ನಬಾರ್ಡ್ ಸುತ್ತೋಲೆ ಜಾರಿ ವಿರುದ್ಧ ರಾಜ್ಯವ್ಯಾಪಿ ಜನಜಾಗೃತಿ: ಸತೀಶ್ಚಂದ್ರ
ಪುತ್ತೂರು: ನಬಾರ್ಡ್ ಹೊಸ ಸುತ್ತೋಲೆ ಜಾರಿಗೊಳಿಸುವ ಮೂಲಕ ಪ್ರಾಥಮಿಕ ಸಹಕಾರಿ ಸಂಘಗಳ ನರನಾಡಿ ತುಂಡರಿಸುವ ಕೆಲಸಕ್ಕೆ ಮುಂದಾಗಿದ್ದು, ಈ ಸುತ್ತೋಲೆ ಜಾರಿಯಾದರೆ ಪ್ರಾಥಮಿಕ ಸಹಕಾರಿ ಸಂಘಗಳು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಏಜೆಂಟಾಗಿ ಕೆಲಸ ಮಾಡಬೇಕಾದ ದುಃಸ್ಥಿತಿ ನಿರ್ಮಾಣಗೊಳ್ಳಲಿದೆ. ಇದರ ವಿರುದ್ಧ ಸಹಕಾರ ಭಾರತಿ ರಾಜ್ಯ ವ್ಯಾಪಿ ಜನಾಂದೋಲನ ನಡೆಸಿ ತಡೆಯುವ ಪ್ರಯತ್ನ ಮಾಡಲಿದೆ ಎಂದು ಸಹಕಾರ ಭಾರತಿ ರಾಜ್ಯ ಸಂಚಾಲಕ ಎಸ್.ಆರ್. ಸತೀಶ್ಚಂದ್ರ ತಿಳಿಸಿದ್ದಾರೆ.
ಪುತ್ತೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಜುಲೈ 2013ರಂದು ನಬಾರ್ಡ್ ಹೊರಡಿಸಿದ ಸುತ್ತೋಲೆಯಂತೆ ಪ್ರಾಥಮಿಕ ಸಹಕಾರ ಸಂಘಗಳು ಸಾಲ ನೀಡುವಂತಿಲ್ಲ ಹಾಗೂ ಠೇವಣಿ ಸಂಗ್ರಹಿಸುವಂತಿಲ್ಲ. ಕೇವಲ ಡಿಸಿಸಿ ಬ್ಯಾಂಕ್‌ಗಳ ಅಥವಾ ಕೋ- ಆಪರೇಟಿವ್ ಬ್ಯಾಂಕ್‌ಗಳ ವ್ಯವಹಾರ ಸೇವಾ ಕೇಂದ್ರಗಳಾಗಿ (ಮಧ್ಯವರ್ತಿಗಳಾಗಿ) ಕಾರ್ಯ ನಿರ್ವಹಿಸಬೇಕಾಗಿದೆ. ಈ ಸುತ್ತೋಲೆ ಜಾರಿಯಾದರೆ ಪ್ರಾಥಮಿಕ ಸಹಕಾರಿ ಸಂಘಗಳು ಸಂಗ್ರಹಿಸಿದ ಠೇವಣಿ ಡಿಸಿಸಿ, ಕೋ- ಅಪರೇಟಿವ್ ಬ್ಯಾಂಕ್‌ಗಳ ಪಾಲಾಗಲಿದ್ದು, ಇದರಿಂದಾಗಿ ಪ್ರಾಥಮಿಕ ಸಹಕಾರ ಸಂಘಗಳ ಅಸ್ತಿತ್ವವೇ ಕೊನೆಯಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಈತನಕ ನಬಾರ್ಡ್, ರಾಜ್ಯ ಅಪೆಕ್ಸ್ ಬ್ಯಾಂಕ್‌ಗಳ ಮೂಲಕ ಡಿಸಿಸಿ ಬ್ಯಾಂಕ್‌ಗಳಿಗೆ ಸಾಲ ನೀಡುತ್ತಿತ್ತು. ಡಿಸಿಸಿ ಬ್ಯಾಂಕ್ ಇದನ್ನು ಪ್ರಾಥಮಿಕ ಸಹಕಾರಿ ಸಂಘಗಳಿಗೆ ನೀಡುತ್ತಿತ್ತು. ಪ್ರಾಥಮಿಕ ಸಂಘಗಳು ರೈತರಿಗೆ ಸಾಲ ನೀಡುತ್ತಿದ್ದವು. ಆದರೆ, ನಬಾರ್ಡ್ ಸೂಚನೆಯಂತೆ ರೈತರಿಗೆ ಡಿಸಿಸಿ ಬ್ಯಾಂಕ್‌ಗಳೇ ನೇರವಾಗಿ ಸಾಲ ನೀಡುವ ವ್ಯವಸ್ಥೆಯನ್ನು ಜಾರಿಗೆ ತರಲು ಅಪೆಕ್ಸ್ ಬ್ಯಾಂಕ್ ಚಿಂತನೆ ನಡೆಸಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡಲು ಹೊರಟಿದೆ. ಆದರೆ, ಅಲ್ಲಿ ಅದಕ್ಕೆ ಸಹಕಾರಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ ಎಂದು ಅವರು ತಿಳಿಸಿದರು.
ಈ ಬಗ್ಗೆ ಸಹಕಾರ ಭಾರತಿ ರಾಜ್ಯಾದ್ಯಂತ ಚರ್ಚೆ ನಡೆಸುತ್ತಿದ್ದು, ಎಲ್ಲ ಪ್ರಾಥಮಿಕ ಸಹಕಾರಿ ಸಂಘಗಳನ್ನು ಸೇರಿಸಿ ಈ ಸುತ್ತೋಲೆ ಕೈಬಿಡುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಮತ್ತು ಆರ್‌ಬಿಐಗೆ ಮನವಿ ಸಲ್ಲಿಸಲಾಗುವುದು. ಅಲ್ಲದೆ ಜನಪ್ರತಿನಿಧಿಗಳಿಗೂ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು ಎಂದು ಸತೀಶ್ಚಂದ್ರ ತಿಳಿಸಿದರು.
ಸಹಕಾರಿ ಭಾರತಿ ರಾಜ್ಯ ಪ್ರಚಾರಕ ರಾಧಾಕೃಷ್ಣ ಕೋಟೆ, ಜಿಲ್ಲಾಧ್ಯಕ್ಷ ಉದಯ ರೈ ಮಾದೋಡಿ, ಪಾಣಾಜೆ ಸಿ.ಎ. ಬ್ಯಾಂಕ್ ಅಧ್ಯಕ್ಷ ಪದ್ಮನಾಭ ಬೋರ್ಕರ್, ಆಲಂಕಾರು ಸಿ.ಎ. ಬ್ಯಾಂಕ್ ಅಧ್ಯಕ್ಷ ರಮೇಶ್ ಭಟ್ ಉಪ್ಪಂಗಳ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

