ದಕ್ಷಿಣ ಕನ್ನಡ

ವಿದ್ಯಾರ್ಥಿಗಳಲ್ಲಿ ವೈಷಮ್ಯ ಮೂಡಿಸುವ ಯತ್ನ: ಸೂಕ್ತ ಕ್ರಮಕ್ಕೆ ಮೂಲ್ಕಿ ನ.ಪಂ. ಸದಸ್ಯರ ಆಗ್ರಹ

Published On :

ಮೂಲ್ಕಿ:  ಮೂಲ್ಕಿ ಪರಿಸರದ ಕಾಲೇಜುಗಳಲ್ಲಿ ಹೊರಗಿನ ಸಂಘಟನೆಗಳಿಂದ ವಿದ್ಯಾರ್ಥಿಗಳಲ್ಲಿ ವೈಷಮ್ಯ ಮೂಡಿಸುವ ಯತ್ನ ನಡೆಯುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಮೂಲ್ಕಿ ನಗರ ಪಂಚಾಯಿತಿ ಸದಸ್ಯರು ಆಗ್ರಹಿಸಿದ್ದಾರೆ.
ಮೂಲ್ಕಿ ನಗರ ಪಂಚಾಯಿತಿ ಸಭಾಭವನದಲ್ಲಿ ಅಧ್ಯಕ್ಷ ಶಶಿಕಾಂತ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಬುಧವಾರ ಜರುಗಿದ ನಗರ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಈ ಆಗ್ರಹ ಕೇಳಿಬಂತು. ಇತ್ತೀಚೆಗೆ ಮೂಲ್ಕಿಯ ಪ್ರತಿಷ್ಠಿತ ಕಾಲೇಜಿನಲ್ಲಿ ವಿದ್ಯಾರ್ಥಿಗಳ ನಡುವೆ ಹೊಡೆದಾಟ ನಡೆದಿದ್ದು, ಇದನ್ನು ವಿದ್ಯಾರ್ಥಿ ಸಂಘಟನೆ ಹಾಗೂ ಹೊರಗಿನ ವ್ಯಕ್ತಿಗಳು ಬೆಂಬಲಿಸಿದ್ದರು. ಮೂಲ್ಕಿಯಲ್ಲಿ ಕೋಮು ಸೌಹಾರ್ದತೆ ಕದಡುವ ಯತ್ನ ನಡೆಯುತ್ತಿದೆ. ಈ ಬಗ್ಗೆ ಕಾಲೇಜ್ ಮಂಡಳಿ, ಪೊಲೀಸ್ ಇಲಾಖೆ ಎಚ್ಚರ ವಹಿಸುವಂತೆ ಮಾಜಿ ಅಧ್ಯಕ್ಷ ಬಿ.ಎಂ. ಆಸೀಫ್ ಒತ್ತಾಯಿಸಿದರು.
ಆಧಾರ್ ತೊಂದರೆ: ಮೂಲ್ಕಿಯ ಜನರು ಆಧಾರ್ ಕಾರ್ಡ್ ನೋಂದಣಿಗೆ ಸುರತ್ಕಲ್‌ಗೆ ಹೋಗಬೇಕಾಗಿದೆ. ಮೂಲ್ಕಿ ನಗರ ಪಂಚಾಯಿತಿಯಲ್ಲಿ ಆಧಾರ್ ಕಾರ್ಡ್ ನೋಂದಣಿ ಕೇಂದ್ರ ಆರಂಭಿಸುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆಯುವಂತೆ ಆಸೀಫ್ ತಿಳಿಸಿದರು.
ಬಾಟ್ಲಿ ತೆರವುಗೊಳಿಸಿ: ಮೂಲ್ಕಿ ಪೊಲೀಸ್ ಠಾಣೆಯ ಸಹಾಯಕ ಉಪ ನಿರೀಕ್ಷಕ ಚಂದ್ರಹಾಸ್ ಮಾತನಾಡಿ, ಮೂಲ್ಕಿ ಪರಿಸರದ ಅಂಗಡಿಗಳಲ್ಲಿ ಅಂಗಡಿಯ ಹೊರಗಡೆ ಪಾನೀಯ ಬಾಟ್ಲಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಾಶಿ ಬಿದ್ದಿದ್ದು, ಯಾವುದಾದರೂ ಗಲಾಟೆ ನಡೆದ ಸಂದರ್ಭ ಇದರ ದುರುಪಯೋಗವಾಗುವುದರಿಂದ ಪಂಚಾಯಿತಿ ಇದನ್ನು ತೆರವುಗೊಳಿಸುವಂತೆ ಆಗ್ರಹಿಸಿದರು.
ಮೂಲ್ಕಿಯ ಗೇರುಕಟ್ಟೆಯ ಕುದ್ಕಪಳ್ಳದಲ್ಲಿ ಡಾಂಬರು ರಸ್ತೆಗೆ ಹಾಕಿರುವ ಗೇಟನ್ನು ತೆಗೆಸುವಂತೆ ಹಾಗೂ ಅಧ್ಯಕ್ಷರ ಮನೆಯ ರಸ್ತೆಗೆ ಇಂಟರ್‌ಲಾಕ್ ಹಾಕಿರುವ ಬಗ್ಗೆ ಸದಸ್ಯ ಲಕ್ಷ್ಮಣ್ ಪೂಜಾರಿ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡಾಗ, ರಸ್ತೆಗೆ ಗೇಟು ಹಾಕಿರುವ ವಿಷಯ ನ್ಯಾಯಾಲಯದಲ್ಲಿ ಬಾಕಿಯಿದ್ದು, ತೀರ್ಪು ಬರುವವರೆಗೆ ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಅಧ್ಯಕ್ಷ ಶಶಿಕಾಂತ್ ಶೆಟ್ಟಿ ತಿಳಿಸಿದರು. ಮುಖ್ಯಾಧಿಕಾರಿ ಹರಿಶ್ಚಂದ್ರ ಸಾಲ್ಯಾನ್ ಕಲಾಪ ನಡೆಸಿಕೊಟ್ಟರು. ಉಪಾಧ್ಯಕ್ಷ ಯೋಗೀಶ್ ಕೋಟ್ಯಾನ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.