ಹೈನುಗಾರಿಕೆಯಿಂದ ವಿಮುಖನಾಗುತ್ತಿರುವ ಕೃಷಿಕ
ವಿಟ್ಲ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳು ಹೈನುಗಾರಿಕೆಗೆ ರಾಜ್ಯದಲ್ಲೇ ಹೆಸರುವಾಸಿ. ಇಲ್ಲಿನ ಬಹುತೇಕ ಕೃಷಿಕರು ತೋಟ, ಗದ್ದೆಗಳ ಜೊತೆಗೆ ಪಶುಗಳನ್ನು ಸಾಕುವುದು ರೂಢಿ. ಅಡಕೆ ತೋಟಕ್ಕೆ ಬೇಕಾದ ಸಾವಯವ ಗೊಬ್ಬರ ದೊರೆಯುವುದೂ ಇದಕ್ಕೆ ಪ್ರಮುಖ ಕಾರಣ. ಇದು ಒಂದು ಕಾಲದ ಕಥೆಯಾದರೆ ಇತ್ತೀಚಿನ ದಿನಗಳಲ್ಲಿ ಕೃಷಿಕರು ಪಶುಗಳನ್ನು ಸಾಕಲಾರದೆ ಮಾರಾಟ ಮಾಡುತ್ತಿದ್ದಾರೆ. ಪೇಟೆಯಿಂದ ಮನೆ ಖರ್ಚಿಗೆ ಪ್ಯಾಕೆಟ್ ಹಾಲು ಖರೀದಿಸಿ ಸುಮ್ಮನಿದ್ದಾರೆ.
ಯಾಕೆ ಹೀಗಾಯಿತು?: ಮುಖ್ಯವಾಗಿ ತೋಟದಲ್ಲಿ ಯಥೇಚ್ಛವಾಗಿ ಹುಲ್ಲು ಬೆಳೆದರೂ ಅದನ್ನು ಕಟಾವು ಮಾಡಿ ಮನೆಗೆ ತಂದು ದನಗಳಿಗೆ ಹಾಕಲು ಕಾರ್ಮಿಕರು ಸಿಗುತ್ತಿಲ್ಲ. ಒಂದು ವೇಳೆ ಸಿಕ್ಕಿದರೂ ದಿನಕ್ಕೆ ರು. 250ರಿಂದ ರು. 300 ವೇತನ ನೀಡಬೆಕಾಗುತ್ತದೆ. ಇಷ್ಟೆಲ್ಲ ಹಣ ಕೊಟ್ಟು ಕಟಾವು ಮಾಡಿ ತಂದ ಹುಲ್ಲು ಒಂದು ದನಕ್ಕೂ ಸಾಕಾಗುವುದಿಲ್ಲ. ಇದರೊಂದಿಗೆ ಹಟ್ಟಿ ಗೊಬ್ಬರ ಸಾಗಿಸಲೂ ಕೂಲಿಯವರು ಸಿಗುತ್ತಿಲ್ಲ. ಹಿಂದೆ ವಲಸೆ ಕೂಲಿ ಕಾರ್ಮಿಕರು ದಿನಕ್ಕೆ ರು. 100 ಕೊಟ್ಟರೆ ಕೆಲಸಕ್ಕೆ ಬರುತ್ತಿದ್ದರು. ಆದರೆ ಇದೀಗ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ರು. 500 ರಿಂದ 600ಗೆ ಸಿಗುತ್ತಿರುವುದರಿಂದ ಅವರು ಪಟ್ಟಣಗಳತ್ತ ಮುಖಮಾಡಿದ್ದಾರೆ.
ಎಲ್ಲದರ ಬೆಲೆ ಗಗನಕ್ಕೆ: ಜೊತೆಗೆ ಹಾಸನ, ಸಕಲೇಶಪುರ ಕಡೆಯಿಂದ ಬರುತ್ತಿದ್ದ ಬೈಹುಲ್ಲಿನ ದರ ದುಪ್ಪಟ್ಟಾಗಿದೆ. ಬಾಳೆದಿಂಡು, ಅಡಕೆ ಹಾಳೆಯನ್ನು ತುಂಡು ಮಾಡಿ ಪಶುಗಳಿಗೆ ಹಾಕಬಹುದಾದರೂ ಕೆಲವು ಜಾತಿಯ ಪಶುಗಳು ಇದನ್ನು ತಿನ್ನುವುದಿಲ್ಲ.
