ದಕ್ಷಿಣ ಕನ್ನಡ

ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿ ಮದ್ರಸ ಶಿಕ್ಷಕ ಸೆರೆ

Published On :

ಮಂಗಳೂರು: ಆರರ ಹರೆಯದ ಬಾಲಕಿಗೆ ಮದ್ರಸ ಅಧ್ಯಾಪಕನೊಬ್ಬ ಲೈಂಗಿಕ ಕಿರುಕುಳ ನೀಡಿದ ಘಟನೆ ಮಂಗಳೂರು ತಾಲೂಕಿನ ಬೋಳಿಯಾರಿನಲ್ಲಿ ಬಯಲಿಗೆ ಬಂದಿದ್ದು, ಆರೋಪಿಯನ್ನು ಭಾನುವಾರ ಬಂಧಿಸಿದ ಬಗ್ಗೆ ವರದಿಯಾಗಿದೆ.
ಬೋಳಿಯಾರ್ ಮದ್ರಸದಲ್ಲಿ ಶಿಕ್ಷಕನಾಗಿರುವ ಅಬ್ದುಲ್ ಖಾದರ್ ಯಮಾನಿ ಎಂಬಾತನೇ ಬಂಧಿತ ಆರೋಪಿ.
ಮೂಲತಃ ಪೊಯ್ಯತ್ತಬೈಲ್ ನಿವಾಸಿಯಾದ ಈತ 3 ತಿಂಗಳ ಹಿಂದೆ ಬೋಳಿಯಾರ್ ಮದ್ರಸಕ್ಕೆ ಅಧ್ಯಾಪಕನಾಗಿ ಆಗಮಿಸಿದ್ದನು. ರಂಜಾನ್ ಉಪವಾಸ ಆರಂಭವಾಗುವ ಮುನ್ನವೇ ಮದ್ರಸಕ್ಕೆ ಬರುತ್ತಿದ್ದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಲು ಪ್ರಾರಂಭಿಸಿದ್ದ. ಆರಂಭದಲ್ಲಿ ಈತನಿಗೆ ಬೆದರಿದ ಬಾಲಕಿ, ಕೆಲ ದಿನಗಳ ಬಳಿಕ ನೈಜ ವಿಷಯವನ್ನು ತನ್ನ ಸಹಪಾಠಿಗಳಲ್ಲಿ ಹಂಚಿಕೊಂಡಿದ್ದಳು. ಈ ಮಾಹಿತಿ ಆಕೆ ಕಲಿಯುತ್ತಿರುವ ಶಾಲೆಯ ಶಿಕ್ಷಕರ ಗಮನಕ್ಕೆ ಬಂದಿತ್ತು. ಅವರು ಬಾಲಕಿಯನ್ನು ಕರೆದು ವಿಚಾರಿಸಿದ್ದು, ಆಗ ಆಕೆ ನಿಜ ವಿಷಯ ತಿಳಿಸಿದ್ದಳು.
ಇದರಿಂದ ಜಾಗೃತರಾದ ಶಿಕ್ಷಕರು ಬಾಲಕಿಯ ತಾಯಿಯನ್ನು ಕರೆದು ವಿಚಾರಿಸಿ ದೂರು ನೀಡುವಂತೆ ಹೇಳಿದ್ದರು. ಬಾಲಕಿ ತಾಯಿ ಮೊದಲು ಧಾರ್ಮಿಕ ಮುಖಂಡರಿಗೆ ದೂರು ನೀಡಿದ್ದರು. ಅವರು ಯಾವುದೇ ಕ್ರಮ ಕೈಗೊಳ್ಳದೆ ಕೇವಲ ಸಭೆ ನಡೆಸಿ ಮುಂದೆ ಜಾಗ್ರತೆಯಿಂದ ಇರುವಂತೆ ಎಚ್ಚರಿಕೆ ನೀಡಿದ್ದರಲ್ಲದೆ, ತಾಯಿಯ ದೂರಿಗೆ ಸರಿಯಾಗಿ ಪ್ರತಿಕ್ರಿಯಿಸದೆ ಸಭೆ ಮುಗಿಸಿ ಪ್ರಕರಣ ಮುಕ್ತಾಯಗೊಳಿಸುವ ಪ್ರಯತ್ನದಲ್ಲಿದ್ದರು ಎನ್ನಲಾಗಿದೆ.
ಅಲ್ಲಿ ನ್ಯಾಯ ದೊರಕದ ಕಾರಣ ಬಾಲಕಿ ತಾಯಿ ರಹಮತ್‌ಬಾನು ಕೊಣಾಜೆ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿ ಮದ್ರಸ ಶಿಕ್ಷಕನ ಪರ ಹಾಗೂ ವಿರುದ್ಧ ಮುಸ್ಲಿಂ ಪಂಗಡಗಳು ಠಾಣೆ ಎದುರು ಜಮಾಯಿಸಿದ್ದರು. ಬಳಿಕ ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿ ಶಿಕ್ಷಕನನ್ನು ಬಂಧಿಸಿದರು. ಬಂಧಿತನನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿದ್ದು, ಸೆ.7ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಇದೇ ವೇಳೆ ಬಾಲಕಿಯನ್ನು ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರುಪಡಿಸಲಾಗಿದ್ದು, ಆರೋಪಿ ತನಗೆ ಲೈಂಗಿಕ ಕಿರುಕುಳ ನೀಡಿರುವುದನ್ನು ವಿಚಾರಣೆಯಲ್ಲಿ ತಿಳಿಸಿದ್ದಾಳೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.