ದಕ್ಷಿಣ ಕನ್ನಡ

ಆಲದ ಮರ ಕಡಿತ: ಹಕ್ಕಿಗಳ ಮಾರಣ ಹೋಮ

Published On :

ಕ.ಪ್ರ.ವಾರ್ತೆ  ಮಂಗಳೂರು  ಆ. 8
ಅಕ್ಷರಶಃ ಅದು ಹಕ್ಕಿಗಳ ಹೆಣಗಳೇ ತುಂಬಿರುವ ಕುರುಕ್ಷೇತ್ರವೇ ಆಗಿತ್ತು. ರಸ್ತೆ ತುಂಬಾ ಸತ್ತು ಬಿದ್ದ ಹಕ್ಕಿಗಳು, ಬಸ್‌ಗಳು ಸಾಗುವಾಗ ನುಚ್ಚು ನೂರಾಗುವ ಮೊಟ್ಟೆಗಳು, ಪುಟ್ಟ ಪುಟ್ಟ ಮರಿಗಳು...
ಇದು ನಗರದ ಹೊರ ವಲಯದ ಮುನ್ನೂರು ಗ್ರಾಮದ ಕುತ್ತಾರು ಜಂಕ್ಷನ್ ಬಳಿಯ ಬೃಹತ್ ಆಲದ ಮರ ಕಡಿದುರುಳಿಸಿದ ಮೇಲೆ ಕಂಡು ಬಂದ ಹೃದಯ ವಿದ್ರಾವಕ ದೃಶ್ಯಗಳು.
 ನೀರು ಕಾಗೆ, ಕಾಗೆ ಸೇರಿದಂತೆ ಸಾವಿರಾರು ಹಕ್ಕಿಗಳ ಆಶ್ರಯ ತಾಣವಾಗಿದ್ದ ಶತಮಾನ ಇತಿಹಾಸ ಹೊಂದಿರುವ ಬೃಹತ್ ಆಲದ ಮರಕ್ಕೆ ಜನರು ಗರಗಸ ಇಡುತ್ತಿದ್ದಂತೆಯೇ ಹಕ್ಕಿಗಳು ಕರ್ಕಶವಾಗಿ ಕಿರುಚಿ ಹಾರಿದವು. ಆದರೆ, ಇನ್ನೂ ಕಣ್ಣು ಬಿಡದ ಅಸಹಾಯಕ ಮರಿಗಳು, ಮೊಟ್ಟೆಗಳು ಮಾತ್ರ ದೊಪ ದೊಪನೆ ಉದುರಿ ಬಿದ್ದವು. 'ಕುಂಬಾರಿನಿಗೆ ವರುಷ, ದೊಣ್ಣೆಗೆ ನಿಮಿಷ' ಎಂಬಂತೆ ಸಾವಿರಾರು ಜನರಿಗೆ ನೆರಳು ನೀಡುತ್ತಿದ್ದು, ಅದೆಷ್ಟೋ ಪಕ್ಷಿಗಳಿಗೆ ವಾಸ ಸ್ಥಾನವಾಗಿದ್ದ ಮರ ಮನುಷ್ಯನ ಗರಗಸಕ್ಕೆ ಕೆಲವೇ ಹೊತ್ತಿನಲ್ಲಿ ನೆಲಕ್ಕುರುಳಿತು.
ನೆಲದ ಮೇಲೆ ಬಿದ್ದ ಮರಿ ಹಾಗೂ ಮೊಟ್ಟೆಗಳ ಮೇಲೆ ವಾಹನಗಳು ಓಡಾಡಿದ್ದರಿಂದ ಅಲ್ಲಿನ ಪರಿಸ್ಥಿತಿ ಮತ್ತಷ್ಟು ಕರುಳು ಹಿಂಡುವಂತೆ ಇತ್ತು.
ಅಭಿವೃದ್ಧಿ ನೆಪದಲ್ಲಿ ಮರ ಕಡಿತ: ಮೂನ್ನೂರು ಗ್ರಾಪಂ ವತಿಯು ಕುತ್ತಾರು ಜಂಕ್ಷನ್ ಅಭಿವೃದ್ಧಿ ವಿಸ್ತಾರಗೊಳಿಸಲು ಯೇನಪೋಯ ಮತ್ತು ಕೆ.ಎಸ್. ಹೆಗ್ಡೆ ಆಸ್ಪತ್ರೆ ಜಂಟಿ ಯೋಜನೆಯೊಂದನ್ನು ಕೈಗೆತ್ತಿಕೊಂಡಿದೆ. ಅದರಂತೆ ಕುತ್ತಾರು ಜಂಕ್ಷನ್‌ನಲ್ಲಿದ್ದ ಶತಮಾನಗಳ ಬೃಹತ್ ಆಲದಮರ ಉರುಳಿಸುವ ಕೆಲಸ ಬುಧವಾರ ಆರಂಭವಾಗಿದ್ದು, ಈ ಮಾರಣ ಹೋಮ ಗುರುವಾರವೂ ಮುಂದುವರಿದಿತ್ತು. ಮರ ಕಡಿಯಲು ಇದು ಸಕಾಲ ಅಲ್ಲವೆಂದು ಸ್ಥಳೀಯ ಪಕ್ಷಿ ಪ್ರಿಯರು ತಿಳಿಸಿದ್ದರೂ ಕೆಡವಲಾಯಿತು. 'ಮರ ಕಡಿದವರ ಸಂತಾನಕ್ಕೆ ಹಕ್ಕಿಗಳ ಸಂತಾನದ ಶಾಪ ಖಂಡಿತಾ ತಟ್ಟಲಿದೆ' ಎಂದು ದಾರುಣ ದೃಶ್ಯವನ್ನು ನೋಡುತ್ತಿದ್ದವರು ಗೊಣಗುತ್ತಿದ್ದರು.
 'ಬಹುಶಃ ಮರ ಕಡಿಯುವವರಿಗೆ ಮರದಲ್ಲಿ ಅಷ್ಟು ಹಕ್ಕಿಗಳ ಸಂತತಿ ಇರುವುದು ಗಮನಕ್ಕೆ ಬಂದಿರಲಿಲ್ಲವೋ ಏನೋ' ಎಂದು ಈ ಭಾಗದ ಶಾಸಕ ಹಾಗೂ ಆರೋಗ್ಯ ಸಚಿವ ಯು.ಟಿ.ಖಾದರ್ ಗ್ರಾಪಂ ಕಾರ್ಯವನ್ನು ಸಮರ್ಥಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.