ಎತ್ತಿನಹೊಳೆ ಯೋಜನೆ: ವೈಜ್ಞಾನಿಕ ಅಧ್ಯಯನಕ್ಕೆ ರಮಾನಾಥ ರೈ ಇಂಗಿತ
ಮಂಗಳೂರು: ಉತ್ತರ ಕರ್ನಾಟಕಕ್ಕೆ ನೇತ್ರಾವತಿ ನದಿ ನೀರನ್ನು ಹರಿಸುವ ಎತ್ತಿನಹೊಳೆ ಯೋಜನೆ ಬಗ್ಗೆ ವೈಜ್ಞಾನಿಕ ಅಧ್ಯಯನದ ಅಗತ್ಯವಿದೆ ಎಂದು ಅರಣ್ಯ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆದ ರಮಾನಾಥ ರೈ ಹೇಳಿದ್ದಾರೆ.
ಗುರುವಾರ ಮಂಗಳೂರಲ್ಲಿ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಪರಮಶಿವಯ್ಯ ವರದಿ ಪ್ರಕಾರ ಎತ್ತಿನಹೊಳೆ ಯೋಜನೆ ಜಾರಿಯಾದರೆ ಪರಿಸರಕ್ಕೆ ಹಾನಿ ಇಲ್ಲ ಎನ್ನುತ್ತಿದ್ದಾರೆ. ಈ ಯೋಜನೆ ಜಾರಿ ಕುರಿತು ಕರಾವಳಿ ಭಾಗದ ಜನಪ್ರತಿನಿಧಿಗಳು ಹಾಗೂ ಉತ್ತರ ಕರ್ನಾಟಕದ ಜನಪ್ರತಿನಿಧಿಗಳ ನಡುವೆ ಅಭಿಪ್ರಾಯ ಭೇದವಿದೆ. ಯೋಜನೆ ಜಾರಿಗೊಳಿಸುವ ಮುನ್ನ ಅದರ ಸಾಧಕ ಬಾಧಕ ಕುರಿತು ವೈಜ್ಞಾನಿಕ ಅಧ್ಯಯನ ನಡೆಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಎತ್ತಿನಹೊಳೆ ಯೋಜನೆ ಕೈಗೆತ್ತಿಕೊಂಡರೆ ಪರ್ಯಾಯವಾಗಿ ಕರಾವಳಿಯಲ್ಲಿ ಪಶ್ಚಿಮವಾಹಿನಿ ಯೋಜನೆ ಜಾರಿಗೆ ತ್ವರಿತ ಕ್ರಮಕೈಗೊಳ್ಳಬೇಕು. ನದಿಗಳಿಗೆ ಅಲ್ಲಲ್ಲಿ ಅಣೆಕಟ್ಟೆ ನಿರ್ಮಿಸಿ ಯೋಜನೆ ಫಲಪ್ರದವಾಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ನಿಡ್ಡೋಡಿಗೆ ರೆಡ್ಸಿಗ್ನಲ್?: ಮೂಡುಬಿದಿರೆ ಬಳಿ ಸ್ಥಾಪಿಸಲುದ್ದೇಶಿಸಿದ ಉಷ್ಣ ವಿದ್ಯುತ್ ಸ್ಥಾವರಕ್ಕೆ ಪರಿಸರ ಸಚಿವರಿಂದ ರೆಡ್ಸಿಗ್ನಲ್ ನೀಡುವ ಸಂಕೇತ ತೋರಿದ್ದಾರೆ. ಪರಿಸರನಾಶ, ಅರಣ್ಯನಾಶದ ಸಾಧಕ, ಬಾಧಕ ಗಮನಿಸಿಯೇ ಯೋಜನೆಗಳಿಗೆ ಅನುಮತಿ ನೀಡಲಾಗುವುದು. ಜತೆಗೆ ಸ್ಥಳೀಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂಬುದನ್ನು ತೀರ್ಮಾನಿಸಲಾಗುವುದು ಎಂದರು.
