ದಕ್ಷಿಣ ಕನ್ನಡ

ಮೀನಿನ ಕಟ್ಲೇಟ್ ಮಾರುಕಟ್ಟೆಗೆ

Published On :

ಮಂಗಳೂರು: ಇನ್ನು ಐದು ವರ್ಷ ಕಾಯಿದರೆ ಮಾಂಸಹಾರಿಗಳಿಗೆ ಫಿಶ್ ಪಾಟ್ಟಿ (ಕಟ್ಲೇಟ್ ಮಾದರಿ) ಹಾಗೂ ಫಿಸ್ ಹಾಮ್(ಸಾಸ್) ಬೇಕಾದಷ್ಟು ಸವಿಯಬಹುದು!
ಸಸ್ಯಾಹಾರದಲ್ಲಿ ಇರುವಂತೆ ಮೀನಿನಿಂದಲೂ ಮೌಲ್ಯವರ್ಧಿತ ಉತ್ಪನ್ನಕ್ಕೆ ಸಂಶೋಧನೆ ನಡೆಯುತ್ತಿದ್ದು, ಮೊದಲ ಬಾರಿಗೆ ಕಟ್ಲೇಟ್ ಮಾದರಿಯಲ್ಲಿ ಮೀನಿನ ಪಾಟ್ಟಿ ಮತ್ತು ಸಾಸ್ ಮಾದರಿಯ ಮೀನಿನ ಹಾಮ್‌ನ್ನು ಅಭಿವೃದ್ಧಿಪಡಿಸಲಾಗಿದೆ. ಇದು 2017ರಲ್ಲಿ ಪೂರ್ಣ ಪ್ರಮಾಣದಲ್ಲಿ ಮಾರುಕಟ್ಟೆಯಲ್ಲಿ ಕಾಣಿಸಲಿದೆ.
ಮಂಗಳೂರಿನ ಹೈಗೆ ಬಜಾರ್‌ನಲ್ಲಿರುವ ಮೀನುಗಾರಿಕಾ ತಾಂತ್ರಿಕ ವಿದ್ಯಾಲಯ ಈ ಸಂಶೋಧನೆಯಲ್ಲಿ ಯಶಸ್ಸು ಸಾಧಿಸಿದ್ದು, ಈಗಾಗಲೇ ಕೆಎಫ್‌ಡಿಸಿ (ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ)ಮೂಲಕ ಈ ಉತ್ಪನ್ನಗಳನ್ನು ಅದರದೇ ಬ್ರಾಂಡ್‌ನಲ್ಲಿ ಪ್ರಾಯೋಗಿಕವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.
ಅಖಿಲ ಭಾರತ ಸಂಯೋಜಿತ ಸಂಶೋಧನೆಯಡಿ ಮೀನಿನ ಮೌಲ್ಯವರ್ಧಿತ ಉತ್ಪನ್ನಗಳ ಸಂಶೋಧನೆ ಹಾಗೂ ಅಭಿವೃದ್ಧಿಗೆ ಕೇಂದ್ರ ಸರ್ಕಾರ 1.36 ಕೋಟಿ ನೆರವು ನೀಡಿದೆ. ಮೂವರು ವಿಜ್ಞಾನಿಗಳು, ತಾಂತ್ರಿಕ ಸಿಬ್ಬಂದಿ ಸೇರಿ ಸಿಹಿನೀರು ಮತ್ತು ಉಪ್ಪು ನೀರು ಮೀನಿನ ಮೌಲ್ಯವರ್ಧಿತ ಉತ್ಪನ್ನಗಳನ್ನು ಸಂಶೋಧಿಸುತ್ತಿದ್ದಾರೆ.