ಜೊತೆಗೆ ಐದಾರು ವರ್ಷಗಳ ಹಿಂದೆ ಪಶು ಆಹಾರಕ್ಕಿದ್ದ ಬೆಲೆ ಈಗ ಮೂರು ನಾಲ್ಕು ಪಟ್ಟು ಹೆಚ್ಚಾಗಿದೆ. ಅಕ್ಕಿ ತೌಡಿಗೆ ಕೆ.ಜಿ.ಗೆ ರು. 4 ಇದ್ದದ್ದು ಈಗ ರು. 21ಕ್ಕೆ ಏರಿದೆ. ಅದೇ ರೀತಿ ನೆಲಗಡಲೆ ಹಿಂಡಿ ರು. 10ರಿಂದ ರು. 32ಕ್ಕೆ, ಎಳ್ಳಿಂಡಿ ರು. 10ರಿಂದ ರು. 26ಕ್ಕೆ, ಮಡ್ಡಿ ಅಕ್ಕಿ 6ರಿಂದ ರು. 17 ಕ್ಕೆ ಏರಿರುವುದು ಕೃಷಿಕರಲ್ಲಿ ನಡುಕ ಹುಟ್ಟಿಸಿದೆ.
ಸರಿಸುಮಾರು 2006ರಲ್ಲಿ ರಾಗಿ ಬೂಸಾ ಚೀಲಕ್ಕೆ ರು. 250 ಇತ್ತು. ಆದರೆ ಇಂದು ಅದರ ಬೆಲೆ ರು. 950 ಆಗಿದೆ. ಅದೇ ರೀತಿ ಗೋಧಿ ಬೂಸಾ ರು. 250 ಇದ್ದದ್ದು ರು. 650ಕ್ಕೆ ಏರಿದೆ. ಜೋಳದ ಬೂಸಾಕ್ಕೆ ರು. 250 ಇದ್ದದ್ದು ರು. 900ಕ್ಕೆ ಏರಿದೆ. ಇಷ್ಟೆಲ್ಲ ಬೆಲೆ ಕೊಟ್ಟು ಹೈನುಗಾರಿಕೆ ವ್ಯಾಪಾರ ಮಾಡುತ್ತೇನೆ ಎಂದರೆ ಸಾಧ್ಯವೆ?
2006ರಲ್ಲಿ ಲೀಟರ್ಗೆ ರು. 10 ನೀಡುತ್ತಿದ್ದ ಹಾಲು ಉತ್ಪಾದಕರ ಸಂಘಗಳು ಈಗ ರು. 24.50 ನೀಡುತ್ತಿದೆ. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಪಶು ಆಹಾರಗಳ ಬೆಲೆ, ಕೂಲಿ, ಹುಲ್ಲು ಎಲ್ಲದರ ಬೆಲೆ ನಾಲ್ಕು ಪಟ್ಟು ಹೆಚ್ಚಾಗಿದ್ದರೂ ಕೃಷಿಕನಿಗೆ ಸಿಗುವ ಬೆಲೆ ಮಾತ್ರ ಇಷ್ಟೇ ಅಂತ ಇದೆ. ಅಂದರೆ ಗ್ರಾಹಕರಿಂದ ಪ್ರತಿ ಲೀಟರ್ಗೆ ರು. 34 ಪಡೆಯುತ್ತಿದ್ದರೂ ಹಾಲು ಉತ್ಪಾದಕನಿಗೆ ಇದು ತಲುಪುತ್ತಿಲ್ಲ ಎನ್ನುವುದೇ ಬೇಸರದ ಸಂಗತಿ.
ಇನ್ನಷ್ಟು ಸಮಸ್ಯೆಗಳು: ಇದರೊಂದಿಗೆ ದನಗಳಿಗೆ ಬರುವ ಕೆಚ್ಚಲು ಬಾವು, ಜ್ವರ ಇತ್ಯಾದಿ ರೋಗಗಳು ಕೃಷಿಕರಿಗೆ ತಲೆನೋವಾಗಿ ಪರಿಣಮಿಸಿದೆ. ಕಾರಣ ಹಳ್ಳಿಗಳಲ್ಲಿ ಪಶುವೈದ್ಯಕೀಯ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ. ಕೃತಕ ಗರ್ಭಧಾರಣೆ ಅದಕ್ಕಾಗಿ ಓಡಾಟ, ಹಣದ ಖರ್ಚು, ಅದರ ಎಡೆಯಲ್ಲಿ ಸರಿಯಾದ ಚಿಕಿತ್ಸೆ ಸಿಗದೆ ಪಶುಗಳು ಸಾಯುವುದು- ಈ ಎಲ್ಲಾ ಸಮಸ್ಯೆಗಳಿಂದಾಗಿ ಕೃಷಿಕ ಇಂದು ಪಶುಸಾಕಣೆಯಿಂದ ವಿಮುಖನಾಗುತ್ತಿದ್ದಾ ಎಂದೇ ಹೇಳಬೇಕಾಗಿದೆ.
-ವಿಶೇಷ ವರದಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

