ದಕ್ಷಿಣ ಕನ್ನಡ

ಗುರು ರಕ್ಷೆ ಇರುವವರೆಗೆ ಶಿಷ್ಯನಿಗೆ ಆಪತ್ತಿಲ್ಲ: ರಾಘವೇಶ್ವರ ಶ್ರೀ

Published On :

ವಿಟ್ಲ: ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದ ಜನಭವನದಲ್ಲಿ ರಾಮಕಥಾ ಕಾರ್ಯಕ್ರಮದ ನಾಲ್ಕನೇ ದಿನವಾದ ಬುಧವಾರ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಪ್ರವಚನ ನೀಡುತ್ತಾ ಗುರುವಿನ ಶಾಪಕ್ಕೆ ತತ್ತರಿಸಿದ ವಾಲಿ, ಮತ್ತಷ್ಟು ಕುಕೃತ್ಯಗಳ ಮೂಲಕ ಭಗವಂತನ ಕೋಪಕ್ಕೆ ಈಡಾಗುತ್ತಾನೆ ಎನ್ನುವುದನ್ನು ವಿಶ್ಲೇಷಿಸಿದರು.
 ಜ್ಞಾನ ಮತ್ತು ಧನ ದುಷ್ಟನಲ್ಲಿದ್ದರೆ ಸಮಾಜ ಉತ್ತಮವಾಗಿರಲು ಸಾಧ್ಯವಾಗದು, ಉತ್ತಮನಲ್ಲಿದ್ದರೆ ಒಳ್ಳೆಯ ಕಾರ್ಯಕ್ಕೆ ಬಳಕೆಯಾಗಿ ಸಮಾಜ ಬಹಳ ಮುಂದುವರಿಯುತ್ತದೆ. ನದಿ, ಸಾಗರ, ಬೆಟ್ಟ ಕಾನನಗಳನ್ನೊಳಗೊಂಡ ಪ್ರಕೃತಿಯನ್ನು ದುಂದುಭಿಯಂತೆ ಪೀಡಿಸಿದರೆ ಅಲ್ಲೋಲಕಲ್ಲೋಲಗಳು ಉಂಟಾಗುತ್ತದೆ. ವಾಲಿಗೆ ತನ್ನಲ್ಲಿನ ಶಕ್ತಿಯಿಂದ ಮದವೇರಿತ್ತು. ಸಕಲೈಶ್ವರ್ಯಗಳಿಂದ ಅಹಂಕಾರದಿಂದ ತುಂಬಿದ್ದ ವಾಲಿಗೆ ಅವನ ಬುದ್ಧಿಗೆ ದಾರಿದ್ರ್ಯ ಬಂದುದು ಅವನ ಅರಿವಿಗೇ ಬರಲೇ ಇಲ್ಲ. ಅಮಲಿನಲ್ಲಿ ಮೈಮರೆತಿದ್ದ ವಾಲಿಯು ಜಗಳಕ್ಕೆ ಬಂದಿದ್ದ ದುಂದುಭಿಯನ್ನು ಕೊಂದ ಬಳಿಕವೂ ಅಂದರೆ ಶವದ ಮೇಲೆ ದ್ವೇಷದ ಉರಿಯನ್ನು ಹೆಚ್ಚಿಸಿಕೊಂಡ. ಶವವನ್ನು ತಿರುಗಿಸಿ ಎಸೆದ. ಅದು ಹೋಗಿ ಬಿದ್ದದ್ದು ಮತಂಗ ಮುನಿಯ ಆಶ್ರಮಕ್ಕೆ. ದೈತ್ಯಾಕಾರದ ಶವವು ಬಿದ್ದಾಗ ತನ್ನ ಗುರುವಿನ ಆಶ್ರಮ ನಾಶವಾಯಿತು. ಜತೆಗೆ ದುಂದುಭಿಯ ರಕ್ತ ಗುರುವಿನ ಮೈಮೇಲೆ ರಾಚಿತು. ಇದರಿಂದ ವಾಲಿಯು ಗುರುಶಾಪಕ್ಕೆ ತುತ್ತಾದ. ನಂತರ ವಾಲಿ ಗುರುವಿನಲ್ಲಿ ಕ್ಷಮೆಯಾಚಿಸುತ್ತಾನೆ. ಆದರೂ ಶಾಪವಿಮೋಚನೆಯ ದಾರಿಯನ್ನು ಗುರು ಕಲ್ಪಿಸಲೇ ಇಲ್ಲ ಎಂದು ರಾಘವೇಶ್ವರ ಶ್ರೀ ವಿಶ್ಲೇಷಿಸಿದರು.  