450 ಗ್ರಾಂ ಪ್ಯಾಕೆಟ್: ಮೀನಿನ ಮೌಲ್ಯವರ್ಧಿತ ಉತ್ಪನ್ನವನ್ನು ತಾಂತ್ರಿಕ ವಿದ್ಯಾಲಯದಲ್ಲಿ ಉತ್ಪಾದಿಸಲಾಗುತ್ತದೆ. ವಿದ್ಯಾಲಯದ ತಾಂತ್ರಿಕ ವಿಭಾಗದಲ್ಲಿ ಇದಕ್ಕೆ ಬೇಕಾದ ಸಲಕರಣೆಗಳಿದ್ದು, ಸಹಪ್ರಾಧ್ಯಾಪಕ ಡಾ.ಸಿ.ವಿ.ರಾಜು ನೇತೃತ್ವದಲ್ಲಿ ಸಂಶೋಧನೆ ನಡೆಯುತ್ತಿದೆ. ಪ್ರಸ್ತುತ 450 ಗ್ರಾಂ ಪ್ಯಾಕೆಟ್‌ನಲ್ಲಿ ಫಿಶ್ ಪಾಟ್ಟಿ ಮತ್ತು ಫಿಶ್ ಹಾಮ್ ಹೊರಬರುತ್ತಿದ್ದು, ಸಣ್ಣ ಪ್ರಮಾಣದಲ್ಲಿ ಮಾರುಕಟ್ಟೆ ಪ್ರವೇಶಿಸಿದೆ. ಮುಂದೆ ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು. 450 ಗ್ರಾಂಗೆ ಸುಮಾರು ರು. 125ರಿಂದ 130ರವರೆಗೆ ದರ ನಿಗದಿಯಾಗಲಿದೆ ಎನ್ನುತ್ತಾರೆ ಡಾ.ಸಿ.ವಿ.ರಾಜು.

ಏನೇನು ಬಳಕೆ?: ಫಿಶ್ ಪಾಟ್ಟಿಯನ್ನು ಬ್ರೆಡ್, ಬರ್ಗರ್, ಸ್ಯಾಂಡ್‌ವಿಚ್, ಫಿಜ್ಜಾ ಇತ್ಯಾದಿ ತಿನಿಸುಗಳ ಮಧ್ಯೆ ನೇರವಾಗಿ ಬಳಸಬಹುದು. ಅದೇ ರೀತಿ ಫಿಶ್ ಹಾಮ್‌ನ್ನು ಸಾಸ್‌ನಂತೆ ಕಟ್ಲೇಟ್, ಪಪ್ಸ್ ಜತೆ, ನೂಡಲ್ಸ್, ಫ್ರೈಡ್‌ರೈಸ್, ಪಲಾವ್‌ಗೆ ಮಿಕ್ಸ್ ಮಾಡಬಹುದು. ಈ ರೀತಿಯಲ್ಲಿ ದೇಶದ 38 ಕಡೆಗಳಲ್ಲಿ ಆಹಾರಧಾನ್ಯ ಹಾಗೂ ವಿವಿಧ ಮಾಂಸಗಳ ಮೌಲ್ಯವರ್ಧಿತ ಉತ್ಪನ್ನಗಳ ಸಂಶೋಧನೆ ನಡೆಯುತ್ತಿದೆ.

ರಾಜ್ಯದ ರಾಯಚೂರು, ಕೃಷಿ ವಿವಿಗಳಲ್ಲಿ ಆಹಾರ ಬೆಳೆಗಳಿಗೆ ಸಂಬಂಧಿಸಿ, ಚೆನ್ನೈ, ಮುಂಬೈ, ಬಿಜಾಪುರಗಳಲ್ಲಿ ಮಾಂಸಗಳ ಮೌಲ್ಯವರ್ಧಿತ ಉತ್ಪನ್ನಗಳ ಸಂಶೋಧನೆ ನಡೆಯುತ್ತಿದೆ.
ಮೀನಿನ ಮೌಲ್ಯವರ್ಧಿತ ಉತ್ಪನ್ನ ಸಂಶೋಧನೆ 12ನೇ ಪಂಚವಾರ್ಷಿಕ ಯೋಜನೆಯಲ್ಲಿ ಮಂಜೂರಾಗಿದ್ದು, 5 ವರ್ಷದ ಸಂಶೋಧನೆ ಇದಾಗಿದೆ. 2112ರಲ್ಲಿ ಆರಂಭವಾಗಿದ್ದು 2017ಕ್ಕೆ ಮುಕ್ತಾಯವಾಗಲಿದೆ. ಇದರಲ್ಲೇ ಇನ್ನಷ್ಟು ಸಂಶೋಧನೆ ಕೈಗೊಳ್ಳಬೇಕಾಗಿದೆ. ಬಳಿಕ ಸಮಗ್ರ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು.
- ಡಾ.ಸಿ.ವಿ.ರಾಜು
ಮೀನುಗಾರಿಕೆ ತಾಂತ್ರಿಕ ವಿದ್ಯಾಲಯದ ಸಹಪ್ರಾಧ್ಯಾಪಕ

- ಆತ್ಮಭೂಷಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.