ಪಚ್ಚನಾಡಿ ಡಂಪಿಂಗ್ ಯಾರ್ಡ್; ಅನಿರ್ದಿಷ್ಟಾವಧಿ ಪ್ರತಿಭಟನೆ
ಮಂಗಳೂರು: ಪಚ್ಚನಾಡಿ ಡಂಪಿಂಗ್ ಯಾರ್ಡ್ನಲ್ಲಿ ಕೊಳೆಯುತ್ತಿರುವ ತ್ಯಾಜ್ಯ ತಕ್ಷಣ ವಿಲೇವಾರಿಗೆ ಆಗ್ರಹಿಸಿ ಪಚ್ಚನಾಡಿ ಪರಿಸರದ ಜನತೆ ಮಂಗಳವಾರದಿಂದ ಡಂಪಿಂಗ್ ಯಾರ್ಡ್ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಡಂಪಿಂಗ್ ಯಾರ್ಡ್ನಲ್ಲಿ ಕಳೆದ ಒಂದು ತಿಂಗಳಿಂದ ತ್ಯಾಜ್ಯ ವಿಲೇವಾರಿ ಮಾಡದೆ ಇಡೀ ಪರಿಸರದಲ್ಲಿ ದುರ್ವಾಸನೆ ಹರಡಿದೆ. ಈ ಬಗ್ಗೆ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ವಿನಂತಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಜನರ ಆರೋಗ್ಯ ಕಾಪಾಡಲು ಪ್ರತಿಭಟನೆ ಅನಿವಾರ್ಯವಾಗಿದೆ ಎಂದು ಪಾಲಿಕೆ ಸದಸ್ಯೆ ಕವಿತಾ ಸನಿಲ್ ಹೇಳಿದ್ದಾರೆ.
ಹಿಂದಿನಂತೆ ಲ್ಯಾಂಡ್ಫಿಲ್ ಸೈಟ್ ಬಳಿ ಕಸವನ್ನು ಹಾಕಿ ಅದಕ್ಕೆ ಮಣ್ಣು ಹರಡುತ್ತಿಲ್ಲ. ಅದರ ಬದಲು ಡಂಪಿಂಗ್ ಯಾರ್ಡ್ಗೆ ಕಸ ಸುರಿದು ಅಲ್ಲಿ 45 ದಿನ ಅದನ್ನು ಕೊಳೆಯಲು ಬಿಡಲಾಗುತ್ತದೆ. ನಂತರ ಗ್ರೇಂಡಿಂಗ್ ಮಾಡಿ ಸಂಸ್ಕರಣೆ ಮಾಡುತ್ತಾರೆ. ಇಷ್ಟು ದಿನಗಳ ಕಾಲ ತ್ಯಾಜ್ಯ ದುರ್ನಾತ ಬೀರುತ್ತಿದ್ದು, ಪರಿಸರದ ಜನತೆ ಜೀವಿಸಲು ಕಷ್ಟಸಾಧ್ಯವಾಗಿದೆ. ಜು.1ರಿಂದ ಈ ಯೋಜನೆ ಜಾರಿಗೆ ಬಂದಿದ್ದು, ಈ ಸಮಸ್ಯೆ ನಿವಾರಿಸುವಂತೆ ಪಾಲಿಕೆ ಅಧಿಕಾರಿಗಳನ್ನು ಕೋರಿದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ತೆರೆದ ಲಾರಿಗಳಲ್ಲಿ ಕಸ ಸಾಗಿಸುತ್ತಿದ್ದು, ಆಸ್ಪತ್ರೆ ತ್ಯಾಜ್ಯವನ್ನೂ ಸಾಗಿಸುತ್ತಿದ್ದಾರೆ. ಇದರಿಂದ ತ್ಯಾಜ್ಯ ಅಲ್ಲಲ್ಲಿ ರಸ್ತೆಗೆ ಬಿದ್ದು ಸಂಚಾರಕ್ಕೆ ತೊಂದರೆಯಾಗುತ್ತಿದೆ. ಕುಡುಪು, ಮೂಡುಶೆಡ್ಡೆ, ಇರುವೈಲು, ಪಚ್ಚನಾಡಿಗಳಲ್ಲಿ ಪರಿಸರದ ಜನತೆ ದುರ್ನಾತದಲ್ಲಿ ಬದುಕುವಂತಾಗಿದೆ. ಶಾಸಕ, ಸಚಿವರನ್ನು ಪಾಲಿಕೆ ಅಧಿಕಾರಿಗಳು ಕತ್ತಲಲ್ಲಿಟ್ಟಿದ್ದಾರೆ ಎಂದು ಅನಂತ ಪದ್ಮನಾಭ ಗೇಮ್ಸ್ ಟೀಮ್ ಸಂಚಾಲಕ ಸಜಿತ್ ಶೆಟ್ಟಿ ಆರೋಪಿಸಿದರು.
