ವರದಕ್ಷಿಣೆ ಕಿರುಕುಳ, ಜೀವ ಬೆದರಿಕೆ: ದೂರು ದಾಖಲು
ಉಪ್ಪಿನಂಗಡಿ: ಹೆರಿಗೆ ಬಳಿಕ ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿಯಲ್ಲಿದ್ದ ಪತ್ನಿಯನ್ನು ವರದಕ್ಷಿಣೆ ಹಣಕ್ಕಾಗಿ ಪೀಡಿಸಿ, ಪತ್ನಿಯ ತಂದೆಯನ್ನು ಕೊಲೆ ಮಾಡುವುದಾಗಿ ಜೀವ ಬೆದರಿಕೆಯೊಡ್ಡಿದ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೌಕ್ರಾಡಿ ಗ್ರಾಮದ ಪೊಟ್ಲಡ್ಕ ಮನೆ ನಿವಾಸಿ ಅದಂ ಎಂಬವರ ಪುತ್ರಿ ರಮ್ಲತ್ (23) ಎಂಬಾಕೆಯನ್ನು ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಅಬೂಬಕ್ಕರ್ ಎಂಬವರ ಪುತ್ರ ಇಬ್ರಾಹಿಂ ಯಾನೆ ಅಶ್ರಫ್ ಎಂಬಾತನಿಗೆ 13.1.11ರಂದು ವಿವಾಹ ಮಾಡಿಕೊಡಲಾಗಿತ್ತು. ಮದುವೆ ಸಂದರ್ಭ 12 ಪವನ್ ಚಿನ್ನಾಭರಣ, ರು. 95 ಸಾವಿರ ವರದಕ್ಷಿಣೆ ನೀಡಲಾಗಿತ್ತು. ಇದೀಗ ರಮ್ಲತ್ಗೆ ಹೆರಿಗೆ ಬಳಿಕ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದರು. ಅದರಂತೆ ತವರು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಭಾನುವಾರ ರಾತ್ರಿ ಅಶ್ರಫ್ ತನ್ನ ಸೋದರ ಮಾವ ಇಸುಬು, ಮತ್ತು ಸಂಬಂಧಿ ಹಮೀದ್ ಜತೆ ಆಗಮಿಸಿ, ರು. ಒಂದು ಲಕ್ಷ ವರದಕ್ಷಿಣೆ ಕೊಡಬೇಕು, ಇಲ್ಲವಾದರೆ ತಂದೆಯನ್ನು ಕೊಂದು ಹಾಕುವುದಾಗಿ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ರಮ್ಲತ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಉಪ್ಪಿನಂಗಡಿ ಪೊಲೀಸರು ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಬ್ಯಾಟರಿ ಕಳವು: ಓರ್ವ ಸೆರೆ
ಉಪ್ಪಿನಂಗಡಿ: 34ನೇ ನೆಕ್ಕಿಲಾಡಿ ಗ್ರಾಮದಲ್ಲಿ ಅಳವಡಿಸಲಾಗಿದ್ದ ಸೋಲಾರ್ ಬೀದಿ ದೀಪಗಳ ಬ್ಯಾಟರಿಯನ್ನು ಹಾಡಹಗಲೇ ಕಳವು ಮಾಡಿದ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ದಸ್ತಗಿರಿ ಮಾಡಿದ್ದು, ಕಳವುಗೈದ ಬ್ಯಾಟರಿಯನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿ ವಿಟ್ಲದ ದಿನೇಶ್ ಎಂದು ತಿಳಿಯಲಾಗಿದೆ. ಪ್ರಕರಣದ ಇನ್ನೋರ್ವ ಆರೋಪಿ ರಮೇಶ್ ತಲೆಮರೆಸಿಕೊಂಡಿದ್ದಾನೆ. ಉಪ್ಪಿನಂಗಡಿ ಪೊಲೀಸರಿಂದ ತನಿಖೆ ನಡೆಯುತ್ತಿದೆ.
