ಆಟಿ ಅಮವಾಸ್ಯೆ: ಸಹಸ್ರಾರು ಭಕ್ತರಿಂದ ತೀರ್ಥಸ್ನಾನ
ಉಪ್ಪಿನಂಗಡಿ: ಆಷಾಢ ಅಮವಾಸ್ಯೆಯ ಮಂಗಳವಾರ ಉಪ್ಪಿನಂಗಡಿಯ ನೇತ್ರಾವತಿ ಮತ್ತು ಕುಮಾರಾಧಾರ ನದಿ ಸಂಗಮ ಸ್ಥಳದಲ್ಲಿ ಭಾರಿ ಸಂಖ್ಯೆಯ ಭಕ್ತರು ತೀರ್ಥ ಸ್ನಾನ ಮಾಡಿ, ಗತಿಸಿದ ಹಿರಿಯರನ್ನು ನೆನೆದು ಪಿತೃತರ್ಪಣ ಅರ್ಪಿಸಿದರು.
ಶ್ರದ್ಧಾಳುಗಳು ಮನೆ ಮಂದಿಯೊಡಗೂಡಿ ನದಿಯಲ್ಲಿ ಮಿಂದು, ಮತ್ತೆ ಕೆಲವರು ನದಿ ನೀರನ್ನು ಸಂಪ್ರೋಕ್ಷಣೆ ಮಾಡಿ ಧನ್ಯತಾ ಭಾವನೆ ಹೊಂದಿದ್ದರೆ, ಹಲವರು ನದಿಗೆ ಧಾನ್ಯ ಮತ್ತು ಪುಷ್ಪಗಳ ಸಹಿತ ಬಾಗಿನ ಸಮರ್ಪಿಸಿದರು.
ಆಟಿ ಅಮವಾಸ್ಯೆಯ ಅಂಗವಾಗಿ ಬಹುತೇಕ ಮಂದಿ ಅರ್ಚಕರ ಮೂಲಕ, ಗತಿಸಿದ ಹಿರಿಯರ ಸದ್ಗತಿಗಾಗಿ ತಿಲ ಹೋಮ, ಪಿಂಡ ಪ್ರದಾನಾದಿ ಕಾರ್ಯಗಳನ್ನು ನಡೆಸಿದರು.
ಸತತ ಮಳೆಯಿಂದ ನದಿ ನೀರಿನಲ್ಲಿ ಗಣನೀಯ ವ್ಯತ್ಯಯಗಳಾಗುತ್ತಿದ್ದ ಕಾರಣ ನದಿಯಲ್ಲಿ ಸ್ನಾನ ಮಾಡುವ ಭಕ್ತಾದಿಗಳ ಹಿತದೃಷ್ಟಿಯಿಂದ ದೇವಳದ ಆಡಳಿತ ಮಂಡಳಿಯು ಈ ಬಾರಿ ರಕ್ಷಣ ಕಾರ್ಯ ತಂತ್ರಗಳನ್ನು ಅನುಸರಿಸಿತು.
ನದಿಗಿಳಿಯುವ ಮಂದಿ ನೀರಿನ ಸೆಳೆತದಿಂದ ರಕ್ಷಿಸಿಕೊಳ್ಳುವಂತೆ ಹಗ್ಗಗಳನ್ನು ನದಿಯ ಮೆಟ್ಟಿಲಲ್ಲಿ ಅಳವಡಿಸಲಾಗಿತ್ತು. ತನ್ಮೂಲಕ ಹಗ್ಗವನ್ನು ಕೈಯಲ್ಲಿ ಹಿಡಿದುಕೊಂಡೇ ನದಿಯಲ್ಲಿ ಮುಳುಗಿ ಏಳಲು ಅವಕಾಶ ಕಲ್ಪಿಸಲಾಗಿತ್ತು.
ದೇವಾಲಯಕ್ಕೆ ಭಾರಿ ಸಂಖ್ಯೆಯ ಭಕ್ತಾದಿಗಳು ಆಗಮಿಸಿದ್ದು, ದೇವಾಲಯದ ಆಡಳಿತ ಮಂಡಳಿಯ ಕರುಣಾಕರ ಸುವರ್ಣ, ಕಂಗ್ವೆ ವಿಶ್ವಾನಾಥ ಶೆಟ್ಟಿ, ಸುಂದರ ಗೌಡ ಮತ್ತಿತರರು ಭಕ್ತಾದಿಗಳಿಗೆ ಅನುಕೂಲಕರವಾದ ವ್ಯವಸ್ಥೆ ಕಲ್ಪಿಸಿದರು.
ದೋಣಿ ಬೇಡಿಕೆಗೆ ಸ್ಪಂದಿಸಿದ ಶಾಸಕಿ: ಸತತ ಮಳೆ ಹಾಗೂ ನದಿ ನೀರಿನ ಹರಿವು ಹೆಚ್ಚಳದಿಂದ ನದಿಯಲ್ಲಿ ತೀರ್ಥ ಸ್ನಾನಕ್ಕೆಂದು ಬರುವ ಭಕ್ತಾದಿಗಳ ಸುರಕ್ಷತೆಗಾಗಿ ನದಿ ಪಾತ್ರದಲ್ಲಿ ದೋಣಿ ಇರಿಸುವ ಬಗ್ಗೆ ದೇವಳದ ಆಡಳಿತ ಮಂಡಳಿ ಬೇಡಿಕೆಗೆ ಶಾಸಕಿ ಶಕುಂತಳಾ ಶೆಟ್ಟಿ ತುರ್ತು ಸ್ಪಂದಿಸಿದ್ದಾರೆ.
