ವಿರೋಧಿಗೂ ಒಳಿತುವ ಬಯಸುವಾತ ರಾಮನಿಗೆ ಪ್ರಿಯ: ರಾಘವೇಶ್ವರ ಶ್ರೀ
ವಿಟ್ಲ: ಜೀವನ ಏರಿಳಿತ ಮತ್ತು ತಿರುವು ಮುರುವುಗಳಿಂದ ತುಂಬಿರುತ್ತದೆ. 'ಸರ್ವೇ ಜನಾಃ ಸುಖಿನೋ ಭವಂತು' ಎಂಬ ಭಾವ ಪ್ರತಿಯೊಬ್ಬ ಜೀವಿಯಲ್ಲೂ ಇದ್ದರೆ ಜಗತ್ತಿಗೆ ಒಳಿತಾಗುತ್ತದೆ ಎಂದು ಹೊಸನಗರ ಶ್ರೀರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದ್ದಾರೆ.
ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದ ಜನಭವನದಲ್ಲಿ ನಡೆಯುತ್ತಿರುವ ದ್ವಿತೀಯ ರಾಮಕಥಾ ಸರಣಿಯ 4ನೇ ದಿನವಾದ ಬುಧವಾರ ಅವರು ಪ್ರವಚನ ನೀಡಿದರು.
ಒಬ್ಬಾತ ತನ್ನ ವಿರೋಧಿಗೂ ಒಳ್ಳಯದಾಗಲಿ ಎಂಬ ಭಾವದಿಂದಿದ್ದರೆ ರಾಮನಿಗೆ ಹತ್ತಿರವಾಗುತ್ತಾನೆ. ಜೊತೆಗೆ ಆತನಿಗೆ ಪ್ರಿಯನಾಗುತ್ತಾನೆ. ಈ ಸ್ಥಿತಿ ಶ್ರೀರಾಮಚಂದ್ರನನ್ನೂ ಬಿಟ್ಟಿಲ್ಲ ಎಂದು ಶ್ರೀಗಳು ವಿಶ್ಲೇಷಿಸಿದರು.
ಸೀತೆಯನ್ನು ಹುಡುಕುವ ಸುಗ್ರೀವನ ಗಡುವು ಮೀರುತ್ತದೆ. ತಿಂಗಳ ಬಳಿಕವೂ ಸೀತೆ ಸಿಗದೆ ಅಂಗದ, ಹನುಮಾದಿಗಳು ಚಿಂತಾಕ್ರಾಂತರಾಗಿದ್ದಾರೆ. ಅಂಗದನಿಗೆ ತನ್ನ ತಂದೆ ವಾಲಿಯನ್ನು ಕೊಂದ ರಾಮನ ಮೇಲೆ ಪರಮ ಭಕ್ತಿಯಿದ್ದರೆ, ಕೊಲ್ಲಿಸಿದ ಸುಗ್ರೀವನ ಮೇಲೆ ದ್ವೇಷವೂ ಉಂಟಾಯಿತು. ಅದಕ್ಕಾಗಿ ಆತನಂತೂ ಮತ್ತೆ ಸುಗ್ರೀವನ ಬಳಿ ತೆರಳಿ ಸಾಯುವುದಕ್ಕಿಂತ ಸಮುದ್ರದ ಕಿನಾರೆಯಲ್ಲೇ ಉಪವಾಸ ಮಾಡಿ ಸಾಯುವುದು ಒಳಿತು ಎಂದು ತೀರ್ಮಾನಿಸುತ್ತಾನೆ. ಕೆಲ ವಾನರರೂ ಅನುಸರಿಸುತ್ತಾರೆ ಎಂದು ಶ್ರೀಗಳು ಉಲ್ಲೇಖಿಸಿದರು.
ರೂಪಕದಲ್ಲಿ ಅಂಗದ ಮತ್ತು ಕೆಲ ಕಪಿಗಳು ಉಪವಾಸ ಮಾಡಿ ಆತ್ಮಹತ್ಯೆಗೆ ಯತ್ನಿಸುವ ದೃಶ್ಯವನ್ನು ಪ್ರದರ್ಶಿಸಲಾಯಿತು.
ಏನದ್ಭುತವೋ ಏನಚ್ಚರಿಯೋ.., ಕೃಷ್ಣಾಜಿನ ಘನನಾರುಮಡಿಯೊಳು.., ಅಂಬುಧಿಯು ತೋರುತಿದೆ ನಂಬುಗೆಯು ಸೋಲುತಿದೆ.. ಮೊದಲಾದ ಹಾಡುಗಳು, ಆ ಹಾಡುಗಳಿಗೆ ತಕ್ಕುದಾಗಿ ನೀರ್ನಳ್ಳಿ ಗಣಪತಿ ಅವರ ಚಿತ್ರಗಳು, ಅಶೋಕ ಸಿದ್ಧನಕಾಯಿ ಅವರು ಎಡಗೈಯನ್ನು ಮಾತ್ರ ಉಪಯೋಗಿಸಿ ಬರೆದ ವರ್ಣಚಿತ್ರಗಳು, ಗೋಪಿನಾಥ ಸಾಗರ ಅವರ ಥರ್ಮಾಕೋಲ್ ಆಕೃತಿಗಳ ಉಬ್ಬುಚಿತ್ರಗಳು ಜನಮನ ರಂಜಿಸಿದವು.
ಕುಮಾರಸ್ವಾಮಿ ವರ್ಮುಡಿ ಭಿಕ್ಷಾ ಸೇವೆ ನೆರವೇರಿಸಿದರು. ನವೀನ್ ಕುಮಾರ್ ಸೌಜಾನಿ ಮತ್ತು ನಿತಿನಪಟೇಲ್ ಕುಟುಂಬ ಪ್ರಾಯೋಜಕತ್ವ ವಹಿಸಿದ್ದರು. ಗೋಪಾಲಕೃಷ್ಣ ಭಟ್ ಪೆರುವಾಜೆ ಸಹಪ್ರಾಯೋಜಕತ್ವ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