ಬೈಕ್ ಡಿಕ್ಕಿ: ಪಾದಚಾರಿ ಗಂಭೀರ
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಕೌಕ್ರಾಡಿ ಗ್ರಾಮದ ನೆಲ್ಯಾಡಿ ಎಂಬಲ್ಲಿ ಬೈಕ್ ಡಿಕ್ಕಿಯಾಗಿ ಪಾದಾಚಾರಿ ಚೀಂಕ್ರ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೈಕ್ ಸವಾರ ಜನಾರ್ದನ ಎಂಬವರ ವಿರುದ್ಧ ಕೇಸು ದಾಖಲಾಗಿದೆ. ಪುತ್ತೂರು ಟ್ರಾಫಿಕ್ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವಿವಿ ಬ್ಯಾಡ್ಮಿಂಟನ್ ಪಂದ್ಯಾವಳಿ ಉದ್ಘಾಟನೆ
ಬೆಳ್ತಂಗಡಿ: ಕ್ರೀಡಾಳುಗಳು ನಿರಂತರ ಶ್ರಮ ಪ್ರಯತ್ನದಿಂದ ತಪ್ಪುಗಳನ್ನು ತಿದ್ದಿಕೊಳ್ಳಬೇಕು ಎಂದು ಎಸ್ಡಿಎಂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಬಿ. ಯಶೋವರ್ಮ ಹೇಳಿದರು. ಅವರು ಸೋಮವಾರ ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ನಡೆದ ಪುರುಷರ ಮತ್ತು ಮಹಿಳೆಯರ ಮಂಗಳೂರು ವಿವಿ ಅಂತರ್ ಬ್ಯಾಡ್ಮಿಂಟನ್ ಪಂದ್ಯಾಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೋಸ ಮಾಡಿ ಗೆಲ್ಲುವುದಕ್ಕಿಂತ ಸಜ್ಜನಿಕೆಯ ಸೋಲೇ ಉತ್ತಮ. ಈಗಾಗಲೇ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕ್ರೀಡಾ ಹಾಸ್ಟೆಲ್ ಉದ್ಘಾಟನೆಗೆ ಸಿದ್ಧವಾಗಿದ್ದು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಕ್ರೀಡಾ ಹಾಸ್ಟೆಲ್ ನಿರ್ಮಿಸುವ ಚಿಂತನೆಯಿದೆ ಎಂದರು.
ಶಾಸಕ ಕೆ. ವಸಂತ ಬಂಗೇರ ಪಂದ್ಯಾಟವನ್ನು ಉದ್ಘಾಟಿಸಿದರು. ಮಂಗಳೂರು ವಿವಿ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಎಚ್. ನಾಗಲಿಂಗಪ್ಪ ಹಾಗೂ ಬ್ರಹ್ಮಾವರ ಎಸ್ಎಂಎಸ್ ಕಾಲೇಜಿನ ಕ್ರೀಡಾ ಸಂಘದ ಕಾರ್ಯದರ್ಶಿ ಚಂದ್ರಶೇಖರ್ ಹೆಗ್ಡೆ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಎಸ್ಡಿಎಂ ಕ್ರೀಡಾ ಸಂಘದ ಕಾರ್ಯದರ್ಶಿ ಬಾಲಭಾಸ್ಕರ್ ಸ್ವಾಗತಿಸಿದರು. ಉಪನ್ಯಾಸಕ ಡಾ.ಬಿ.ಎ. ಕುಮಾರ ಹೆಗ್ಡೆ ನಿರ್ವಹಿಸಿ, ಶಾರದಾ ಬಾರ್ಕೂರು ವಂದಿಸಿದರು. ವಿವಿಯ ದ.ಕ., ಉಡುಪಿ, ಕೊಡಗು ಜಿಲ್ಲೆಯ 32 ಕಾಲೇಜುಗಳು ಭಾಗವಹಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

