪಿ ಅಂತರ್‌ಧರ್ಮೀಯ ಸೌಹಾರ್ದ ಸಮಿತಿ ಸಂಚಾಲಕ ವಿಲಿಯಂ ಮಾರ್ಟಿಸ್, ಗಂಗೊಳ್ಳಿಯ ವಿರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ಭಟ್, ಉದ್ಯಮಿಗಳಾದ ಶೀನ ದೇವಾಡಿಗ, ಎಂ. ಸುರೇಶ್ ಶೆಟ್ಟಿ, ರವೀಂದ್ರ ಮತ್ತಿತರರು ವೇದಿಕೆಯಲ್ಲಿದ್ದರು.
ಸರ್ವಧರ್ಮ ಸಮ್ಮಿಲನ ವೇದಿಕೆ ಪ್ರಧಾನ ಕಾರ್ಯದರ್ಶಿ ದಿವಾಕರ್ ಎನ್. ಖಾರ್ವಿ ಸ್ವಾಗತಿಸಿದರು.
ಸಮಾಜ ಸೇವಕರಾದ ಎಂ.ಎಂ. ಇಬ್ರಾಹಿಂ ಮತ್ತು ನರಸಿಂಹ ಪೂಜಾರಿ ಅವರಿಗೆ ಹುಟ್ಟೂರ ಸನ್ಮಾನ ಮಾಡಲಾಯಿತು.
ಧಾರ್ಮಿಕ ಸಭಾ ಕಾರ್ಯಕ್ರಮದ ಮೊದಲು ಸಾಮೂಹಿಕ ಉಚಿತ ವಿವಾಹ ನೇರವೇರಿತು.
ಸಂಜೆ ವೇಳೆಗೆ ಮಿಮಿಕ್ರಿ ದಯಾನಂದ ಬೆಂಗಳೂರು ಹಾಗೂ ತಂಡದವರಿಂದ ಮನರಂಜನಾ ಕಾರ್ಯಕ್ರಮ ನೆರವೇರಿತು. ಈ ಸಂದರ್ಭ ಕನ್ನಡ ಚಿತ್ರರಂಗದ ನಟ- ನಟಿಯರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

