ಬೆಳ್ತಂಗಡಿಯಲ್ಲಿ ಇಲಿ ಜ್ವರಕ್ಕೆ ಮಹಿಳೆ ಬಲಿ
ಉಪ್ಪಿನಂಗಡಿ: ಇಲಿ ಜ್ವರಕ್ಕೆ ಮಹಿಳೆ ಬಲಿಯಾದ ಘಟನೆ ಬೆಳ್ತಂಗಡಿ ತಾಲೂಕು ಬಾರ್ಯ ಗ್ರಾಮದ ಪಿಲಿಗೂಡು ಪೆರಿಯೊಟ್ಟು ಎಂಬಲ್ಲಿ ಶನಿವಾರ ರಾತ್ರಿ ನಡೆದಿದೆ.
ಪೆರಿಯೊಟ್ಟು ನಿವಾಸಿ ವಾಮನ ನಾಯ್ಕ್ ಎಂಬವರ ಪತ್ನಿ ಪ್ರೇಮಲತಾ (33) ಮೃತರು.
ಕಳೆದ ಶುಕ್ರವಾರ ಅನಾರೋಗ್ಯದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರನ್ನು ಅದೇ ದಿನ ರಾತ್ರಿ ಅನಾರೋಗ್ಯ ಬಿಗಡಾಯಿಸಿದ ಹಿನ್ನೆಲೆಯಲ್ಲಿ ಮಂಗಳೂರು ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ತಡರಾತ್ರಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಅವರು ಇಲಿ ಜ್ವರ ಬಾಧಿತರಾಗಿ ಕಿಡ್ನಿ ವೈಫಲ್ಯತೆಗೆ ಸಿಲುಕಿದ್ದರು ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆಂದು ಮೃತರ ಕುಟುಂಬದವರು ಮಾಹಿತಿ ನೀಡಿದ್ದಾರೆ. ಮೃತರಿಗೆ ಹತ್ತು ವರ್ಷದ ಪುತ್ರ ಹಾಗೂ ಪತಿ ಇದ್ದಾರೆ.
ತಜ್ಞ ವೈದ್ಯರು ಬರಲಿಲ್ಲ- ಆರೋಪ: ಪುತ್ತೂರಿನ ಆಸ್ಪತ್ರೆಯಲ್ಲಿ ಪ್ರೇಮಲತಾ ಅವರ ಆರೋಗ್ಯ ಪರಿಸ್ಥಿತಿ ಬಿಗಡಾಯಿಸಿದೆ ಎಂದು ತಿಳಿಸಿ, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲು ಸೂಚಿಸುತ್ತಿದ್ದಂತೆ ಅವರ ಪತಿ ಮತ್ತು ಸ್ಥಳೀಯರು ಕೂಡಲೆ ಶುಕ್ರವಾರ ತಡರಾತ್ರಿಯೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಆದರೆ ಪ್ರಕರಣದ ತಜ್ಞ ವೈದ್ಯರು ರಜೆಯಲಿದ್ದಾರೆಂಬ ಕಾರಣ ನೀಡಿ ರೋಗಿಯನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಯಿತು. ತಜ್ಞ ವೈದ್ಯರು ಶನಿವಾರ ಮಧ್ಯಾಹ್ನ 1.30ರ ಸುಮಾರಿಗೆ ಭೇಟಿ ನೀಡಿ ಪರೀಕ್ಷಿಸಿದ್ದಾರೆ. ಬಳಿಕ ರಾತ್ರಿ ಆಕೆ ಮೃತಪಟ್ಟರೆಂದು ತಿಳಿಸಲಾಗಿದೆ.
ರೋಗ ಬಿಗಡಾಯಿಸಿದ್ದರೂ ತಜ್ಞ ವೈದ್ಯರು ಸಕಾಲಕ್ಕೆ ಸೇವೆ ನೀಡದಿರುವುದೇ ಸಾವಿಗೆ ಕಾರಣವೆಂದು ಮೃತರ ಕುಟುಂಬದವರು ಆರೋಪಿಸಿದ್ದಾರೆ.
ಪ್ರಕರಣ ತನಿಖೆಗೆ ಆಗ್ರಹ
ಪ್ರೇಮಲತಾ ಅವರನ್ನು ಆರೋಗ್ಯ ಬಿಗಡಾಯಿಸಿದ ಸ್ಥಿತಿಯಲ್ಲಿ ಮಧ್ಯರಾತ್ರಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರೂ ಬರೋಬ್ಬರಿ 14 ಗಂಟೆ ತಡವಾಗಿ ತಜ್ಞ ವೈದ್ಯರು ಭೇಟಿ ನೀಡಿ ಪರೀಕ್ಷಿಸಿದ್ದಾರೆ ಎಂಬ ಮೃತರ ಕುಟುಂಬ ಸದಸ್ಯರ ಆರೋಪ ನಿಜವಾಗಿದ್ದರೆ ಅದು ನಿರ್ಲಕ್ಷದ ಪರಮಾವಧಿ.
ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಮನೋಹರ್ ಶೆಟ್ಟಿ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದ ತಜ್ಞ ವೈದ್ಯರು ರಜೆಯಲಿದ್ದರೆ, ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಾಗಿರುವುದು ಆಸ್ಪತ್ರೆಯವರ ಕರ್ತವ್ಯ.
ವ್ಯವಸ್ಥೆ ಕಲ್ಪಿಸಲು ಆಗದಿದ್ದರೆ ದಾಖಲಿಸಿಕೊಳ್ಳುವ ಮೊದಲೇ ಬದಲಿ ಆಸ್ಪತ್ರೆಗೆ ಕಳುಹಿಸಲು ಕ್ರಮ ಕೈಗೊಳ್ಳಬೇಕಾಗಿತ್ತು ಎಂದ ಅವರು, ಈ ಆರೋಪದ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ತಕ್ಷಣವೇ ಪ್ರಕರಣವನ್ನು ತನಿಖೆಗೆ ಒಳಪಡಿಸಿ, ಪ್ರೇಮಲತಾ ಆಸ್ಪತ್ರೆಗೆ ದಾಖಲಾದ ಬಳಿಕದ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಕಠಿಣ ಕ್ರಮ ಜರುಗಿಸಬೇಕು ಎಂದು ಅಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