ಈ ಬಗ್ಗೆ ಅಗ್ನಿಶಾಮಕ ದಳಕ್ಕೆ ಸೂಚನೆ ನೀಡಿದ್ದ ಶಾಸಕಿ, ದೋಣಿ ಸಹಿತ ಸನ್ನದ್ಧವಾಗಿರುವಂತೆ ಸೂಚಿಸಿದ್ದರು.
ಅಂತೆಯೇ ದೋಣಿಯನ್ನು ತಮ್ಮ ವಾಹನದಲ್ಲೇ ಅಳವಡಿಸಿಕೊಂಡು, ಅಗ್ನಿಶಾಮಕ ದಳದ ಸಿಬ್ಬಂದಿ ದೇವಳದ ಸ್ನಾನಘಟ್ಟದಲ್ಲೇ ಸನ್ನದ್ಧತೆಯಿಂದ ಕಾರ್ಯನಿರ್ವಹಿಸಿದರು.
ಬಂಟ್ವಾಳ: ತಾಲೂಕಿನ ಎರಡು ಪುರಾಣ ಪ್ರಸಿದ್ಧ ಕ್ಷೇತ್ರಗಳಾದ ನರಹರಿ ಶ್ರೀ ಸದಾಶಿವ ದೇವಸ್ಥಾನ ಹಾಗೂ ಕಾರಿಂಜದ ಮಹಾತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಆಟಿ ಅಮಾವಾಸ್ಯೆ ಅಂಗವಾಗಿ ಮಂಗಳವಾರ ವಿಶೇಷ ತೀರ್ಥ ಸ್ನಾನ ನಡೆಯಿತು.
ಎರಡೂ ಕ್ಷೇತ್ರಗಳಲ್ಲಿಯೂ ಮುಂಜಾನೆ 4 ಗಂಟೆಯಿಂದಲೇ ಭಕ್ತರು ದೇವರ ದರ್ಶನ ಪಡೆದು ಆಟಿ ಅಮವಾಸ್ಯೆಯ ತೀರ್ಥ ಸ್ನಾನ ಮಾಡಿದರು. ಶ್ರೀ ಕ್ಷೇತ್ರ ಕಾರಿಂಜದ ಗದಾತೀರ್ಥ, ಉಂಗುಷ್ಠ ತೀರ್ಥ ಹಾಗೂ ಜಾನುತೀರ್ಥಗಳಲ್ಲಿ ಮಿಂದ ಸಹಸ್ರಾರು ಭಕ್ತರು ಬಳಿಕ ದೇವರ ದರ್ಶನ ಪಡೆದರು.
ಭಾರಿ ಜನದಟ್ಟಣೆ: ಮಧ್ಯಾಹ್ನದವರೆಗೂ ದೇವಸ್ಥಾನದಲ್ಲಿ ಭಾರಿ ಜನದಟ್ಟಣೆ ಕಂಡು ಬಂದಿದ್ದು ಕ್ಷೇತ್ರದ ಆರಾಧ್ಯ ಮೂರ್ತಿ ಶಿವ- ಪಾರ್ವತಿಯರ ದರ್ಶನ ಪಡೆಯಲು ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದರು.
ನೂತನ ವಧು-ವರರು ಆಟಿ ಅಮಾವಾಸ್ಯೆಯ ದಿನದಂದು ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುವುದು ಇಲ್ಲಿನ ವಿಶೇಷತೆಯಾಗಿದ್ದು, ಮಂಗಳವಾರವೂ ಹೆಚ್ಚಿನ ಸಂಖ್ಯೆಯಲ್ಲಿ ವಧು- ವರರು ಕ್ಷೇತ್ರದಲ್ಲಿ ಕಂಡು ಬಂದರು.
ವಿಶೇಷ ಬಸ್: ಭಕ್ತರ ಅನುಕೂಲಕ್ಕಾಗಿ ದೇವಸ್ಥಾನದ ಆಡಳಿತ ಸಮಿತಿ ವಿಶೇಷ ವ್ಯವಸ್ಥೆಗಳನ್ನು ಕಲ್ಪಿಸಿತ್ತು. ಆಟಿ ಅಮಾವಾಸ್ಯ ಪ್ರಯುಕ್ತ ಕೆಎಸ್ಆರ್ಟಿಸಿ ವತಿಯಿಂದ ವಿಶೇಷ ಬಸ್ ಸೌಲಭ್ಯ ಒದಗಿಸಲಾಗಿತ್ತು.
ಕಲ್ಲಡ್ಕ ಸಮೀಪದ ನರಹರಿ ಸದಾಶಿವ ಕ್ಷೇತ್ರದಲ್ಲೂ ಅಪಾರ ಸಂಖ್ಯೆಯ ಭಕ್ತರು ತೆರಳಿ ಅಲ್ಲಿನ ಶಂಖ, ಚಕ್ರ, ಗದಾ, ಪದ್ಮಗಳೆಂಬ ತೀರ್ಥ ಕೆರೆಗಳಿಗೆ ಅಡಿಕೆ ಹಾಗೂ ವೀಳ್ಯದೆಲೆ ಅರ್ಪಿಸಿ ವಿಶೇಷ ತೀರ್ಥ ಸ್ನಾನ ಮಾಡಿದರು.
ಉಬ್ಬಸ ನಿವಾರಣೆಗಾಗಿ ಹುರಿ ಹಗ್ಗವನ್ನು ದೇವರಿಗೆ ಅರ್ಪಿಸುವ ಸೇವೆ ಇಲ್ಲಿ ವಿಶೇಷವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹುರಿಹಗ್ಗವನ್ನು ಕ್ಷೇತ್ರಕ್ಕೆ ಸಮರ್ಪಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಪದ್ಮನಾಭ ಕೊಟ್ಟಾರಿ, ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಪ್ರಶಾಂತ್ ಮಾರ್ಲ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