ನಿಡ್ಡೋಡಿ ಯೋಜನೆಗೆ ಪರಿಸರದ ಜನತೆಯ ವಿರೋಧವನ್ನು ಈಗಾಗಲೇ ಮುಖ್ಯಮಂತ್ರಿ ಗಮನಕ್ಕೆ ತರಲಾಗಿದೆ. ಅವರೊಂದಿಗೆ ಮತ್ತೆ ಚರ್ಚೆ ನಡೆಸಲಾಗುವುದು. 2006ರಲ್ಲಿ ನಿಡ್ಡೋಡಿ ಯೋಜನೆಗೆ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಕೆಯಾಗಿದೆ. ಸ್ಥಳೀಯರ ವಿರೋಧವಿದ್ದರೆ ಕೊಜೆಂಟ್ರಿಕ್ಸ್, ನಾಗಾರ್ಜುನ ಈಗ ಎಲ್ಲಿದೆ ಎಂಬುದು ಎಲ್ಲರಿಗೆ ಗೊತ್ತಿದೆ ಎನ್ನುವ ಮೂಲಕ ನಿಡ್ಡೋಡಿಗೆ ಪರಿಸರ ಇಲಾಖೆಯ ರೆಡ್ಸಿಗ್ನಲ್ನ ಸುಳಿವು ನೀಡಿದರು. ಕೇಂದ್ರ ಸಚಿವರ ಸೂಚನೆ ಮೇರೆಗೆ ಕಾಂಗ್ರೆಸ್ ತಂಡ ನಿಡ್ಡೋಡಿಗೆ ಭೇಟಿ ನೀಡಿರುವುದು ಗೊತ್ತಾಗಿಲ್ಲ ಎಂದರು. ಅಣೆಕಟ್ಟೆಯಂಥ ಯೋಜನೆಗಳಿಂದ ಕಾಡಿನಲ್ಲಿರುವ ಆನೆಗಳು ನಾಡಿಗೆ ದಾಳಿ ಇಡುತ್ತಿವೆ ಎಂದು ಆನೆಕಾರಿಡಾರ್ ಕುರಿತ ಪ್ರಶ್ನೆಗೆ ಉತ್ತರಿಸಿದರು.
ಕುಮ್ಕಿ ಹಕ್ಕು ಪರಿಶೀಲನೆ: ಹಿಂದಿನ ಸರ್ಕಾರ ಜಾರಿಗೊಳಿಸಿದ ಕುಮ್ಕಿ ಹಕ್ಕು ಕಾಯ್ದೆ ಜಾರಿಗೊಳಿಸುವ ಕುರಿತು ಅಂತಿಮ ತೀರ್ಮಾನ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವ ರಮಾನಾಥ ರೈ, ಅರಣ್ಯ ಅತಿಕ್ರಮಣಕ್ಕೆ ಆಸ್ಪದವಿಲ್ಲ ಎಂದು ಹೇಳಿದರು.
ಕುದುರೆಮುಖ ರಾಷ್ಟ್ರೀಯ ಉದ್ಯಾನದಿಂದ ಮಲೆಕುಡಿಯರನ್ನು ಒಕ್ಕಲೆಬ್ಬಿಸಿ ಅವರಿಗೆ ಬೆಳ್ತಂಗಡಿಯ ನಾಯ್ದಗುರಿಯಲ್ಲಿ ಪರ್ಯಾಯ ನಿವೇಶನ ನೀಡುವ ಭರವಸೆಯನ್ನು ಜಿಲ್ಲಾಡಳಿತ ಈಡೇರಿಸಿಲ್ಲ. ಈಗ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿ ವಾಸಿಸುವವರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತಿರುವುದನ್ನು ಸಚಿವರ ಗಮನಕ್ಕೆ ತಂದಾಗ, ಈ ಬಗ್ಗೆ ಅಧ್ಯಯನ ನಡೆಸಿ ಪ್ರತಿಕ್ರಿಯಿಸುವುದಾಗಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

