ನೀರಿಗೆ ಕೊಳೆತ ಮಾಂಸ ಹಾಕಿದರು, ಮನೆಯವರಿಗೆ ಹಿಂಸೆ ನೀಡಿದರು..!
ಮಂಗಳೂರು: 'ಯಾವುದೋ ದ್ವೇಷವಿಟ್ಟು, ನನ್ನ ಮನೆಯ ನೀರಿನ ಟ್ಯಾಂಕಿಗೆ ಕೊಳೆತ ಮಾಂಸ ಎಸೆದು, ಮನೆ ಮುಂದೆ ರಕ್ತ ಚೆಲ್ಲಿ, ಮಗನ ಮೇಲೆ ಬೈಕ್ ಹರಿಸಿ ಗಾಯಗೊಳಿಸುವ ಮೂಲಕ ಹಿಂಸೆ ನೀಡುತ್ತಿದ್ದಾರೆ. ದಯವಿಟ್ಟು ನಮಗೆ ರಕ್ಷಣೆ ಕೊಡಿ ಸರ್...'
ಇದು ಕೊಣಾಜೆ ನಿವಾಸಿ, ಏಳು ತಿಂಗಳ ಗರ್ಭಿಣಿ ಸುಮಿತ್ರಾ ಪೊಲೀಸ್ ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡ ಪರಿ.
ಭಾನುವಾರ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ದಲಿತರ ಕುಂದುಕೊರತೆ ಸಭೆಯಲ್ಲಿ ಸುಮಿತ್ರ ಅಳುತ್ತಲೇ ತಮ್ಮ ಅಹವಾಲು ಹೇಳಿದರು. ಇದನ್ನು ಆಲಿಸಿದ ಸಭೆ ಮತ್ತು ಪೊಲೀಸರು ಒಂದು ಕ್ಷಣ ದಂಗಾದರೆ, ಪೊಲೀಸ್ ಆಯುಕ್ತ ಮನೀಷ್ ಕರ್ಬಿಕರ್ ತಲೆ ತಗ್ಗಿಸಿ ಮೌನಗೊಂಡರು.
ದೂರಿನ ಹಿನ್ನೆಲೆ: ಮಂಗಳೂರು ವಿಶ್ವವಿದ್ಯಾಲಯದಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಇಲಾಖೆ ಸಹ ಉಪನ್ಯಾಸಕ ಡಾ. ಉಮೇಶ್ ನೈಕ್ ಹಾಗೂ ಗುಮಾಸ್ತನಾಗಿರುವ ಶ್ರೀಧರ್ ಪೂಜಾರಿ ನಡುವೆ 2 ವರ್ಷದಿಂದ ವ್ಯವಹಾರಿಕ ವಿಚಾರದಲ್ಲಿ ತಗಾದೆ ಇದ್ದು, ಈ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೇ ನೆಪವಾಗಿ ಇಟ್ಟುಕೊಂಡು ಶ್ರೀಧರ್ ಪೂಜಾರಿ ದ್ವೇಷ ಸಾಧಿಸುತ್ತಿದ್ದು, ವಿಶ್ವವಿದ್ಯಾಲಯದಲ್ಲಿ ಪ್ಲಂಬರ್ ಆಗಿ ಕೆಲಸ ಮಾಡುತ್ತಿರುವ ಹರೀಶ್ ಪೂಜಾರಿ ಮೂಲಕ ಶಾಲೆಗೆ ಹೋಗುತ್ತಿರುವ ಸಂದರ್ಭ ಮಗನ ಮೇಲೆ ಬೈಕ್ ಹರಿಸಿ ಗಾಯಗೊಳಿಸಿದ್ದಾನೆ. ಈ ಕುರಿತು ದೂರು ನೀಡಿದ್ದು, ಕೊಣಾಜೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಉಮೇಶ್ ಪತ್ನಿ ಸುಮಿತ್ರಾ ಮಾತನಾಡಿ, ತಾನು 7 ತಿಂಗಳ ಗರ್ಭಿಣಿಯಾಗಿದ್ದು, 28 ರಂದು ರಾತ್ರಿ ನೀರಿನ ಟ್ಯಾಂಕಿಗೆ ಕೊಳೆತ ಮಾಂಸ, ಕೆಸರು ಹಾಕಿದ ಪರಿಣಾಮ ಅಲರ್ಜಿಯಿಂದ ದೈಹಿಕವಾಗಿ ತೊಂದರೆಗೊಳಗಾಗಿದ್ದೇನೆ. ಆ. 21 ರಂದು ಬೆಳಗ್ಗೆ ಮನೆಯ ಸುತ್ತ ರಕ್ತ ಚೆಲ್ಲುವ ಮೂಲಕ ಬೆದರಿಸುತ್ತಿದ್ದಾರೆ. ಇವರು ನೀಡುತ್ತಿರುವ ಹಿಂಸೆಯ ಕುರಿತು ಕೊಣಾಜೆ ಠಾಣೆಯಲ್ಲಿ ಒಟ್ಟು 22 ಪ್ರಕರಣಗಳು ದಾಖಲಾಗಿದೆ. ಪೊಲೀಸರು ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದ ಕಾರಣ ಮತ್ತಷ್ಟು ಹಿಂಸಿಸುತ್ತಿದ್ದಾರೆ. ಜೀವ ಬೆದರಿಕೆ ಇದೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿ ಪೊಲೀಸ್ ಆಯುಕ್ತ ಮನೀಷ್ ಕರ್ಬಿಕರ್, ವೈಯಕ್ತಿಕವಾಗಿ ಪ್ರಕರಣವನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದರು.
ಮೂಲ್ಕಿಯ ಮಂಜುನಾಥ್ ಮಾತನಾಡಿ, ನಗರದಲ್ಲಿ ಕಾರ್ಮಿಕರನ್ನು ಗೂಡ್ಸ್ ಗಾಡಿಯಲ್ಲಿ ತುಂಬಿಸಿಕೊಂಡು ಹೋಗುತ್ತಿದ್ದು, ಇದರಿಂದ ಕೆಲವು ಅಪಘಾತಗಳು ಸಂಭವಿಸಿದೆ. ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಇದಕ್ಕೆ ಉತ್ತರಿಸಿದ ಪೊಲೀಸ್ ಆಯುಕ್ತರು, ಗೂಡ್ಸ್ ಗಾಡಿಯಲ್ಲಿ ಕಾರ್ಮಿಕರನ್ನು ಕಾರ್ಮಿಕರನ್ನು ಕರೆದುಕೊಂಡು ಹೋಗುವುದು ಅಪರಾಧ. ಇಂಥ ಪ್ರಕರಣ ಕಂಡು ಬಂದರೆ ತಕ್ಷಣ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ, ಎಸ್ಎಂಎಸ್ ಕಳುಹಿಸಿದರೂ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

