ದಕ್ಷಿಣ ಕನ್ನಡ

ಬಸ್ ಬಿದ್ದು ವ್ಯಕ್ತಿ ದುರ್ಮರಣ, 20ಕ್ಕೂ ಅಧಿಕ ಮಂದಿ ಗಾಯ

Published On :

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ಸೊಂದು 25 ಅಡಿ ಆಳಕ್ಕೆ ಉರುಳಿಬಿದ್ದು ಪ್ರಯಾಣಿಕರೊಬ್ಬರು ಮೃತಪಟ್ಟ ಘಟನೆ ರಾ.ಹೆ.75 ರ ತುಂಬೆಯಲ್ಲಿ ಗುರುವಾರ ಮುಂಜಾನೆ ನಡೆದಿದೆ.
 ಮೃತರನ್ನು ಬ್ರಹ್ಮಾವರ ನಿವಾಸಿ ಶೇಖರ್ ಶೆಟ್ಟಿ(60) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಸುಮಾರು 20 ಕ್ಕೂ ಅಧಿಕ ಮಂದಿಗೆ ಗಾಯಗಳಾಗಿದ್ದು, ತುಂಬೆ, ವೆನ್ಲಾಕ್ ಹಾಗೂ ಮಂಗಳೂರಿನ ಖಾಸಗಿ  ಆಸ್ಪತ್ರೆಗೆ ದಾಖಲಿಸಲಾಗಿದೆ.
 ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಸುಗಮ ಬಸ್ ಅಪಘಾತಕ್ಕೀಡಾಗಿದ್ದು, ಬಸ್‌ನಲ್ಲಿ ಅತಿಯಾದ ವಸ್ತುಗಳನ್ನು ಹೇರಿದ್ದೇ ಘಟನೆಗೆ ಕಾರಣವಾಗಿದೆ.
 ಬುಧವಾರ ರಾತ್ರಿ 9.30ಕ್ಕೆ ಬೆಂಗಳೂರಿನಿಂದ ಹೊರಟಿದ್ದ ಈ ಬಸ್ ಗುರುವಾರ ಮುಂಜಾನೆ 5.15 ರ ಹೊತ್ತಿಗೆ ತುಂಬೆಯ ಬಿ.ಎ. ಕಾಲೇಜು ಸಮೀಪದ ತಿರುವೊಂದರಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆ  ಬದಿಯ 25 ಅಡಿ ಆಳಕ್ಕೆ ಬಿದ್ದಿದೆ. ಘಟನೆಯ ತೀವ್ರತೆಗೆ ಗಂಭೀರ ಗಾಯಗೊಂಡ ಬ್ರಹ್ಮಾವರದ ಚೆಮ್ತಾರು ನಿವಾಸಿ ಶೇಖರ್ ಶೆಟ್ಟಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಅಸುನೀಗಿದ್ದಾರೆ. ಪ್ರಯಾಣಿಕರಾದ ಶೇಖರ್ ಶೆಟ್ಟಿ ಅವರ ಪತ್ನಿ ಗೌರಿ ಶೆಟ್ಟಿ, ದೀಪಾ, ಬಿ.ಕೆ. ನಾಗರಾಜ್ ಬೈಂದೂರು, ಪ್ರಕಾಶ್ ನಾಯಕ್ ಭಟ್ಕಳ, ಮಹೇಶ, ವಿಶ್ವರಾಜ, ರಾಮಕೃಷ್ಣ, ಮಂಗಳೂರು ಶಿವಭಾಗ್‌ನ ಹರೀಶ್, ರೇಖಾ, ಶಿವರಾಮ್ ಕುಂದಾಪುರ, ಉಡುಪಿಯ ಜ್ಯೋತಿ ಶೆಟ್ಟಿ, ಶಾಂತಿ, ಸಜಿಪಪಡುವಿನ ದೇವದಾಸ್, ಸತೀಶ್, ಮಂಗಳೂರು ನಿವಾಸಿ ರಾಘವೇಂದ್ರ ಹಾಗೂ ಇತರರನ್ನು ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದೆ.
 ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆ ನಡೆದ ತಕ್ಷಣವೇ ಸ್ಥಳಕ್ಕೆ ಆಗಮಿಸಿದ 108 ಆಂಬ್ಯುಲೆನ್ಸ್ ವಾಹನದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಸ್ ಮಾಲೀಕರ ವಿರುದ್ಧ ಆಕ್ರೋಶ: ಗಾಯಾಳುಗಳನ್ನು ವಿಚಾರಿಸದೆ ಇರುವ ಬಸ್ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
7 ಮಂದಿ ಮಾತ್ರ ಗಾಯಾಳುಗಳು: ಈ ನಡುವೆ ಒಂದೇ ಆಸ್ಪತ್ರೆಯಲ್ಲಿ ದಾಖಲಾದ 7 ಮಂದಿಯನ್ನು ಮಾತ್ರ ಘಟನೆಯಲ್ಲಿ ಗಾಯಾಳುಗಳೆಂದು ಬಂಟ್ವಾಳ ಗ್ರಾಮಾಂತರ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾದವರ ಬಗ್ಗೆ ಪೊಲೀಸರು ಪ್ರಾಥಮಿಕ ತನಿಖಾ ವರದಿಯಲ್ಲಿ ದಾಖಲಿಸಿಲ್ಲ.
  ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳುಗಳ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆ ಎಎಸ್‌ಐ ಅವರಲ್ಲಿ ವಿಚಾರಿಸಿದರೆ, 'ನೀವೇ ಕೇಳಿಕೊಳ್ಳಿ' ಎಂದು ಪ್ರತಿಕ್ರಿಯಿಸಿದ್ದಾರೆ.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.