ಸುಳ್ಯ ಶಿಲ್ಪಿಗೆ ಅಂತಿಮ ವಿದಾಯ..
ಸುಳ್ಯ: ಬುಧವಾರ ಸಂಜೆ ನಿಧನರಾದ ಆಧುನಿಕ ಸುಳ್ಯದ ನಿರ್ಮಾತೃ, ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ ಸ್ಥಾಪಕಾಧ್ಯಕ್ಷ ಡಾ. ಕುರುಂಜಿ ವೆಂಕಟ್ರಮಣ ಗೌಡರ ಪಾರ್ಥೀವ ಶರೀರದ ಅಂತ್ಯಕ್ರಿಯೆ ಗುರುವಾರ ಸಂಜೆ ಕುರುಂಜಿಯಲ್ಲಿ ನೆರವೇರಿತು.
ವರ್ಷದ ಹಿಂದೆ ನಿಧನರಾದ ಕುರುಂಜಿಯವರ ಧರ್ಮಪತ್ನಿ ಜಾನಕಿಯವರ ಸಮಾಧಿಯ ಸಮೀಪದಲ್ಲೇ ವೆಂಕಟ್ರಮಣ ಗೌಡರ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.
ಪುತ್ರರಾದ ಡಾ. ಕೆ.ವಿ. ಚಿದಾನಂದ, ಡಾ. ಕೆ.ವಿ. ರೇಣುಕಾಪ್ರಸಾದ್ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಸಹೋದರರು, ಮೊಮ್ಮಕ್ಕಳು ಹಾಗೂ ಅಪಾರ ಸಂಖ್ಯೆಯ ಬಂಧುಮಿತ್ರರು, ಅಭಿಮಾನಿಗಳು, ಕೆವಿಜಿ ವಿದ್ಯಾಸಂಸ್ಥೆ ಉದ್ಯೋಗಿಗಳು ಈ ದುಃಖತಪ್ತ ಕ್ಷಣಕ್ಕೆ ಸಾಕ್ಷಿಯಾಗಿ ಅಮರ ಸುಳ್ಯದ ಶಿಲ್ಪಿಗೆ ವಿದಾಯ ಕೋರಿದರು.
ಅಂತಿಮ ದರ್ಶನ: ಶ್ರೀರಾಂಪೇಟೆಯ ಡಾ. ಕೆ.ವಿ. ಚಿದಾನಂದರ ಮನೆಯಲ್ಲಿದ್ದ ಪಾರ್ಥೀವ ಶರೀರವನ್ನು ಬೆಳಗ್ಗೆ ನೆಹರೂ ಸ್ಮಾರಕ ಕಾಲೇಜಿನ ರಂಗಮಂದಿರಕ್ಕೆ ಕೊಂಡೊಯ್ದು ಸಾರ್ವಜನಿಕ ದರ್ಶನಕ್ಕೆ ಇರಿಸಲಾಯಿತು. ಮಧ್ಯಾಹ್ನ ಪಾರ್ಥಿವ ಶರೀರದ ಅಂತಿಮ ಯಾತ್ರೆ ಆರಂಭಗೊಂಡಿತು. ಅಲಂಕೃತ ವಾಹನದಲ್ಲಿ ಪಾರ್ಥಿವ ಶರೀರವನ್ನು ಇರಿಸಿ ಮೆರವಣಿಗೆ ನಡೆಯಿತು.
ಕುಶಾಲು ತೋಪು: ನಗರದ ಪ್ರಮುಖ ರಸ್ತೆಯಲ್ಲಿ ಸಾಗಿದ ಅಂತಿಮ ಯಾತ್ರೆ ಸಂಜೆ ವೇಳೆಗೆ ಕುರುಂಜಿಗೆ ತಲುಪಿತು. ಅಂತ್ಯ ಸಂಸ್ಕಾರಕ್ಕೆ ಮುನ್ನ ಪೊಲೀಸ್ ಇಲಾಖೆ ಗೌರವ ರಕ್ಷೆ ನೀಡಿತು. ಮೂರು ಸುತ್ತು ಕುಶಾಲು ತೋಪುಗಳನ್ನು ಸಿಡಿಸಿ ಸರ್ಕಾರಿ ಗೌರವ ನೀಡುವುದರೊಂದಿಗೆ ಚಿತೆಗೆ ಅಗ್ನಿಸ್ಪರ್ಷ ಮಾಡಲಾಯಿತು.
ಗಣ್ಯರ ಗಡಣ..: ಬುಧವಾರ ಸಂಜೆ ನಿಧನರಾದ ಡಾ. ಕುರುಂಜಿ ವೆಂಕಟ್ರಮಣ ಗೌಡರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ನೂರಾರು ಮಂದಿ ಗಣ್ಯರು ಆಗಮಿಸಿದ್ದರು.
ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಸಚಿವರಾದ ಬಿ. ರಮಾನಾಥ ರೈ, ಯು.ಟಿ. ಖಾದರ್, ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನಸಭೆಯ ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ, ಆದಿಚುಂಚನಗಿರಿ ಸಂಸ್ಥಾನದ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ, ಶಿವಮೊಗ್ಗ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಪ್ರಮುಖ್ ಡಾ. ಪ್ರಭಾಕರ್ ಭಟ್ ಕಲ್ಲಡ್ಕ, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪ ಗೌಡ, ಜಿಲ್ಲಾ ಅಡಿಷನಲ್ ಎಸ್ಪಿ ಟಿ.ಆರ್. ಶಿವಕುಮಾರ್, ಪುತ್ತೂರು ಸಹಾಯಕ ಕಮಿಷನರ್ ಪ್ರಸನ್ನ, ಅಳಿಕೆ ಶಿಕ್ಷಣ ಟ್ರಸ್ಟ್ನ ಯು. ಗಂಗಾಧರ ಭಟ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂ.ಬಿ. ಸದಾಶಿವ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ವೆಂಕಪ್ಪ ಗೌಡ, ತಾ.ಪಂ. ಅಧ್ಯಕ್ಷೆ ಗುಣವತಿ ಕೊಲ್ಲಂತಡ್ಕ, ಜಿ.ಪಂ. ಸದಸ್ಯ ಕೆ.ಎಸ್. ದೇವರಾಜ್, ಆಶಾ ತಿಮ್ಮಪ್ಪ, ನವೀನ್ ರೈ ಮೇನಾಲ, ಕ್ಯಾಂಪ್ಕೋ ನಿರ್ದೇಶಕ ಸಂಜೀವ ಮಠಂದೂರು, ಡಿ.ಬಿ. ಬಾಲಕೃಷ್ಣ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪಿ.ಬಿ. ದಿವಾಕರ್ ರೈ ಬೆಳ್ತಂಗಡಿ, ರೆ.ಫಾ. ಲಾರೆನ್ಸ್ ಮಕ್ಕುಝಿ, ನಿತ್ಯಾನಂದ ಮುಂಡೋಡಿ, ಎ.ಪಿ.ಎಂ.ಸಿ. ಅಧ್ಯಕ್ಷ ಜಯರಾಮ ಹಾಡಿಕಲ್ಲು ಮೊದಲಾದ ಗಣ್ಯರು ಆಗಮಿಸಿದ್ದರು. ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಪರವಾಗಿ ಕಾಂಗ್ರೆಸ್ ನಾಯಕ ಭರತ್ ಮುಂಡೋಡಿ ಪುಷ್ಪ ನಮನ ಸಲ್ಲಿಸಿದರು.
ಹೆಗಲು ಕೊಟ್ಟ ಪೂಜಾರಿ
ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಪಾರ್ಥಿವ ಶರೀರದ ಬಳಿ ಸುಮಾರು ಅರ್ಧ ಗಂಟೆ ಕಾಲ ನಿಂತೇ ಇದ್ದರು. ಬಳಿಕ ಪಾರ್ಥಿವ ಶರೀರವನ್ನು ಅಲಂಕೃತ ವಾಹನಕ್ಕೆ ಸ್ಥಳಾಂತರಿಸಿದಾಗ ಹೆಗಲು ಕೊಟ್ಟರು. ಗುರುವಾರ ಮುಂಜಾನೆ ಆಗಮಿಸಿದ್ದ ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಮಧ್ಯಾಹ್ನದವರೆಗೂ ಶೋಕತಪ್ತ ಕುಟುಂಬದೊಂದಿಗೆ ಭಾಗಿಯಾದರು.
ಸುಳ್ಯ ಸಂಪೂರ್ಣ ಬಂದ್
ಕುರುಂಜಿಯವರ ಗೌರವಾರ್ಥ ಸುಳ್ಯ ನಗರದಲ್ಲಿ ಸಂಪೂರ್ಣ ಬಂದ್ ಆಚರಿಸಲಾಯಿತು. ಎಲ್ಲ ಅಂಗಡಿಗಳನ್ನು ಮುಚ್ಚಿ ಶೋಕಾಚರಣೆ ನಡೆಸಲಾಯಿತು. ಮೃತರ ಗೌರವಾರ್ಥ ತಾಲೂಕಿನ ಶಿಕ್ಷಣ ಸಂಸ್ಥೆಗಳಿಗೆ ರಜೆ ಸಾರಲಾಯಿತು. ಬಹುತೇಕ ಶಿಕ್ಷಣ ಸಂಸ್ಥೆಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ರಜೆ ಘೋಷಿಸಲಾಯಿತು.