ಡಂಪಿಂಗ್ ಯಾರ್ಡ್ ಎದುರು ಟೆಂಟ್ ಹಾಕಿ ಅನಿರ್ದಿಷ್ಟ ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನಾ ಸ್ಥಳಕ್ಕೆ ಪಾಲಿಕೆ ಆರೋಗ್ಯ ಅಧಿಕಾರಿ ಹಾಗೂ ಪರಿಸರ ಎಂಜಿನಿಯರ್ ಆಗಮಿಸಿ ಅಹವಾಲು ಸ್ವೀಕರಿಸಿದರು. ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಯುಕ್ತರು ಬೆಂಗಳೂರಿನಲ್ಲಿರುವುದರಿಂದ ಬುಧವಾರ ಸಮಸ್ಯೆಯನ್ನು ಅವರ ಗಮನಕ್ಕೆ ತರುವುದಾಗಿ ಭರವಸೆ ನೀಡಿದರೂ ಪ್ರತಿಭಟನಾಕಾರರು ಪ್ರತಿಭಟನೆ ಮುಂದುವರಿಸುವುದಾಗಿ ಪಟ್ಟುಹಿಡಿದರು.
ಶಾಸಕ ಬಾವಾ ಭರವಸೆ: ಡಂಪಿಂಗ್ ಯಾರ್ಡ್ ಹಾಗೂ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಮಂಗಳೂರು ಉತ್ತರ ಶಾಸಕ ಮೊಯ್ದಿನ್ ಬಾವಾ, 2 ಎಕರೆ ಜಾಗದಲ್ಲಿ ಕಸ ವಿಲೇವಾರಿ ನಡೆಯುತ್ತಿದೆ. ಇದು ಸರ್ಕಾರದಲ್ಲಿ ಒಪ್ಪಿಗೆಯಾಗಿ ಟೆಂಡರ್ ಆಗಿದ್ದು, ತಕ್ಷಣದಲ್ಲಿ ಬದಲಾವಣೆ ಸಾಧ್ಯವಿಲ್ಲ. ಸರಿಯಾದ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ ಆಗದಿರುವುದರಿಂದ ಜನರ ವಿರೋಧವಿದ್ದರೆ ಈ ಯೋಜನೆಗೆ ತನ್ನ ಬೆಂಬಲವಿಲ್ಲ ಎಂದರು. ಈ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು, ಪಾಲಿಕೆ ಅಧಿಕಾರಿಗಳ ಜತೆ ಮಾತನಾಡುತ್ತೇನೆ. ಸಮಸ್ಯೆಯನ್ನು ಇತ್ಯರ್ಥಪಡಿಸುವುದಾಗಿ ಭರವಸೆ ನೀಡಿದರು.
ಇಂದು ಕಸ ಲಾರಿಗೆ ತಡೆ: ಜು.7ರಂದು ಬೆಳಗ್ಗಿನಿಂದಲೇ ಕಸ ವಿಲೇವಾರಿಗೆ ಬರುವ ಲಾರಿಗಳನ್ನು ತಡೆದು ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