ಹಾಗಾಗಿ ಗುರುವಿನ ರಕ್ಷೆ ಇರುವ ತನಕ ಶಿಷ್ಯನಿಗೆ ಆಪತ್ತಿಲ್ಲ. ಆದರೆ ಗುರು ರಕ್ಷೆಯಿಂದ ಹೊರಬಂದರೆ ರಕ್ಷಣೆಯಿಲ್ಲ ಎಂದು ತಿಳಿಸಿದ ಅವರು ಮದವೇರಿದ ವಾಲಿಗೆ ಗುರುಗಳ ಶಾಪ ಹಾಗೆಯೇ ಉಳಿಯಿತು. ಅಮಲು ಸೋಲಿನ ಮೂಲ ಎಂದು ತಿಳಿಸಿದರು.
ರೂಪಕದ ಮೂಲಕ ದುಂದುಭಿಯ ಪ್ರವೇಶ, ವಾಲಿಯೊಡನೆ ಕಾಳಗ, ಸತ್ತ ದುದುಂಭಿಯನ್ನು ವಾಲಿ ಎಸೆದಾಗ ಋಷಿಗಳ ಮೇಲೆ ಬಿದ್ದು ಸಿಟ್ಟಿಗೆದ್ದು ಶಾಪ ನೀಡಿದ ದೃಶ್ಯಗಳನ್ನು ಪ್ರಸ್ತುತಪಡಿಸಲಾಯಿತು. ರಾಮ ರಾಮ.. ರವಿಕುಲ ಸೋಮ.., ರಾಜ್ಯ, ಕೋಶ, ಸಚಿವ, ಪದವಿ ಸಕಲ ಭಾಗ್ಯ ತೊರೆದೆಯೇಕೆ ಹನುಮ ಎಂಬಿತ್ಯಾದಿ ಹಾಡುಗಳು ಇಂಪಾಗಿದ್ದವು. ಶಂಕರೀ ಮೂರ್ತಿ ಬಾಳಿಲ ಗಾಯಕಿಯಾಗಿ ರಾಮಕಥಾ ತಂಡದಲ್ಲಿ ಸೇರ್ಪಡೆಯಾಗಿದ್ದರು. ನೀರ್ನಳ್ಳಿ ಗಣಪತಿ, ಅಶೋಕ, ಗೋಪಿ ಅವರ ಚಿತ್ತಾರಗಳು ಪ್ರೇಕ್ಷಕರನ್ನು ಮಂತ್ರ ಮುಗ್ಧಗೊಳಿಸಿತ್ತು.
ಮದ್ಯದಿಂದಲೇ ಪ್ರಾಣ ಹಾನಿ: ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರು ವಾಲಿ ಅಮಲು ಪದಾರ್ಥ ಸೇವಿಸಿದ್ದೇ ಇಷ್ಟೆಲ್ಲಾ ರಾದ್ಧಾಂತಗಳಿಗೆ ಕಾರಣವಾಯಿತು ಎಂದು ಹೇಳುತ್ತ ಮದ್ಯದಂತಹ ಅಮಲು ಪದಾರ್ಥಗಳಿಂದ ನಮ್ಮ ದೇಶದಲ್ಲಿ ಹೆಚ್ಚಿನ ಅನಾಹುತಗಳು ಸಂಭವಿಸುತ್ತಿವೆ. ಈ ಅಮಲು ಪದಾರ್ಥಗಳು ಇಲ್ಲದಿದ್ದರೆ ದೇಶದಲ್ಲಿ ಅದೆಷ್ಟೋ ಅನಾಹುತಗಳು ತಪ್ಪಿಹೋಗುತ್ತಿದ್ದವು. ಮದ್ಯವನ್ನು ಸೇವಿಸಿಯೇ ಅಪಘಾತಗಳು, ಜಗಳಗಳು, ಕೊಲೆ, ಸುಲಿಗೆಗಳು, ಪಾಪಕೃತ್ಯಗಳು ನಡೆಯುತ್ತವೆ. ಅಮಲು ಪದಾರ್ಥ ಸೇವಿಸದೇ ಇದ್ದಲ್ಲಿ ಮನುಷ್ಯ ರಾಕ್ಷಸನಾಗುವುದಿಲ್ಲ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.