ಆದರ್ಶ ವ್ಯಕ್ತಿತ್ವ
ಡಾ.ಕುರುಂಜಿಯವರದು ಆದರ್ಶಯುತ ವ್ಯಕ್ತಿತ್ವ. ಸುಳ್ಯವೆಂಬ ಪುಟ್ಟ ಊರನ್ನು ಹೊರಗಿನ ಪ್ರಪಂಚಕ್ಕೆ ತೋರಿಸಿಕೊಟ್ಟ ಮಹಾ ಮೇಧಾವಿ ಅವರು. ನಾನು ರಾಜಕಾರಣದಲ್ಲಿ ಉನ್ನತ ಸ್ಥಾನ ಅಲಂಕರಿಸಿರುವುದರ ಹಿಂದೆ ಕುರುಂಜಿಯವರ ಮಾರ್ಗದರ್ಶನ ಮತ್ತು ಆಶೀರ್ವಾದ ಇತ್ತು.
- ಕೆ.ಜಿ. ಬೋಪಯ್ಯ
ಜಿಲ್ಲೆ ಎತ್ತರಕ್ಕೇರಿಸಿದವರು
ದೀನದಲಿತರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುತ್ತಾ ನೊಂದು ಬೆಂದವರ ಮನಸ್ಸಿಗೆ ಧೈರ್ಯ ತುಂಬುತ್ತಾ ಆರೋಗ್ಯ ಮತ್ತು ಅಕ್ಷರ ಕ್ರಾಂತಿಗೆ ಕಾರಣರಾದ ಗೌಡರ ಅಗಲಿಕೆ ಇಡೀ ಸಮಾಜಕ್ಕೆ ಅಪಾರ ನಷ್ಟ. ಜಿಲ್ಲೆಯನ್ನು ಎತ್ತರದ ಸ್ಥಾನಕ್ಕೆ ಕೊಂಡೊಯ್ದವರು. ಸಾಮಾನ್ಯ ಕುಟುಂಬದಿಂದ ಬಂದು ಸಾಧನೆಯ ಹೆಮ್ಮರ ಸೃಷ್ಟಿಸಿದವರು.
- ಶ್ರೀ ಧರ್ಮಪಾಲನಾಥ ಸ್ವಾಮೀಜಿ,
ಆದಿಚುಂಚಗಿರಿ ಮಂಗಳೂರು ಶಾಖಾ ಮಠ
ಶ್ರೇಷ್ಠ ದಾರ್ಶನಿಕ
ಕುರುಂಜಿಯವರೊಬ್ಬ ಶ್ರೇಷ್ಠ ದಾರ್ಶನಿಕ. ಅವರಿಗೆ ಅವರೇ ಸಾಟಿ. ಅವರನ್ನು ಕಳೆದುಕೊಂಡ ನಾವು ಅನಾಥರಾಗಿದ್ದೇವೆ. ಸರಳ ವ್ಯಕ್ತಿಯಾಗಿ ಸೌಹಾರ್ದಮಯ ಬದುಕು ಕಟ್ಟಿದ ವ್ಯಕ್ತಿತ್ವ ಅವರದು. ಕುರುಂಜಿ ಏನು ಎಂಬುದನ್ನು ಅವರು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.
- ಬಿ. ಜನಾರ್ದನ ಪೂಜಾರಿ
ಮಾಜಿ ಕೇಂದ್ರ ಸಚಿವ
ಅಧ್ಯಾಯ ಅಂತ್ಯ
ಸಾಮಾನ್ಯ ಮನುಷ್ಯ ಕೂಡಾ ಗ್ರಾಮೀಣ ಪ್ರದೇಶದಲ್ಲಿ ಸಾಧನೆ ಮಾಡಬಲ್ಲ, ಆ ಮೂಲಕ ಗ್ರಾಮೀಣ ಪ್ರದೇಶವನ್ನು ಜಗತ್ತಿನ ಭೂಪಟದಲ್ಲಿ ಗುರುತಿಸುವಂತೆ ಮಾಡಬಲ್ಲ ಎನ್ನುವುದಕ್ಕೆ ಕುರುಂಜಿ ದೃಷ್ಟಾಂತ. ಅವರ ಅಗಲಿಕೆಯೊಂದಿಗೆ ಸುಳ್ಯದ ಪ್ರಥಮ ಅಧ್ಯಾಯ ಕೊನೆಗೊಂಡಿದೆ.
- ಡಿ.ವಿ. ಸದಾನಂದ ಗೌಡ
ಮಾಜಿ ಮುಖ್ಯಮಂತ್ರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

