ಸುದ್ದಿ ಸಂಕ್ಷೇಪ
ಅಡಕೆ ಕೊಳೆ ರೋಗ: ವಿಶೇಷ ಪ್ಯಾಕೇಜ್ಗೆ ಆಗ್ರಹ
ಮಂಗಳೂರು: ಮೇ ತಿಂಗಳಾಂತ್ಯದಲ್ಲಿ ಆರಂಭವಾದ ಮಳೆ ಜಿಲ್ಲೆಯಲ್ಲಿ ಇನ್ನೂ ಮುಂದುವರಿದಿದೆ. ಇದರಿಂದ ಅಡಕೆ ತೋಟಕ್ಕೆ ಔಷಧ ಸಿಂಪಡಿಸಲು ಸಾಧ್ಯವಾಗದೆ ವ್ಯಾಪಕವಾಗಿ ಕೊಳೆರೋಗ ತಟ್ಟಿದೆ. ಈ ಬಗ್ಗೆ ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಸಮಗ್ರ ಮಾಹಿತಿ ಕಲೆಹಾಕಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಬೇಕು. ರಾಜ್ಯ ಸರ್ಕಾರ ಅಡಕೆ ಬೆಳೆಗಾರರಿಗೆ ವಿಶೇಷ ಪ್ಯಾಕೆಜ್ ನೀಡಬೇಕು ಎಂದು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಆಗ್ರಹಿಸಿದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಎಲ್ಲ ಶಾಸಕರು, ಸಚಿವರು, ಸಂಸದರು ಸರ್ಕಾರಕ್ಕೆ ಒತ್ತಡ ತರಬೇಕೆಂದರು. ಈಗಾಗಲೇ ಕೊಳೆರೋಗದಿಂದ ಶೇ.50 ಫಸಲು ಹಾನಿ ಅಂದಾಜಿಸಲಾಗಿದೆ. ರೈತರಿಗೆ ಒಂದು ಎಕರೆ ಅಡಕೆ ತೋಟ ನಿರ್ವಹಣೆಗೆ 50-60 ಸಾವಿರದವರೆಗೆ ವೆಚ್ಚ ತಗಲುತ್ತದೆ. ಫಸಲು ಉತ್ತಮವಾಗಿದ್ದರೆ ಸರಾಸರಿ ರು. 1.25 ಲಕ್ಷ ಆದಾಯ ಬರುತ್ತದೆ. ಈ ಬಾರಿ ಅಧಿಕ ಮಳೆಯಿಂದ ಈ ಲೆಕ್ಕಾಚಾರವೆಲ್ಲ ತಲೆಕೆಳಗಾಗಿದೆ ಎಂದು ಹೇಳಿದರು. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಡಕೆ ಬೆಳೆಗೆ 80 ಸಾವಿರ ರೈತರಿಗೆ ಎಕರೆಗೆ ಸುಮಾರು 35 ಸಾವಿರದಂತೆ 141281 ಎಕರೆಗೆ 49,443.26 ಸಾಲ ನೀಡಿದೆ. ಅಡಕೆಗೆ ಕೊಳೆರೋಗದಿಂದ ಈ ಬಾರಿ ರೈತರಿಗೆ ಸಾಲ ಮರುಪಾವತಿ ಸುಲಭವಲ್ಲವೆಂದರು.
ಕೊಳೆರೋಗ ಆತಂಕ ಪರಿಹಾರ ಯತ್ನ: ಸಚಿವ ರಮಾನಾಥ ರೈ
ಮಂಗಳೂರು: ಜಿಲ್ಲೆಯಲ್ಲಿ ಅಡಕೆ ತೋಟದಲ್ಲಿ ಕಾಣಿಸಿದ ಕೊಳೆರೋಗದಿಂದ ಕೃಷಿಕರು ಆತಂಕದಲ್ಲಿರುವುದು ಗಮನಕ್ಕೆ ಬಂದಿದ್ದು, ಇದರ ಪರಿಹಾರಕ್ಕೆ ಸರ್ಕಾರ ಯತ್ನಿಸಲಿದೆ ಎಂದು ಅರಣ್ಯ ಮತ್ತು ಪರಿಸರ ಸಚಿವ ರಮಾನಾಥ ರೈ ಹೇಳಿದರು. ಸೋಮವಾರ ಇಲ್ಲಿ ತೋಟಗಾರಿಕೆ ಪಿತಾಮಹ ಡಾ.ಎಂ.ಎಚ್. ಮರಿಗೌಡ ಜನ್ಮದಿನಾಚರಣೆ ಪ್ರಯುಕ್ತ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಲ್ಲಿ 'ಗೇರುಬೆಳೆ ಪುನಶ್ಚೇತನ ಹಾಗೂ ಜೇನುಕೃಷಿ' ತರಬೇತಿ ಕಾರ್ಯಕ್ರಮ ಉದ್ಘಾಟಿಸಿ, ರೈತರ ಸಮಸ್ಯೆಯನ್ನು ರೈತರೇ ಪರಿಹರಿಸಬೇಕು. ಈ ಬಗ್ಗೆ ರೈತರಿಗಾದ ತೊಂದರೆಯನ್ನು ಸರ್ಕಾರದ ಗಮನಕ್ಕೆ ತರವಾಗುವುದು ಎಂದರು. ಜಿಲ್ಲೆಯಲ್ಲಿ ಈಗ ಬತ್ತದ ಕೃಷಿ ತೋಟಗಾರಿಕಾ ಬೆಳೆಗೆ ಪರಿವರ್ತನೆಯಾಗುತ್ತಿದೆ. ಬತ್ತದ ಬದಲು ಅಡಕೆ, ತೆಂಗು, ಗೇರು, ರಬ್ಬರ್, ಕಾಳುಮೆಣಸು, ಕೋಕೋ, ವೆನಿಲ್ಲಾ ಮುಂತಾದ ಆರ್ಥಿಕ ಬೆಳೆಯತ್ತ ರೈತರು ಮುಖಮಾಡಿದ್ದಾರೆ. ಸಣ್ಣ ಹಿಡುವಳಿದಾರರಿಗೆ ಬದುಕಲು ತೋಟಗಾರಿಕಾ ಬೆಳೆ ಅನಿವಾರ್ಯವಾಗಿದೆ ಎಂದರು.
