ದಾರಿ ದೀಪ ಸಮಸ್ಯೆ, ಪಡಿತರ ಚೀಟಿ ಅವ್ಯವಸ್ಥೆ: ನ.ಪಂ. ಸಭೆಯಲ್ಲಿ ತೀವ್ರ ಚರ್ಚೆ
ಮೂಲ್ಕಿ: ದಾರಿದೀಪ ಸಮಸ್ಯೆ, ಪಡಿತರ ಚೀಟಿಯ ಅವ್ಯವಸ್ಥೆ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿನ ಹಲವು ಸಮಸ್ಯೆಗಳು ಮೂಲ್ಕಿ ನಗರ ಪಂಚಾಯಿತಿ ಸಭಾಭವನದಲ್ಲಿ ನಗರ ಪಂಚಾಯಿತಿ ಅಧ್ಯಕ್ಷ ಶಶಿಕಾಂತ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರಗಿದ ಮೂಲ್ಕಿ ನಗರ ಪಂಚಾಯಿತಿನ ಸಾಮಾನ್ಯ ಸಭೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಯಿತು.
ಮೂಲ್ಕಿ ನಗರ ಪಂಚಾಯಿತಿ ವ್ಯಾಪ್ತಿಯಲ್ಲಿ ದಾರಿ ದೀಪದ ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರರು ಪಂಚಾಯಿತಿ ಸದಸ್ಯರ ಮಾತಿಗೆ ಬೆಲೆ ನೀಡುತ್ತಿಲ್ಲ ಎಂದು ದೂರಿದ ವಿಪಕ್ಷ ಸದಸ್ಯೆ ವಂದನಾ ಕಾಮತ್ಗೆ ಪ್ರತಿಕ್ರಿಯಿಸಿದ ಅಧ್ಯಕ್ಷ ಶಶಿಕಾಂತ್ ಶೆಟ್ಟಿ ಈ ಬಗ್ಗೆ ಗುತ್ತಿಗೆದಾರರನ್ನು ಕರೆಸಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.
ಎಪಿಎಲ್ ಪಡಿತರ ಚೀಟಿಯವರಿಗೆ ಗ್ಯಾಸ್ ಸಂಪರ್ಕವಿಲ್ಲದಿದ್ದರೂ ಸೀಮೆ ಎಣ್ಣೆ ನೀಡುತ್ತಿಲ್ಲ ಎಂದು ಸದಸ್ಯೆ ವಿಮಲಾ ದೂರಿದರು.
ಹೊಸ ಪಡಿತರ ಕಾರ್ಡ್ಗೆ ವಿದ್ಯುತ್ ಬಿಲ್ ಕೇಳುತ್ತಿದ್ದು, ಬಾಡಿಗೆಗೆ ಇರುವವರಿಗೆ ಮತ್ತು ಮನೆಯ ಮಾಲೀಕನಿಗೆ ಒಂದೇ ಮೀಟರ್ ವ್ಯವಸ್ಥೆ ಇರುವುದು ಸಮಸ್ಯೆಗೆ ಕಾರಣವಾಗುತ್ತಿದೆ. ಇದನ್ನು ಸರಿಪಡಿಸುವಂತೆ ಅವರು ಸಭೆಯಲ್ಲಿ ಒತ್ತಾಯಿಸಿದರು.
ಮೂಲ್ಕಿಯಲ್ಲಿರುವ ಸಮುದಾಯ ಆರೋಗ್ಯ ಕೇಂದ್ರವು ಸಮಸ್ಯೆಗಳ ಬೀಡಾಗಿದೆ. ಶುಚಿತ್ವದ ಕೊರತೆಯನ್ನು ಎದುರಿಸುತ್ತಿದೆ ಎಂದ ಅಧ್ಯಕ್ಷರು ಆಸ್ಪತ್ರೆಯ ಸಿಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಆಸ್ಪತ್ರೆಯು ಜಿಲ್ಲಾ ಪಂಚಾಯಿತಿ ಆಡಳಿತದಲ್ಲಿದ್ದು ಮೂಲ ಸೌಕರ್ಯಕ್ಕೆ ಈಗಾಗಲೇ ರು. 18 ಲಕ್ಷ ಅನುದಾನ ಮಂಜೂರಾಗಿದೆ. ರಸ್ತೆ ನಿರ್ಮಾಣಕ್ಕೆ ರು. 5 ಲಕ್ಷ ಮಂಜೂರಾಗಿದ್ದು, ಕೂಡಲೇ ಶುಚಿತ್ವದ ಕಾರ್ಯ ನಡೆಯಲಿದೆ. ಸಿಬ್ಬಂದಿಯ ಕೊರತೆಯಿದ್ದು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಸಿಬ್ಬಂದಿ ಸುರೇಶ್ ಬಾಬು ತಿಳಿಸಿದರು.
ಮುಖ್ಯಾಧಿಕಾರಿ ಹರಿಶ್ಚಂದ್ರ ಪಿ. ಸಾಲ್ಯಾನ್ ಕಾರ್ಯಕಲಾಪ ನಡೆಸಿಕೊಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