ಆಶ್ರಮ ಹೆಸರಲ್ಲಿ ಹಣ ಸಂಗ್ರಹ ಜಾಲ: ನಾಲ್ವರು ವಶಕ್ಕೆ
ಸೋಮವಾರಪೇಟೆ: ಕೆಲವು ಆಶ್ರಮಗಳ ಹೆಸರಿನ ಕರಪತ್ರಗಳು ಹಾಗೂ ಅಂಗವಿಕಲರ ಫೋಟೊಗಳನ್ನು ತೋರಿಸಿ, ಮನೆಗಳಿಗೆ ತೆರಳಿ ಹಣ ಸಂಗ್ರಹಿಸುತ್ತಿದ್ದ ಬಾಲಕರ ಬಗ್ಗೆ ಅನುಮಾನಗೊಂಡ ಜಯಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ನಾಲ್ವರು ಬಾಲಕರನ್ನು ಸೋಮವಾರಪೇಟೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಹುಣಸೂರು ತಾಲೂಕಿನ ಬಿಜಾಪುರ ಕಾಲೊನಿಯ ವಿಜಯ್(10), ಮಣಿಕಂಠ(14), ವಿನೋಧ(11), ಬಿ.ಕೆ. ವಿನೋಧ(12) ಹಣ ಸಂಗ್ರಹಿಸುತ್ತಿದ್ದ ಬಾಲಕರು. ಯಡವನಾಡು, ಕಾರೆಕೊಪ್ಪ, ಹಾನಗಲ್, ಸೋಮವಾರಪೇಟೆ ಸೇರಿದಂತೆ ಅನೇಕ ಕಡೆಗಳಲ್ಲಿ ಕೆಲವು ದಿನಗಳಿಂದ ಹಣ ಸಂಗ್ರಹ ಮಾಡಿದ್ದಾರೆ. ಹುಣಸೂರು ತಾಲೂಕಿನ ವ್ಯಕ್ತಿಯೊಬ್ಬರು ಕರಪತ್ರಗಳನ್ನು ಕೊಟ್ಟು, ಹಣ ಸಂಗ್ರಹಿಸುವಂತೆ ಹೇಳಿದ್ದಾರೆ. 1 ಸಾವಿರ ಸಂಗ್ರಹ ಮಾಡಿದರೆ 150 ನೀಡುತ್ತಾರೆ. ಸಂಗ್ರಹಿಸಿದ ಹಣವನ್ನು ಎಲ್ಲಿಗೆ ಕೊಡುತ್ತಾರೆ ಎಂಬುದು ಗೊತ್ತಿಲ್ಲ. ಅಂದಾಜು ನೂರರಷ್ಟು ಬಾಲಕರು ಕೆಲಸ ಮಾಡುತ್ತಿದ್ದಾರೆ ಎಂದು ಠಾಣೆಯಲ್ಲಿರುವ ಬಾಲಕರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಬಾಲಕರು ನೀಡಿದ ದೂರವಾಣಿಗಳಿಗೆ ಸಂಪರ್ಕ ಮಾಡಲಾಗಿದ್ದು, ಸಂಬಂಧಪಟ್ಟ ವ್ಯಕ್ತಿಯನ್ನು ಠಾಣೆ ಹಾಜರಾಗುವಂತೆ ತಿಳಿಸಲಾಗಿದೆ. ಆ ವ್ಯಕ್ತಿ ಬಂದ ನಂತರ ವಿಚಾರಣೆ ನಡೆಸಲಾಗುವದು ಎಂದು ವೃತ್ತ ನಿರೀಕ್ಷಕ ಎಚ್.ಎನ್. ಸಿದ್ದಯ್ಯ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

